ಥೈಲ್ಯಾಂಡ್‌ನ ಪ್ರಸಿದ್ಧ 'ಹಾವೆಲ್ಸ್' ಐಸ್‌ಕ್ರೀಮ್ ಬ್ರ್ಯಾಂಡ್‌ನ ಮಾಲೀಕರಾದ ಸಿರಿಪಾಂಗ್ ಅಕ್ಕರಶ್ರೀಯುಕ್, ಸನ್ಯಾಸಿಯಾಗುವ ಉದ್ದೇಶದಿಂದ ತಮ್ಮ ₹47.36 ಕೋಟಿ ಮೌಲ್ಯದ ವ್ಯವಹಾರವನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಬೌದ್ಧ ಧರ್ಮದಲ್ಲಿ 'ಅರಹಂತ' ಸ್ಥಿತಿ ತಲುಪುವ ಗುರಿಯೊಂದಿಗೆ, ಅವರು ತಮ್ಮ ಉದ್ಯಮವನ್ನು ಮುನ್ನಡೆಸಬಲ್ಲ ಸೂಕ್ತ ಉತ್ತರಾಧಿಕಾರಿಯ ಹುಡುಕಾಟದಲ್ಲಿದ್ದಾರೆ.

ಥೈಲ್ಯಾಂಡ್‌ ಮೂಲದ ಪ್ರಸಿದ್ಧ ಐಸ್‌ಕ್ರೀಮ್ ಬ್ರ್ಯಾಂಡ್ 'ಹಾವೆಲ್ಸ್' (Have A Lick's) ಮಾಲೀಕರು ಸನ್ಯಾಸಿಯಾಗುವ ಉದ್ದೇಶದಿಂದ ತಮ್ಮ ಇಡೀ ವ್ಯವಹಾರವನ್ನು ಸುಮಾರು 165 ಮಿಲಿಯನ್ ಥಾಯ್ ಬಹ್ತ್ ಅಂದರೆ ಭಾರತೀಯ ಬೆಲೆಯ ಪ್ರಕಾರ ಅಂದಾಜು 47.36 ಕೋಟಿ ರೂಪಾಯಿಗೆ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಹಾವೆಲ್ಸ್ ಸಂಸ್ಥೆಯ ಅಧ್ಯಕ್ಷರಾದ ಸಿರಿಪಾಂಗ್ ಅಕ್ಕರಶ್ರೀಯುಕ್ ಅವರು, ತಮ್ಮ ಈ ಸುದೀರ್ಘ ಐಸ್‌ಕ್ರೀಮ್ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಬಲ್ಲ ಅರ್ಹ ಉತ್ತರಾಧಿಕಾರಿಯೊಬ್ಬರಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಸಿರಿಪಾಂಗ್ ಅವರು ಕಳೆದ ತಿಂಗಳು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಈ ಅಚ್ಚರಿಯ ನಿರ್ಧಾರವನ್ನು ಪ್ರಕಟಿಸಿದ್ದರು. ಬೌದ್ಧ ಧರ್ಮದ ಅಂತಿಮ ಸಾಧನೆಯಾದ 'ಅರಹಂತ' (ಜ್ಞಾನೋದಯ) ಸ್ಥಿತಿಯನ್ನು ತಲುಪುವ ತಮ್ಮ ದೀರ್ಘಕಾಲದ ಕನಸನ್ನು ನನಸು ಮಾಡಿಕೊಳ್ಳಲು, ಪ್ರಸ್ತುತ ಇರುವ ಎಲ್ಲಾ ಲೌಕಿಕ ಬ್ರ್ಯಾಂಡ್ ಹಾಗೂ ಉದ್ಯಮವನ್ನು ಮಾರಾಟ ಮಾಡುತ್ತಿರುವುದಾಗಿ ಅವರು ವಿವರಿಸಿದ್ದಾರೆ.

ವ್ಯಾಪಾರ ವಿಸ್ತರಣೆಯ ಸವಾಲುಗಳು ಮತ್ತು ಬ್ರ್ಯಾಂಡ್ ಕ್ಷೀಣತೆ

1999 ರಲ್ಲಿ ಹ್ಯಾವೆಲ್ಸ್ ಸಂಸ್ಥೆಯನ್ನು ಪ್ರಾರಂಭಿಸಿದ ಈ ಥಾಯ್ ಉದ್ಯಮಿ, ವ್ಯವಹಾರವನ್ನು ಮಾರಾಟ ಮಾಡಲು ಕೇವಲ ಆಧ್ಯಾತ್ಮಿಕ ಕಾರಣ ಮಾತ್ರವಲ್ಲದೆ, ಇತ್ತೀಚಿನ ದಿನಗಳಲ್ಲಿ ಎದುರಾಗುತ್ತಿರುವ ವ್ಯಾಪಾರ ವಿಸ್ತರಣೆಯ ಸವಾಲುಗಳು ಸಹ ಮತ್ತೊಂದು ಪ್ರಮುಖ ಕಾರಣ ಎಂದು ಹೇಳಿದ್ದಾರೆ. "ಕಳೆದ ಎರಡು ವರ್ಷಗಳಿಂದ ಉದ್ಯಮವನ್ನು ವಿಸ್ತರಿಸಲು ಮತ್ತು ಹೊಸ ಔಟ್‌ಲೆಟ್‌ಗಳನ್ನು ತೆರೆಯಲು ನಾವು ಪ್ರಮುಖ ಶಾಪಿಂಗ್ ಮಾಲ್‌ಗಳನ್ನು ಸಂಪರ್ಕಿಸಿ ಸಾಕಷ್ಟು ಶ್ರಮಿಸಿದೆವು. ಮಾಲ್‌ಗಳಲ್ಲಿ ಅನೇಕ ಖಾಲಿ ಜಾಗಗಳಿದ್ದರೂ ಸಹ, ಹ್ಯಾವೆಲ್ಸ್ ಐಸ್‌ಕ್ರೀಮ್‌ಗೆ ಜಾಗ ನೀಡಲು ನಿರಾಕರಿಸುತ್ತಿದ್ದರು. ನಾವು ಎಷ್ಟೇ ಬಾರಿ ವಿಚಾರಿಸಿದರೂ ನಮಗೆ ಅದೇ ನಿರಾಶಾದಾಯಕ ಉತ್ತರವೇ ಬರುತ್ತಿತ್ತು ಎಂದು ಸಿರಿಪಾಂಗ್ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ವರದಿಯ ಪ್ರಕಾರ, ಹ್ಯಾವೆಲ್ಸ್ ಐಸ್‌ಕ್ರೀಮ್ ಒಂದು ಕಾಲದಲ್ಲಿ ಥೈಲ್ಯಾಂಡ್‌ನಾದ್ಯಂತ ಅತ್ಯಂತ ಜನಪ್ರಿಯ ಬ್ರ್ಯಾಂಡ್ ಆಗಿ ಪ್ರತಿಯೊಂದು ಕಡೆಯೂ ರಾರಾಜಿಸುತ್ತಿತ್ತು. ಆದರೆ ಕಾಲಕ್ರಮೇಣ ಮಾರುಕಟ್ಟೆಯ ಪೈಪೋಟಿಯಿಂದಾಗಿ ಈಗ ಅದರ ವ್ಯಾಪ್ತಿ ಕ್ಷೀಣಿಸುತ್ತಾ ಬಂತು. ಪರಿಣಾಮವಾಗಿ, ಇಂದು ಈ ಐಸ್‌ಕ್ರೀಮ್ ಬ್ರ್ಯಾಂಡ್‌ನ ಒಂದೇ ಒಂದು ಸ್ವತಂತ್ರ ಅಂಗಡಿ ಮಾತ್ರ ಕಾರ್ಯಾಚರಿಸುತ್ತಿದೆ.

ಆಧ್ಯಾತ್ಮಿಕ ಜೀವನ ಮತ್ತು ಸನ್ಯಾಸತ್ವದ ಪಥ

ಸಿರಿಪಾಂಗ್ ಅಕ್ಕರಶ್ರೀಯುಕ್ ಅವರು ಲೌಕಿಕ ಜೀವನವನ್ನು ತೊರೆದು ಆಧ್ಯಾತ್ಮಿಕ ಹಾದಿ ಹಿಡಿಯಲು ಕಳೆದ 15 ವರ್ಷಗಳಿಂದಲೇ ಯೋಜಿಸುತ್ತಿದ್ದರು. ತಮ್ಮ ಮುಂದಿನ ಈ ಜೀವನದ ನಿರ್ಧಾರದ ಬಗ್ಗೆ ಬರೆಯುತ್ತಾ, ನನ್ನ ಕುಟುಂಬದೊಂದಿಗೆ ಉಳಿಯಲು ನನಗೆ ಇನ್ನು ಕೇವಲ ಎರಡು ವರ್ಷಗಳ ಕಾಲಾವಕಾಶ ಮಾತ್ರ ಇದೆ. ಸನ್ಯಾಸತ್ವ ಸ್ವೀಕರಿಸಲು ನಾನು ಈ ಎರಡು ವರ್ಷಗಳ ಕಾಲಮಿತಿಯನ್ನು ನಿಗದಿಪಡಿಸಿಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಅರಹಂತರಾಗಿ ಜ್ಞಾನೋದಯ ಪಡೆಯುವ ಅಂತಿಮ ಗುರಿಯನ್ನು ತಲುಪಲು, ಸಿರಿಪಾಂಗ್ ಅವರು ತಮ್ಮ ಪತ್ನಿ, ಮಗಳು ಸೇರಿದಂತೆ ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರೊಂದಿಗಿನ ಎಲ್ಲಾ ಬಾಂಧವ್ಯಗಳನ್ನು ಸಂಪೂರ್ಣವಾಗಿ ತೊರೆಯಲು ನಿರ್ಧರಿಸಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಸೂಕ್ತವಾದ ಜಾಗವನ್ನು ಹುಡುಕಿ ಅರಣ್ಯ ಧಾಮವನ್ನು (ಫಾರೆಸ್ಟ್ ರಿಟ್ರೀಟ್) ನಿರ್ಮಿಸುವುದು ಅವರ ಯೋಜನೆಯಾಗಿದೆ. ಅಲ್ಲಿ ಅವರು ಸನ್ಯಾಸಿಯಾಗಿ ಸಂಪೂರ್ಣ ಧ್ಯಾನಸ್ಥ ಜೀವನ ನಡೆಸಲಿದ್ದಾರೆ.

ನನ್ನ ಪಾಲಿಗೆ ಸನ್ಯಾಸಿಯಾಗುವುದು ಎಂದರೆ ಲೌಕಿಕ ಜೀವನದಿಂದ ಸಂಪೂರ್ಣವಾಗಿ ಮುಕ್ತಿ ಪಡೆಯುವುದು. ಇದರಿಂದ ಪ್ರತಿಯೊಬ್ಬರೂ ತಮ್ಮದೇ ಆದ ಆಧ್ಯಾತ್ಮಿಕ ಹಾದಿಯಲ್ಲಿ ಸಾಗಲು ಸಾಧ್ಯವಾಗುತ್ತದೆ. ನಾನು ಆ ಕಾಡಿನ ಆಶ್ರಮದಲ್ಲೇ ವಾಸಿಸುತ್ತಾ, ನನ್ನ ಜೀವನವನ್ನು ಪೂರ್ಣವಾಗಿ ಸಾಧನೆಗೆ ಮೀಸಲಿಡುತ್ತೇನೆ. ಒಂದೊಮ್ಮೆ ನಾನು ಅರಹಂತತ್ವದ ಅಂತಿಮ ಜ್ಞಾನೋದಯವನ್ನು ಸಾಧಿಸಿದರೆ ಮಾತ್ರ, ನನ್ನ ಮಗಳು, ಪತ್ನಿ, ಸಂಬಂಧಿಕರು ಮತ್ತು ಶಿಷ್ಯರಿಗೆ ಧಮ್ಮ ಅಭ್ಯಾಸದಲ್ಲಿ ತರಬೇತಿ ಹಾಗೂ ಮಾರ್ಗದರ್ಶನ ನೀಡಲು ಲೌಕಿಕ ಸಮಾಜಕ್ಕೆ ಹಿಂತಿರುಗುತ್ತೇನೆ ಎಂದು ಅವರು ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ.

ಉತ್ತರಾಧಿಕಾರಿಯ ಹುಡುಕಾಟ

ತಮ್ಮ ಸಮಗ್ರ ಐಸ್‌ಕ್ರೀಮ್ ಉದ್ಯಮವನ್ನು ಮಾರಾಟ ಮಾಡಲು ಆಫರ್ ನೀಡಿರುವ ಅವರು, ಈ $6 ಮಿಲಿಯನ್ ಮೊತ್ತದ ವ್ಯವಹಾರದಲ್ಲಿ 2.77 ಎಕರೆ ಜಮೀನು, ಕಂಪನಿಯ ಕಾರ್ಯಾಲಯ ಮತ್ತು ಉತ್ಪಾದನಾ ಕಾರ್ಖಾನೆ, ಪ್ರಸ್ತುತ ಇರುವ ಹಾವೆಲ್ಸ್ ಔಟ್‌ಲೆಟ್, ಬ್ರ್ಯಾಂಡ್‌ನ ಟ್ರೇಡ್‌ಮಾರ್ಕ್, ವ್ಯಾಪಾರದ ಸಮಗ್ರ ಜ್ಞಾನ ಹಾಗೂ ಐಸ್‌ಕ್ರೀಮ್‌ನ ಮೂಲ ಪಾಕವಿಧಾನಗಳು (Recipes) ಸೇರಿವೆ ಎಂದು ಸ್ಪಷ್ಟಪಡಿಸಿದ್ದಾರೆ.

ತಮ್ಮ ಸುದೀರ್ಘ ಉದ್ಯಮವನ್ನು ವಹಿಸಿಕೊಳ್ಳಲು ಸೂಕ್ತ ಉತ್ತರಾಧಿಕಾರಿಯನ್ನು ಹುಡುಕಿಕೊಡುವ ವ್ಯಕ್ತಿಗೆ 5 ಮಿಲಿಯನ್ ಬಹ್ತ್ (ಸುಮಾರು $1.5 ಲಕ್ಷ ಡಾಲರ್) ಮಧ್ಯವರ್ತಿ ಅಥವಾ ಫೈಂಡರ್ ಶುಲ್ಕವನ್ನು ನೀಡುವುದಾಗಿಯೂ ಅವರು ಘೋಷಿಸಿದ್ದಾರೆ.