ಏಕರೂಪ ನಾಗರಿಕ ಸಂಹಿತೆ ನೀತಿ ಜಾರಿಗೆ ಸಿದ್ಧತೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಅಮಿತ್ ಶಾ ಯುಸಿಸಿ ಜಾರಿ ದಿನಾಂಕ ಘೋಷಿಸಿದ್ದಾರೆ. ಪ್ರತಿಪಕ್ಷಗಳ ವಿರೋಧದ ನಡುವೆಯೂ ನೀತಿ ಜಾರಿಗೆ ಅಮಿತ್ ಶಾ ಮುಂದಾಗಿದ್ದಾರೆ.

ನವದೆಹಲಿ (ಸೆ.13) ಭಾರತದಲ್ಲಿ ಏಕರೂಪ ನಾಗರಿಕ ನೀತಿ ಸಂಹಿತೆ ಕುರಿತು ಭಾರಿ ಚರ್ಚೆಗಳು, ಪರ ವಿರೋಧಗಳು ನಡೆದಿದೆ. ಇದೀಗ ಬರೋಬ್ಬರಿ 21 ರಾಜ್ಯಗಳಲ್ಲಿ ಯೂನಿಫಾರ್ಮ್ ಸಿವಿಲ್ ಕೋಡ್ ನೀತಿ ಜಾರಿಗೆ ದಿನಾಂಕ ಘೋಷಣೆಯಾಗಿದೆ. ಕೇಂದ್ರ ಗ-ಹ ಸಚಿವ ಅಮಿತ್ ಶಾ ಈ ಕುರಿತು ಮಹತ್ವದ ಅಪ್‌ಡೇಟ್ ನೀಡಿದ್ದಾರೆ. ತ್ರಿವಳಿ ತಲಾಖ್ ನಿಷೇಧಿಸಿ ಮುಸ್ಲಿಂ ಮಹಿಳೆಯರಿಗೆ ಸಮಾನ ಹಕ್ಕು ನೀಡಲಾಗಿದೆ. ಇದೀಗ ಯುನಿಫಾರ್ಮ್ ಸಿವಿಲ್ ಕೋಡ್ ಜಾರಿಗೆ ತರುತ್ತಿದ್ದೇವೆ ಎಂದು ಅಮಿತ್ ಶಾ ಹೇಳಿದ್ದಾರೆ.

ಯಾವಾಗ ಯುಸಿಸಿ ಜಾರಿ

ಯೂನಿಫಾರ್ಮ್ ಸಿವಿಲ್ ಕೋಡ್ ಕುರಿತು ಮಾತನಾಡಿದ ಅಮಿತ್ ಶಾ, ಕಳೆದ 12 ವರ್ಷಗಳಲ್ಲಿ ನಾವು ಭರವಸೆ ನೀಡಿದ ಹಲವು ನೀತಿಗಳು, ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಇದೀಗ ಬಿಜೆಪಿ ಹಾಗೂ ಎನ್‌ಡಿಎ ಆಡಳಿತ ಇರುವ 21 ರಾಜ್ಯಗಳಲ್ಲಿ ಯೂನಿಫಾರ್ಮ್ ಸಿವಿಲ್ ಕೋಡ್ ಜಾರಿಯಾಗಲಿದೆ. 2029ರ ಒಳಗೆ ಯುಸಿಸಿ ಜಾರಿಯಾಗಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಏಕರೂಪ ನಾಗರಿಕ ನೀತಿ ಸಂಹಿತೆ ಭಾರತಕ್ಕೆ ಅವಶ್ಯವಾಗಿದೆ. ಈ ಕುರಿತು ಕೇಂದ್ರ ಸರ್ಕಾರ ಬದ್ಧವಾಗಿದೆ. 2029ರ ಒಳಗೆ ಎನ್‌ಡಿಎ ಆಡಳಿತದ ರಾಜ್ಯಗಲ್ಲಿ ಯುಸಿಸಿ ಜಾರಿಯಾಗಲಿದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ. 2029ರಲ್ಲಿ ಮುಂದಿನ ಲೋಕಸಭಾ ಚುನಾವಣೆ ನಡೆಯಲಿದೆ. ಇದಕ್ಕೂ ಮೊದಲು ಯುಸಿಸಿ ಜಾರಿಯಾಗಲಿದೆ ಎಂದು ಅಮಿತ್ ಶಾ ಪರೋಕ್ಷವಾಗಿ ಹೇಳಿದ್ದಾರೆ.

ಐತಿಹಾಸಿಕ ಬಿಲ್

ಕಳೆದ 12 ವರ್ಷಗಳಿಂದ ಮೋದಿ ನಾಯಕತ್ವದಲ್ಲಿ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ. ಮೋದಿ ನಾಯಕತ್ವದಲ್ಲಿ ಬಿಜೆಪಿ ಹಲವು ಮಹತ್ತರ ಸಾಧನೆ ಮಾಡಿದೆ. ಮುಂದಿನ ದಿನಗಳಲ್ಲಿ ಹಲವು ಯೋಜನೆಗಳು, ಐತಿಹಾಸಿಕ ಬಿಲ್ ತರಲಿದ್ದೇವೆ ಎಂದು ಅಮಿತ್ ಶಾ ಹೇಳಿದ್ದಾರೆ. 2014ರ ಮೊದಲು ಭಾರತೀಯ ರಾಜಕೀಯ ಮೂರು ಸಮಸ್ಯೆಗಳಿಂದ ಬಳಲುತ್ತಿತ್ತು. ಭ್ರಷ್ಟಾಚಾರ, ಜಾತಿವಾದ, ವಂಶವಾದದಲ್ಲಿ ಭಾರತದ ರಾಜಕೀಯ ಕೇಂದ್ರಿಕೃತವಾಗಿತ್ತು. 2014ರ ಬಳಿಕ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ಬದಲಾಗಿದೆ. ಜನ ಈಗ ರಾಜಕೀಯವನ್ನು ಅವರ ಆಡಳಿತ, ಪರ್ಫಾಮೆನ್ಸ್ ಆಧಾರದಲ್ಲಿ ನೋಡುತ್ತಾರೆ. ಜನರ ಸಮಸ್ಯೆಗೆ ಪರಿಹಾರ ಸಿಕ್ಕಿದೆಯಾ, ಭಾರತದ ಅಭಿವೃದ್ಧಿಯಾಗಿದೆಯಾ, ಮೂಲಭೂತ ಸೌಕರ್ಯ ಸಿಕ್ಕಿದೆಯಾ ಅನ್ನೋ ಮಾನದಡಂಗಳಲ್ಲಿ ನೋಡುತ್ತಿದ್ದಾರೆ. ಇದು ಭಾರತದಲ್ಲಿ ಮಹತ್ತರ ಬದಲಾವಣೆ ಸೂಚನೆ ಎಂದು ಅಮಿತ್ ಶಾ ಹೇಳಿದ್ದಾರೆ.

ಭಾರತೀಯ ನ್ಯಾಯ ಸಂಹಿತೆ ಮೂಲಕ ದೇಶದಲ್ಲಿ ಕಠಿಣ ಕ್ರಮ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗುವ ಪ್ರಮಾಣ ಹೆಚ್ಚಿಸಲಾಗಿದೆ. ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಆರ್ಟಿಕಲ್ 370, 35ಎ ರದ್ದು ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳಿಲ್ಲದೆ ರದ್ದು ಮಾಡಲಾಗಿದೆ. ಕಾಶ್ಮೀರದ ಪರಿಸ್ಥಿತಿ ಹೇಗಿತ್ತು? ಈಗ ಹೇಗಿದೆ? ಕಲ್ಲು ತೂರಾಟ, ಗುಂಡಿನ ಸದ್ದುಗಳು ಕೇಳಿಸುತ್ತಲೇ ಇದ್ದ ಕಾಶ್ಮೀರದಲ್ಲಿ ಇದೀಗ ಯುವಕರು ಬದುಕು ಕಟ್ಟಿಕೊಳ್ಳುತ್ತಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.

ಭಾರತದ ಕೆಲ ರಾಜ್ಯಗಳು ನಕ್ಸಲ್ ಸಮಸ್ಯೆಯಿಂದ ಮುಳುಗಿತ್ತು. ಇಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಬರೋಬ್ಬರಿ 9000 ನಕ್ಸಲರ ಶರಣಾಗಿದ್ದಾರೆ. 14ಕ್ಕೂ ಹೆಚ್ಚು ಶಾಂತಿ ಒಪ್ಪಂದ ಮಾಡಲಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.