ಮನೆಯ ಪರಿಸ್ಥಿತಿ ಶೋಚನೀಯ. ಬಡತನದಲ್ಲಿ ಶಾಲೆಗೆ ಹಾಜರಾಗುತ್ತಿರುವುದೇ ದೊಡ್ಡ ವಿಚಾರ. ಹೀಗಾಗಿ 8 ಬಾಲಕ ಇದುವರೆಗೂ ಹುಟ್ಟುಹಬ್ಬ ಆಚರಿಸೇ ಇರಲಿಲ್ಲ. ಈ ಮಾಹಿತಿ ತಿಳಿದ ಸಹಪಾಠಿಗಳು, ಟೀಚರ್ಸ್ ಕೊಟ್ಟ ಸರ್ಪ್ರೈಸ್‌ಗೆ ಬಾಲಕ ಕಣ್ಣೀರಿಟ್ಟಿದ್ದಾನೆ.

ಎಂಟು ವರ್ಷದ ಬಾಲಕ ಆತ. ಸಮವಸ್ತ್ರ ಧರಿಸಿ ಶಾಲೆಗೆ ಬರುತ್ತಿದ್ದ.ಓದು, ಪರೀಕ್ಷೆಯಲ್ಲೂ ಮುಂದಿದ್ದ. ಎಲ್ಲರ ಜೊತೆಗೂ ಅಚ್ಚುಮೆಚ್ಚು. ಶಾಲೆಯಲ್ಲಿ ಇತರ ಸಹಪಾಠಿಗಳು ಅವರವರ ಹುಟ್ಟುಹಬ್ಬಕ್ಕೆ ಚಾಕಲೇಟ್ ಕೊಡುತ್ತಿದ್ದರು. ಮನೆಯಲ್ಲಿ ಪೋಷಕರ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಶಾಲೆಯಲ್ಲಿ ಒಂದು ಬಾರಿಯೂ ತನ್ನ ಹುಟ್ಟು ಹಬ್ಬ ಕುರಿತು, ಆಚರಣೆ ಕುರಿತು ಬಾಲಕ ಒಂದು ಅಕ್ಷರವನ್ನೂ ಹೇಳಿಲ್ಲ. ಹೀಗಾಗಿ 8ರ ಹರೆಯದ ಬಾಲಕನ ಹುಟ್ಟು ಹಬ್ಬ ಕುರಿತು ಟೀಚರ್ ಪ್ರಶ್ನಿಸಿದ್ದಾರೆ. ಈ ವೇಳೆ ಬಾಲಕ ನೀಡಿದ ಉತ್ತರಕ್ಕೆ ತರಗತಿ ಒಂದು ಕ್ಷಣ ಮೌನವಾಯಿತು. ಎಲ್ಲರೂ ಭಾವುಕರಾದರು. ನಾನು ಇದುವರೆಗೆ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಅದು ನನಗೆ ಸಾಧ್ಯವಿಲ್ಲ ಎಂದು ಬಾಲಕ ಹೇಳಿದ್ದ.

ಮೊದಲ ಬಾರಿಗೆ ಹುಟ್ಟು ಹಬ್ಬದ ಸಂಭ್ರಮ

ಕೊಲಂಬಿಯಾದ ಎಬೆಜಿಕೊ (Ebejico)ನಲ್ಲಿ 8 ವರ್ಷದ ಬಾಲಕನೊಬ್ಬನಿಗೆ ಶಾಲೆಯಲ್ಲೇ ಮೊದಲ ಬಾರಿಗೆ ಹುಟ್ಟುಹಬ್ಬದ ಸಂಭ್ರಮ ಸಿಕ್ಕಿದೆ. ಏಂಜೆಲ್ ಡೇವಿಡ್ (Ángel David) ಎಂಬ ಬಾಲಕನ ಹುಟ್ಟುಹಬ್ಬವನ್ನು ಆತನ ಸಹಪಾಠಿಗಳು ಹಾಗೂ ಶಿಕ್ಷಕರು ಸೇರಿ ಸರ್ಪ್ರೈಸ್ ಪಾರ್ಟಿ ಆಯೋಜಿಸಿ ಆಚರಿಸಿದ್ದಾರೆ. ಈ ಭಾವನಾತ್ಮಕ ಕ್ಷಣದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಇದುವರೆಗೂ ಹುಟ್ಟುಹಬ್ಬವೇ ಆಚರಿಸಿರಲಿಲ್ಲ!

ಏಂಜೆಲ್‌ನ ಕುಟುಂಬದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಹೀಗಾಗಿ ಬಾಲಕನಿಗೆ ಇದುವರೆಗೆ ಹುಟ್ಟುಹಬ್ಬವನ್ನು ಆಚರಿಸುವ ಅವಕಾಶವೇ ಸಿಕ್ಕಿರಲಿಲ್ಲ ಎಂದು ಆತನ ಶಿಕ್ಷಕಿ ಕ್ಯಾಸಾಸ್ ಕ್ಸಿಮೆನೊ (Casas Ximeno) ಹೇಳಿದ್ದಾರೆ. ಬಾಲಕ ತನ್ನ ಸೆಪ್ಟೆಂಬರ್ ಹುಟ್ಟುಹಬ್ಬದ ಬಗ್ಗೆ ಹೇಳಿಕೊಂಡಿದ್ದ. ಇದನ್ನು ಗಮನಿಸಿದ ಶಿಕ್ಷಕಿ ಹಾಗೂ ಮತ್ತೊಬ್ಬ ಸಹೋದ್ಯೋಗಿ, ಆತನಿಗೆ ಜೀವನದಲ್ಲಿ ಮರೆಯಲಾಗದ ದಿನವೊಂದನ್ನು ನೀಡಲು ನಿರ್ಧರಿಸಿದ್ದಾರೆ.

ಶಾಲೆಯಲ್ಲೇ ಸಿಕ್ಕಿತು ಪ್ರೀತಿಯ ಉಡುಗೊರೆ

ಹುಟ್ಟುಹಬ್ಬದಂದು ಸಹಪಾಠಿಗಳು ಏಂಜೆಲ್‌ಗಾಗಿ ಸರ್ಪ್ರೈಸ್ ಪಾರ್ಟಿ ಆಯೋಜಿಸಿದ್ದರು. ಬಾಲಕ ತರಗತಿ ಬಾಗಿಲ ಬಳಿ ಬಂದಾಗ ತರಗತಿ ಎಂದಿನಂತೆ ಇರಲಿಲ್ಲ. ಎಲ್ಲರೂ ಒಟ್ಟಾಗಿ ಸ್ಪ್ಯಾನಿಷ್ ಭಾಷೆಯಲ್ಲಿ ‘ಹ್ಯಾಪಿ ಬರ್ತ್‌ಡೇ’ ಹಾಡನ್ನು ಹಾಡಿದ್ದಾರೆ. ತರಗತಿ ಎಲ್ಲೆಡೆ ಹ್ಯಾಪಿ ಬರ್ತ್‌ಡೇ ಬರಹ ಕಾಣಿಸುತ್ತಿತ್ತು. ಅಚ್ಚರಿ ಹುಟ್ಟುಹಬ್ಬ ಏಂಜೆಲ್ ಡೇವಿಡ್‌ಗೆ ಖುಷಿ ನೀಡಿತ್ತು. ಆದರೆ ಅಷ್ಟೇ ವೇಗದಲ್ಲಿ ಭಾವುಕನಾಗಿದ್ದ. ಕೈಗಳಿಂದ ಮುಖ ಮುಚ್ಚಿ ಅತ್ತು ಬಿಟ್ಟಿದ್ದ. ಕುಟುಂಬ, ಪೋಷಕರು, ಬಡತನ, ಕಷ್ಟ ಎಲ್ಲವನ್ನೂ ನೆನೆಸಿಕೊಂಡು ಕಣ್ಣೀರಿಟ್ಟಿದ್ದ. ಇದುವರೆಗೆ ಆಚರಿಸಿಕೊಳ್ಳದ ಹುಟ್ಟು ಹಬ್ಬ ಈ ರೀತಿ ಎಲ್ಲರೂ ಸೇರಿ ಆಚರಿಸುತ್ತಿರುವುದು, ಸಹಪಾಠಿಗಳ ಪ್ರೀತಿ, ಶಿಕ್ಷಕಿಯರ ಕಾಳಜಿ ಎಲ್ಲವನ್ನೂ ನೋಡಿದ ಬಾಲಕ ಕಣ್ಣೀರಿಟ್ಟಿದ್ದಾರೆ.

ಶಿಕ್ಷಕರು ಮತ್ತು ಸಹಪಾಠಿಗಳು ಬಾಲಕನನ್ನು ಪ್ರೀತಿಯಿಂದ ಅಪ್ಪಿಕೊಂಡು ಶುಭ ಹಾರೈಸಿದರು. ಈ ದೃಶ್ಯವನ್ನು ಶಿಕ್ಷಕಿ ಕ್ಯಾಸಾಸ್ ಕ್ಸಿಮೆನೊ ಚಿತ್ರೀಕರಿಸಿ ಟಿಕ್‌ಟಾಕ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋಗೆ ಸುಮಾರು 1 ಕೋಟಿಗೂ ಹೆಚ್ಚು ವೀಕ್ಷಣೆಗಳು ದೊರೆತಿವೆ.

‘ಅವನಿಗೆ ಪ್ರೀತಿ ಮತ್ತು ಕಾಳಜಿ ತುಂಬಾ ಬೇಕಿತ್ತು

ಏಂಜೆಲ್‌ನ ತಾಯಿ ನಾಲ್ವರು ಮಕ್ಕಳನ್ನು ಸಾಕುತ್ತಿರುವುದರಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಶಿಕ್ಷಕಿ ತಿಳಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬಾಲಕನಿಗೆ ಸಿಕ್ಕ ಈ ಪುಟ್ಟ ಸಂಭ್ರಮವು ದೊಡ್ಡ ಭಾವನಾತ್ಮಕ ಕ್ಷಣವಾಗಿ ಪರಿಣಮಿಸಿದೆ. ದುಬಾರಿ ಉಡುಗೊರೆಗಳಿಗಿಂತಲೂ ಪ್ರೀತಿ, ಕಾಳಜಿ ಮತ್ತು ಆತ್ಮೀಯತೆ ಎಷ್ಟು ಅಮೂಲ್ಯ ಎಂಬುದನ್ನು ಈ ಪುಟ್ಟ ಹುಟ್ಟುಹಬ್ಬದ ಸಂಭ್ರಮ ಜಗತ್ತಿಗೆ ಮತ್ತೊಮ್ಮೆ ತೋರಿಸಿದೆ. ಈ ವಿಡಿಯೋ ನೋಡಿ ಹಲವರು ಭಾವುಕರಾಗಿದ್ದಾರೆ, ಕಣ್ಣೀರಿಟ್ಟಿದ್ದಾರೆ.