ಕಳೆದ ಜುಲೈ ತಿಂಗಳಿಗಿಂತ ಆಗಸ್ಟ್‌ನಲ್ಲಿ ಹಣದುಬ್ಬರ ಪ್ರಮಾಣ ಏರಿಕೆ ಆಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ. ಆ ಮೂಲಕ ಸಾಮನ್ಯ ಜನರಿಗೆ ಮತ್ತೆ ಹೊರೆಯಾಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ…

ಬೆಂಗಳೂರು: ದೇಶದಲ್ಲಿ ಬೆಲೆ ಏರಿಕೆ ಸದ್ಯಕ್ಕಂತೂ ಕಮ್ಮಿ ಆಗುವ ಯಾವುದೇ ಲಕ್ಷಣ ಕಾಣ್ತಿಲ್ಲ. ಜಾಸ್ತಿ ಖರ್ಚು ಮಾಡಲ್ಲ ಅಗತ್ಯ ಇರೋ ವಸ್ತುಗಳನ್ನ ಮಾತ್ರ ತರ್ತೀನಿ ಅಂತಾ ಅಂಗಡಿ ಹೋದ್ರೆ ಸಾಕು. ನಿಮ್ಮ ಜೇಬು ಸಂಪೂರ್ಣ ಖಾಲಿ ಆಗಿರುತ್ತದೆ. ಅಷ್ಟರ ಮಟ್ಟಿಗೆ ಬೆಲೆ ಏರಿಕೆ ಕಾವು ಮತ್ತೆ ಜೋರಾಗಿದೆ.

ಆಘಾತಕಾರಿ ವಿಚಾರ ಏನೆಂದರೆ ಕಳೆದ ಆಗಸ್ಟ್ ತಿಂಗಳಿನಲ್ಲಿ ಸಗಟು ಹಣದುಬ್ಬರ (wholesale inflation) ಭಾರೀ ಏರಿಕೆ ಆಗಿದೆ. ಇದನ್ನ ನಾವು ಹೇಳ್ತಿರೋದಲ್ಲ. ಕೇಂದ್ರ ವಾಣಿಜ್ಯ ಸಚಿವಾಲಯವೇ ನೀಡಿರುವ ಮಾಹಿತಿ ಪ್ರಕಾರ.. ಶೇಕಡಾ 9.92 ರಷ್ಟು ಸಗಟು ಹಣದುಬ್ಬರ ಏರಿಕೆ ಆಗಿದೆ ಎಂದು ತಿಳಿಸಿದೆ. ಇನ್ನು ಜುಲೈ ತಿಂಗಳಲ್ಲಿ ಇದು ಶೇಕಡಾ 9.78 ರಷ್ಟಿತ್ತು.

ಇದು ವ್ಯಾಪಾರಿಗಳ ಆತಂಕಕ್ಕೆ ಕಾರಣವಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಸತತವಾಗಿ ಸಗಟು ಬೆಲೆ ಏರಿಕೆಯು ಶೇಕಡಾ 10ರ ಆಸುಪಾಸಿನಲ್ಲೇ ಮುಂದುವರಿದಿದೆ. ಹಾಗಿದ್ದರೆ ಬೆಲೆ ಏರಿಕೆಗೆ ಕಾರಣಗಳು ಏನು ಅಂತಾ ನೋಡೋದಾದ್ರೆ.. ಪೆಟ್ರೋಲಿಯಂ, ಕಚ್ಚಾ ತೈಲ, ಗ್ಯಾಸ್ ಬೆಲೆಗಳು ನಿರಂತರವಾಗಿ ಹೆಚ್ಚಾಗಿವೆ. ಅದರಲ್ಲೂ ತೈಲ ವಿಭಾಗದಲ್ಲಿ ಹಣದುಬ್ಬರವು ಏರಿಕೆ ಆಗುತ್ತಲೇ ಇದೆ. ಕಳೆದ ಜುಲೈನಲ್ಲಿ ಶೇ 20.05 ರಷ್ಟಿದ್ದ ಹಣದುಬ್ಬರ ಆಗಸ್ಟ್‌ನಲ್ಲಿ ಶೇ. 22.93ಕ್ಕೆ ಜಿಗಿತ ಕಂಡಿದೆ.

ಅಷ್ಟೇ ಅಲ್ಲ, ಕಲ್ಲಿದ್ದಲಿನ ಬೆಲೆಯೂ ಶೇಕಡಾ 1.57ರಷ್ಟು ಏರಿಕೆ ಆಗಿದೆ. ಜೊತೆಗೆ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಬೆಲೆಯೂ ಏರಿಕೆ ಆಗಿದೆ. ಇವುಗಳ ಬೆಲೆ ಬರೋಬ್ಬರಿ 34.41ಕ್ಕೆ ಏರಿಕೆ ಆಗಿದೆ ಎಂದು ಕೇಂದ್ರ ವರದಿ ನೀಡಿದೆ.

ಇದು ನಿಮ್ಮ ಜೇಬಿಗೆ ಹೇಗೆ ಕತ್ತರಿ ಕೊಡುತ್ತೆ?

Wholesale market ಬೆಲೆಗಳು ಹೆಚ್ಚಾದರೆ ಅದರ ನೇರ ಪರಿಣಾಮ ಚಿಲ್ಲರೆ ಮಾರುಕಟ್ಟೆ ಮೇಲೆ ಬೀಳುತ್ತದೆ. ಅಲ್ಲಿ ಸಾಮಾನ್ಯ ಜನರ ಮೇಲೆ ನೇರ ಹೊರೆ ಬೀಳುತ್ತದೆ. ತಯಾರಿಕಾ ವೆಚ್ಚ ಹೆಚ್ಚಾಗೋದ್ರಿಂದ ಅಡುಗೆ ಎಣ್ಣೆ, ದಿನಸಿ ಮತ್ತು ಪ್ಯಾಕ್ ಮಾಡಿದ ವಸ್ತುಗಳ ಬೆಲೆ ಸಹಜವಾಗಿಯೇ ಹೆಚ್ಚಾಗುತ್ತದೆ. ಇನ್ನು, ಈ ಹಣದುಬ್ಬರ ಅಷ್ಟಕ್ಕೂ ನಿಲ್ಲೋದಿಲ್ಲ. ತೈಲ ಬೆಲೆಗಳು ಹೆಚ್ಚಾದಾಗ ಸರಕು ಸಾಗಾಣೆ ವಾಹನಗಳ ಬಾಡಿಗೆ ಕೂಡ ಹೆಚ್ಚಾಗುತ್ತದೆ. ಇದರಿಂದ ನಾವು ತಿನ್ನುವ ಹಣ್ಣು, ತರಕಾರಿ ಸೇರಿದಂತೆ ಪ್ರತಿಯೊಂದು ವಸ್ತುವಿನ ಮೇಲೆ ಹೊಡೆತ ಬೀಳಲಿದೆ.

ಅಷ್ಟೇ ಅಲ್ಲ, ವಾಣಿಜ್ಯ ಬಳಕೆಯ ಗ್ಯಾಸ್ ಮತ್ತು ತೈಲ ಬೆಲೆ ಹೆಚ್ಚಾಗುವುದರಿಂದ ನಾವು ಔಟ್ ಸೈಟ್ ಊಟ ಮಾಡ್ತೀವಿ ಅಂದ್ರೆ ಪರ್ಸ್‌ನಲ್ಲಿ ಖಾಲಿ ಆಗೋದು ಗ್ಯಾರಂಟಿ ಆಗಿದೆ. ಸದ್ಯದ ಹಣದುಬ್ಬರ ನೋಡಿದ್ರೆ ಮುಂದಿನ ದಿನಗಳಲ್ಲಿ ಸಾಮಾನ್ಯ ಜನರ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ ಆಗಿದೆ. ಇದ್ದವರು ಹೇಗೋ ಬದುಕು ಕಟ್ಟಿಕೊಳ್ತಾರೆ. ಆದರೆ ಬಡವರು, ಮಧ್ಯಮ ವರ್ಗದ ಜನರ ಪರಿಸ್ಥಿತಿ ಯಾರಿಗೂ ಹೇಳಿ ತೀರದ್ದಾಗಿದೆ. ಆದಷ್ಟು ಬೇಗ ಈ ಹಣದುಬ್ಬರಕ್ಕೆ ಬ್ರೇಕ್ ಹಾಕಿ ಬಡವರ ಬದುಕನ್ನು ಕಾಪಾಡಿಕೊಳ್ಳಬೇಕಾಗಿದೆ. ಇದಕ್ಕೆ ಸರ್ಕಾರದ ಪಾತ್ರ ತುಂಬಾನೇ ಮುಖ್ಯವಾಗಿದೆ.