ದುರ್ಗಾ ಪೂಜೆಗೂ ಮೊದಲು ದೇಶ ರಾಜಕೀಯದಲ್ಲಿ ಮಹತ್ತರ ಘಟನೆ ನಡೆಯಲಿದೆ. 17 ಸಂಸದರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಈ ಕುರಿತ ಸುಳಿವು ಹೊರಬಿದ್ದಿದೆ. ಇದು ಹಲವು ರಾಜಕೀಯ ಬೆಳವಣಿಗೆಗೆ ಕಾರಣವಾಗಲಿದೆ.
ನವದೆಹಲಿ (ಸೆ.12) ಕೇಂದ್ರದಲ್ಲಿ ಅಧಿಕಾರಿ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ ಸೇರಿದಂತೆ ಹಲವು ಪ್ರತಿಪಕ್ಷಗಳ ಪ್ರಯತ್ನಕ್ಕೆ ಇಂಡಿಯಾ ಒಕ್ಕೂಟ ಪ್ರಮುಖ ಅಸ್ತ್ರವಾಗಿ ಹೊರಹೊಮ್ಮಿತ್ತು. ಆದರೆ ಇದೀಗ ಇಂಡಿಯಾ ಒಕ್ಕೂಟ ಛಿದ್ರಗೊಂಡಿದೆ. ಇದೀಗ ಪಕ್ಷಗಳೇ ಛಿದ್ರಗೊಳ್ಳುತ್ತಿದೆ. ದುರ್ಗಾ ಪೂಜೆಗೂ ಮೊದಲು 17 ಸಂಸದರು ಬಿಜೆಪಿ ಸೇರಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್‌ನ ಬಂಡಾಯ ಸಂಸದ ಜಗದೀಶ್ ಚಂದ್ರ ಬರ್ಮಾ ಬಸುನಿಯಾ ಹೇಳಿದ್ದಾರೆ. ಈ ಮೂಲಕ ಟಿಎಂಸಿ ಹಾಗೂ ದೇಶ ರಾಜಕಾರಣದಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗಲಿದೆ ಎಂದಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಹೀನಾಯ ಸೋಲಿನ ಬಳಿಕ ಬಂಡಾಯ ನಾಯಕರ ಸಂಖ್ಯೆ ಹೆಚ್ಚಾಗಿತ್ತು. ಈ ಪೈಕಿ 17 ಸಂಸದರು ತ್ರಿಪುರಾದ ರಾಷ್ಟ್ರೀಯ ನಾಗರಿಕ ಪಕ್ಷ(ಎನ್‌ಸಿಪಿಐ) ಪಕ್ಷ ಸೇರಿಕೊಂಡಿದ್ದರು. ಇದೀಗ ಎನ್‌ಸಿಪಿಐನಿಂದ ಬಿಜೆಪಿ ಸೇರಿಕೊಳ್ಳುತ್ತಿದ್ದಾರೆ. ಈ ಕುರಿತು ಬಸುನಿಯಾ ಸ್ಫೋಟಕ ಮಾಹಿತಿ ನೀಡಿದ್ದಾರೆ. 20 ಸದಸ್ಯರಲ್ಲಿ ಮೂರನೇ ಎರಡಷ್ಟು ಮಂದಿ ಪಕ್ಷ ಬದಲಾಸುವ ಕಾರಣ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದಿಲ್ಲ ಎಂದು ಬಸುನಿಯಾ ಹೇಳಿದ್ದಾರೆ.
ಮೂವರು ಬಿಜೆಪಿ ಸೇರುವುದಿಲ್ಲ
20ರ ಸಂಸದರ ಪೈಕಿ 17 ಮಂದಿ ಸದಸ್ಯರು ಬಿಜೆಪಿ ಸೇರಿಕೊಳ್ಳುತ್ತಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಮೂವರು ಸಂಸದರು ಬಿಜೆಪಿ ಸೇರಿಕೊಳ್ಳುತ್ತಿಲ್ಲ. ಆದರೆ ಬಾಹ್ಯವಾಗಿ ಎನ್‌ಡಿಎ ಬೆಂಬಲ ನೀಡುತ್ತಾರೆ ಎಂದು ಬಸುನಿಯಾ ಹೇಳಿದ್ದಾರೆ. ಮೂಲ ಟಿಎಂಸಿಯ ಸಂಸದರು ಇದೀಗ ಬಿಜೆಪಿ ಸೇರಿಕೊಳ್ಳುವುದು ಖಚಿತವಾಗಿದೆ. ಕೇವಲ ದಿನಾಂಕ ಮಾತ್ರ ನಿರ್ಧಾರವಾಗಬೇಕಿದೆ ಎಂದು ಬಸುನಿಯಾ ಹೇಳಿದ್ದಾರೆ.
ನಿರ್ಧಾರವಾಗಿಲ್ಲ ಎಂದ ರಾಯ್
ವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯ ಹೀನಾಯ ಸೋಲು ಪಕ್ಷದ ಹಣೆಬರಹ ಬದಲಿಸಿದೆ. ಬಿಜೆಪಿ, ಕಾಂಗ್ರೆಸ್‌ಗೆ ಠಕ್ಕರ್ ನೀಡುತ್ತಿದ್ದ ಟಿಎಂಸಿ ಪಾರ್ಟಿಯಲ್ಲಿ ಇದೀಗ ಬೆರೆಳೆಣಿಕೆ ಮಂದಿ ಉಳಿದಿದ್ದಾರೆ. ಪ್ರಮುಖವಾಗಿ 27 ಸಂಸದರ ಹೊಂದಿದ್ದ ಟಿಎಂಸಿಯಲ್ಲಿ ಚುನಾವಣೆ ಸೋಲಿನ ಬಳಿಕ 20 ಮಂದಿ ಎನ್‌ಸಿಪಿಐ ಸೇರಿಕೊಂಡಿದ್ದರು. ಇದೀಗ ಎನ್‌ಸಿಪಿಐನಿಂದ ಬಿಜೆಪಿ ಸೇರಿಕೊಳ್ಳುವ ಮೂಲಕ ಬಿಜಪಿಯ ಭಾಗವಾಗಲಿದ್ದಾರೆ. ಆದರೆ ಬಸುನಿಯಾ ಹೇಳಿಕೆಯನ್ನು ಮತ್ತೊಬ್ಬ ಬಂಡಾಯ ಸಂಸದ ಶತಾಬ್ದಿ ರಾಯ್ ನಿರಾಕರಿಸಿದ್ದಾರೆ. ಬಸುನಿಯಾ ವೈಯುಕ್ತಿಕ ಹೇಳಿಕೆ ನೀಡಿದ್ದಾರೆ. ಇದು ಸಂಸದರ ನಿರ್ಧಾರವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಎನ್‌ಸಿಪಿಐ ಸಂಸದ ಅಬು ತೆಹರ್ ಖಾನ್ ಕೂಡ ಈ ಮಾತು ನಿರಾಕರಿಸಿದ್ದಾರೆ. ನಾವು ಯಾರು ಬಿಜೆಪಿ ಸೇರಿಕೊಳ್ಳುತ್ತಿಲ್ಲ ಎಂದಿದ್ದಾರೆ.


