City Lights ಚಿತ್ರದ 4ನೇ ಹಾಡು ಬಿಡುಗಡೆಯಾಗಿದೆ. ವಿನಯ್ ರಾಜ್‌ಕುಮಾರ್ ಈ ಹಾಡನ್ನು ಮೊದಲು ತಮ್ಮ ತಾಯಿಗೆ ಕೇಳಿಸಿದ್ದಾಗಿ ಹೇಳಿಕೊಂಡಿದ್ದಾರೆ. ಹಾಗಾದರೆ ‘ಸಿಟಿ ಲೈಟ್ಸ್‌’ನ ಈ ಪ್ರೇಮಗೀತೆಯಲ್ಲಿ ಅಂಥದ್ದೇನು ವಿಶೇಷ? ಸಿನಿಮಾ ಹಾಗೂ ಹಾಡಿನ ಸಂಪೂರ್ಣ ಕಥೆ ಇಲ್ಲಿದೆ.

‘ಸಲಗ’ ಹಾಗೂ ‘ಭೀಮ’ ಸಿನಿಮಾಗಳ ಯಶಸ್ಸಿನ ಬಳಿಕ ನಿರ್ದೇಶನದಲ್ಲಿ ದುನಿಯಾ ವಿಜಯ್ ಮತ್ತೊಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ವಿನಯ್ ರಾಜ್‌ಕುಮಾರ್ ಹಾಗೂ ಮೋನಿಷಾ ಅಭಿನಯದ ‘ಸಿಟಿ ಲೈಟ್ಸ್‌’ ಸಿನಿಮಾ ಸೆಪ್ಟೆಂಬರ್ 18ರಂದು ತೆರೆಗೆ ಬರಲು ಸಜ್ಜಾಗಿದೆ. ಚಿತ್ರದ ಬಿಡುಗಡೆಗೂ ಮುನ್ನ ನಾಲ್ಕನೇ ಹಾಡು ಬಿಡುಗಡೆಯಾಗಿದ್ದು, ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

‘ಅವರಿವರ ಮಾತು ಕೇಳಿ ಪ್ರೀತಿ ಕಳೆದುಕೊಳ್ಳಬೇಡಿ... ಪ್ರೀತಿ ಅಪರೂಪ ಅದನ್ನು ಕಳೆದುಕೊಳ್ಳಬೇಡಿ’ ಎಂಬ ಸಾಲುಗಳ ಮೂಲಕ ಸಾಗುವ ಈ ಪ್ರೇಮಗೀತೆ, ಪ್ರೀತಿಯ ಸೊಗಡಿನ ಜೊತೆಗೆ ಬದುಕಿನ ನೈಜತೆಯನ್ನು ಕಟ್ಟಿಕೊಡುತ್ತದೆ. ವಿಶೇಷವೆಂದರೆ, ಬೆಂಗಳೂರಿಗೆ ದೂರದ ಊರುಗಳಿಂದ ಬಂದು ತಮ್ಮದೇ ಬದುಕು ಕಟ್ಟಿಕೊಂಡಿರುವ ನೈಜ ಜೋಡಿಗಳ ಫೋಟೋಗಳನ್ನು ಬಳಸಿಕೊಂಡು ಹಾಡನ್ನು ರೂಪಿಸಲಾಗಿದೆ.

ಯುವ ಕಲಾವಿದರಾದ ಸಿದ್ದು ಮೂಲಿಮನಿ, ಪಾಯಲ್ ಚಂಗಪ್ಪ ಹಾಗೂ ಸುಧಾಕರ್ ಗೌಡ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚರಣ್ ರಾಜ್ ಸಂಗೀತ ಸಂಯೋಜಿಸಿರುವ ಈ ಗೀತೆಗೆ ನಾಗಾರ್ಜುನ ಶರ್ಮಾ ಸಾಹಿತ್ಯ ಬರೆದಿದ್ದು, ಖ್ಯಾತ ಗಾಯಕ ಅಂತೋಣಿ ದಾಸ್ ಧ್ವನಿ ನೀಡಿದ್ದಾರೆ.

‘ಯುವ ಕಲಾವಿದರೇ ಚಿತ್ರರಂಗದ ಭವಿಷ್ಯ’

ಹಾಡಿನ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ದುನಿಯಾ ವಿಜಯ್, ಮುಂದಿನ ದಿನಗಳಲ್ಲಿ ಯುವ ಕಲಾವಿದರೇ ಕನ್ನಡ ಚಿತ್ರರಂಗವನ್ನು ಮುನ್ನಡೆಸಲಿದ್ದಾರೆ ಎಂದು ಅಭಿಪ್ರಾಯಪಟ್ಟರು. ಹಾಡಿನಲ್ಲಿ ಕಾಣಿಸುವ ಜೋಡಿಗಳು ತಮ್ಮದೇ ಜೀವನದಲ್ಲಿ ಪ್ರೀತಿಯನ್ನು ಉಳಿಸಿಕೊಂಡು ಬಂದವರು. ಅವರೇ ಈ ಹಾಡಿಗೆ ಸ್ಫೂರ್ತಿ ಎಂದು ವಿಜಯ್ ಹೇಳಿದ್ದಾರೆ. ಪ್ರೀತಿಯ ಜೊತೆಗೆ ತಂದೆ-ತಾಯಿಯ ಮಹತ್ವವನ್ನೂ ಹಾಡಿನಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಅಪ್ಪ-ಅಮ್ಮನ ಫೋಟೋವನ್ನು ಹಾಡಿನಲ್ಲಿ ಬಳಸಿರುವುದಕ್ಕೂ ಇದೇ ಕಾರಣ ಎಂದು ಅವರು ತಿಳಿಸಿದ್ದಾರೆ.

‘ಇದು ಹೆಣ್ಣುಮಕ್ಕಳಿಗೆ ಗೌರವ ತರುವ ಸಿನಿಮಾ’

‘ಸಿಟಿ ಲೈಟ್ಸ್‌’ ಸಿನಿಮಾ ಕೇವಲ ಮನರಂಜನೆಗೆ ಸೀಮಿತವಾಗಿಲ್ಲ. ಹೆಣ್ಣುಮಕ್ಕಳಿಗೆ ಗೌರವ ತರುವಂತಹ ಕಥೆಯನ್ನು ಸಿನಿಮಾ ಹೊಂದಿದೆ ಎಂದು ದುನಿಯಾ ವಿಜಯ್ ಹೇಳಿದ್ದಾರೆ. ‘ಸಲಗ’ ಮತ್ತು ‘ಭೀಮ’ ಸಿನಿಮಾಗಳಂತೆ ಈ ಚಿತ್ರಕ್ಕೂ ಇಡೀ ತಂಡ ಶ್ರಮಿಸಿದೆ. ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದ್ದು, ಪ್ರೇಕ್ಷಕರ ಪ್ರತಿಕ್ರಿಯೆಗಾಗಿ ಚಿತ್ರತಂಡ ಕಾತರದಿಂದ ಕಾಯುತ್ತಿದೆ. ವಿಜಯ್ ತಮ್ಮ ಬಗ್ಗೆ ಮಾತನಾಡುತ್ತಾ, ನಾನು ನನ್ನನ್ನು ಸ್ಟಾರ್ ಎಂದುಕೊಂಡಿಲ್ಲ. ನಾನೊಬ್ಬ ಕೆಲಸಗಾರ. ಒಂದು ಪ್ರಶಸ್ತಿ ಬಂದರೆ ಸ್ವೀಕರಿಸಿ, ಮತ್ತೆ ಮುಂದಿನ ಕೆಲಸಕ್ಕೆ ಹೋಗಬೇಕು. ಅದನ್ನೇ ನಾನು ಪಾಲಿಸಿಕೊಂಡು ಬಂದಿದ್ದೇನೆ” ಎಂದು ಹೇಳಿದ್ದಾರೆ.

ಹಾಡನ್ನು ಮೊದಲು ಅಮ್ಮನಿಗೆ ಕೇಳಿಸಿದ ವಿನಯ್

ನಾಯಕ ವಿನಯ್ ರಾಜ್‌ಕುಮಾರ್ ಕೂಡ ಹಾಡಿನ ಬಗ್ಗೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಈ ಹಾಡನ್ನು ಮೊದಲು ತಮ್ಮ ತಾಯಿಗೆ ಕೇಳಿಸಿದ್ದಾಗಿ, ಹಾಡು ಕೇಳಿ ಅವರು ತುಂಬಾ ಖುಷಿಪಟ್ಟರು ಎಂದು ವಿನಯ್ ಹೇಳಿದ್ದಾರೆ. ಪ್ರತಿಯೊಂದು ಜೋಡಿಯೂ ತಮ್ಮದೇ ಆದ ಪ್ರಪಂಚವನ್ನು ಸೃಷ್ಟಿಸಿಕೊಂಡಿರುತ್ತಾರೆ. ಪ್ರೀತಿಗೆ ಒಂದೇ ರೀತಿಯ ವ್ಯಾಖ್ಯಾನ ನೀಡಲು ಸಾಧ್ಯವಿಲ್ಲ. ಪ್ರೀತಿಗೆ ಸಮಯ ಕೊಡುವುದು ಮುಖ್ಯ ಎಂದು ವಿನಯ್ ಅಭಿಪ್ರಾಯಪಟ್ಟಿದ್ದಾರೆ.

ವಿಜಯ್ ಕುಮಾರ್ ಅವರೊಂದಿಗೆ ಕೆಲಸ ಮಾಡಿರುವ ಅನುಭವ ಅದ್ಭುತವಾಗಿದ್ದು, ಚಿತ್ರೀಕರಣ ಮುಂದುವರಿದಂತೆ ‘ಸಿಟಿ ಲೈಟ್ಸ್‌’ ಮೇಲಿನ ತಮ್ಮ ಕುತೂಹಲವೂ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ. ಚಿತ್ರದ ಇನ್ನೊಂದು ಹಾಡು ಬಿಡುಗಡೆಯಾಗಬೇಕಿದ್ದು, ಸೆಪ್ಟೆಂಬರ್ 18ರಂದು ‘ಸಿಟಿ ಲೈಟ್ಸ್‌’ ಪ್ರೇಕ್ಷಕರ ಮುಂದೆ ಬರಲಿದೆ. ಪ್ರೀತಿ, ಬದುಕು ಮತ್ತು ಸಂಬಂಧಗಳ ನೈಜತೆಯನ್ನು ತೆರೆಗೆ ತರುವ ಈ ಸಿನಿಮಾ ವಿಜಯ್ ಅವರ ನಿರ್ದೇಶನದ ಮೂರನೇ ಹೆಜ್ಜೆಯಾಗಿ ಕುತೂಹಲ ಮೂಡಿಸಿದೆ.