ಇಂಡಿಯಾ ಟುಡೇ ಮತ್ತು ಸಿ-ವೋಟರ್ ನಡೆಸಿದ 'ಮೂಡ್ ಆಫ್ ದಿ ನೇಷನ್' ಸಮೀಕ್ಷೆಯ ಪ್ರಕಾರ, ಇಂದು ಲೋಕಸಭಾ ಚುನಾವಣೆ ನಡೆದರೆ ಎನ್‌ಡಿಎ ಮೈತ್ರಿಕೂಟ 326 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ ಗಳಿಸಲಿದೆ. ಆದಾಗ್ಯೂ, ಕಳೆದ ಜನವರಿ ಸಮೀಕ್ಷೆಗೆ ಹೋಲಿಸಿದರೆ ಎನ್‌ಡಿಎ 26 ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.

ನವದೆಹಲಿ (ಆ.27): ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟವು ದೇಶದಲ್ಲಿ ಇಂದೇ ಲೋಕಸಭಾ ಚುನಾವಣೆ ನಡೆದರೂ ಸಹ ಸ್ಪಷ್ಟ ಬಹುಮತದೊಂದಿಗೆ ಮರಳಿ ಅಧಿಕಾರ ಹಿಡಿಯಲಿದೆ ಎಂದು ಪ್ರಸಿದ್ಧ 'ಮೂಡ್ ಆಫ್ ದಿ ನೇಷನ್' (MOTN) ಸಮೀಕ್ಷೆ ತಿಳಿಸಿದೆ. ಆದರೆ, ಕಳೆದ ಸಮೀಕ್ಷೆಗೆ ಹೋಲಿಸಿದರೆ ಎನ್‌ಡಿಎ ಮೈತ್ರಿಕೂಟದ ಸೀಟುಗಳ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದೆ.

ಇಂಡಿಯಾ ಟುಡೇ ಮತ್ತು ಸಿ-ವೋಟರ್ ಜಂಟಿಯಾಗಿ ನಡೆಸಿರುವ ನೂತನ ಸಮೀಕ್ಷೆಯ ಪ್ರಕಾರ, ಇಂದು ದೇಶದಲ್ಲಿ ಚುನಾವಣೆ ನಡೆದರೆ ಎನ್‌ಡಿಎ 326 ಲೋಕಸಭಾ ಕ್ಷೇತ್ರಗಳಲ್ಲಿ ಜಯಗಳಿಸುವ ಸಾಧ್ಯತೆಯಿದೆ. 2026 ರ ಜನವರಿಯಲ್ಲಿ ನಡೆದಿದ್ದ ಕಳೆದ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆಯಲ್ಲಿ ಎನ್‌ಡಿಎ 352 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಲಾಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಎನ್‌ಡಿಎ 26 ಸ್ಥಾನಗಳನ್ನು ಕಳೆದುಕೊಳ್ಳುವ ಮುನ್ಸೂಚನೆ ಸಿಕ್ಕಿದೆ.

2024 ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿದ್ದ '400 ಪಾರ್' (400ಕ್ಕೂ ಹೆಚ್ಚು ಸ್ಥಾನ) ಘೋಷಣೆಯಿಂದ ಎನ್‌ಡಿಎ ದೂರ ಉಳಿದಿದೆಯಾದರೂ, 'ಜೆನ್-ಝಿ' (Gen Z) ಪೀಳಿಗೆಯ ಸವಾಲುಗಳ ನಡುವೆಯೂ ಮೈತ್ರಿಕೂಟದ ಮೇಲಿರುವ ಮತದಾರರ ನಂಬಿಕೆ ಮತ್ತು ಜನಪ್ರಿಯತೆ ಇನ್ನೂ ಭದ್ರವಾಗಿದೆ ಎಂಬುದನ್ನು ಈ ಅಂಕಿ-ಅಂಶಗಳು ಸ್ಪಷ್ಟಪಡಿಸಿವೆ.

ವಿಪಕ್ಷ 'ಇಂಡಿಯಾ' ಮೈತ್ರಿಕೂಟಕ್ಕೆ ದಕ್ಕದ ದೊಡ್ಡ ಲಾಭ!

ಆದರೆ, 2024 ರ ಲೋಕಸಭಾ ಚುನಾವಣೆಯಲ್ಲಿ 'ಇಂಡಿಯಾ' ಕೂಟ ಪಡೆದುಕೊಂಡಿದ್ದ 234 ಸ್ಥಾನಗಳಿಗೆ ಹೋಲಿಸಿದರೆ ಇದು ಗಮನಾರ್ಹ ಕುಸಿತವಾಗಿದೆ. 2014 ರ ನಂತರ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟಕ್ಕೆ ಪ್ರತಿಪಕ್ಷಗಳು ನೀಡಿದ್ದ ಅತ್ಯಂತ ಕಠಿಣ ಸವಾಲು ಎಂದರೆ 2024 ರ ಚುನಾವಣೆಯೇ ಆಗಿತ್ತು.

'ಮೂಡ್ ಆಫ್ ದಿ ನೇಷನ್' ಎಂಬುದು ‘ಇಂಡಿಯಾ ಟುಡೇ ಗ್ರೂಪ್’ ಕಳೆದ ಎರಡು ದಶಕಗಳಿಂದ ವರ್ಷಕ್ಕೆರಡು ಬಾರಿ ಸರಣಿಯಾಗಿ ನಡೆಸಿಕೊಂಡು ಬರುತ್ತಿರುವ ಬೃಹತ್ ಸಮೀಕ್ಷೆಯಾಗಿದೆ. 2026 ರ ಆಗಸ್ಟ್ ಆವೃತ್ತಿಯ ಈ ಸಮೀಕ್ಷೆಯನ್ನು 'ಸಿ-ವೋಟರ್' (CVoter) ಸಂಸ್ಥೆಯು ಜುಲೈ 1 ರಿಂದ ಆಗಸ್ಟ್ 25 ರ ನಡುವೆ 25,184 ಜನರನ್ನು ನೇರವಾಗಿ ಸಂದರ್ಶಿಸಿ ಸಿದ್ಧಪಡಿಸಿದೆ. ಇದರೊಂದಿಗೆ, ಕಳೆದ 6 ತಿಂಗಳುಗಳಲ್ಲಿ ಸಿ-ವೋಟರ್ ತನ್ನ ನಿಯಮಿತ ಟ್ರ್ಯಾಕಿಂಗ್ ಭಾಗವಾಗಿ ನಡೆಸಿದ್ದ 91,795 ಸಂದರ್ಶನಗಳ ಗಣಾಂಕಗಳನ್ನೂ ಸಹ ಈ ಆವೃತ್ತಿಯ ಫಲಿತಾಂಶಕ್ಕೆ ಬಳಸಿಕೊಳ್ಳಲಾಗಿದೆ.