Rishi Design founder Pallavi: ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಹಾಗೂ 'ರಿಷಿ ಡಿಸೈನ್' ಸಂಸ್ಥೆಯ ಸಂಸ್ಥಾಪಕಿ ಪಲ್ಲವಿ ಲಕ್ಷ್ಮಿಕಾಂತ್ ಅವರು ನಿಧನರಾಗಿದ್ದಾರೆ. 'ಬಿಗ್ ಬಾಸ್' ಖ್ಯಾತಿಯ ಮಲ್ಲಮ್ಮ ಅವರಿಗೆ ಬೆಂಗಳೂರಿನಲ್ಲಿ ಆಶ್ರಯ ನೀಡಿ, ತಮ್ಮ ಬೋಟಿಕ್‌ನಲ್ಲಿ ಕೆಲಸ ಕೊಟ್ಟು, ಅವರು ಬಿಗ್ ಬಾಸ್ ವೇದಿಕೆ ಏರುವವರೆಗೆ ಪ್ರಮುಖ ಶಕ್ತಿಯಾಗಿ ನಿಂತಿದ್ದ ಪಲ್ಲವಿ ಅವರ ಹಠಾತ್ ಅಗಲಿಕೆ ಕಿರುತೆರೆ ಲೋಕಕ್ಕೆ ತೀವ್ರ ಆಘಾತ ತಂದಿದೆ.
ಖ್ಯಾತ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಹಾಗೂ 'ರಿಷಿ ಡಿಸೈನ್' (Rishi Design) ಸಂಸ್ಥೆಯ ಸಂಸ್ಥಾಪಕಿ ಪಲ್ಲವಿ ಲಕ್ಷ್ಮಿಕಾಂತ್ ಅವರು ನಿಧನರಾಗಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಮಲ್ಲಮ್ಮ ಅವರ ಬದುಕಿಗೆ ಆಸರೆಯಾಗಿದ್ದ, ಅವರ ಯಶಸ್ಸಿನ ಹಿಂದಿನ ಪ್ರಮುಖ ಶಕ್ತಿಯಾಗಿದ್ದ ಪಲ್ಲವಿ ಅವರ ಹಠಾತ್ ನಿಧನದ ಸುದ್ದಿ ಕಿರುತೆರೆ ಮತ್ತು ಫ್ಯಾಷನ್ ಲೋಕಕ್ಕೆ ತೀವ್ರ ಆಘಾತ ತಂದಿದೆ. ಸದ್ಯಕ್ಕೆ ಅವರ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ಮಲ್ಲಮ್ಮನ ಬದುಕಿಗೆ ದಾರಿದೀಪವಾಗಿದ್ದ ಪಲ್ಲವಿ
'ಬಿಗ್ ಬಾಸ್ ಕನ್ನಡ ಸೀಸನ್ 12'ರಲ್ಲಿ ಮೂರನೇ ಸ್ಪರ್ಧಿಯಾಗಿ ಮನೆ ಪ್ರವೇಶಿಸಿ, ತಮ್ಮ ಮುಗ್ಧತೆಯಿಂದ ಇಡೀ ಕರ್ನಾಟಕದ ಜನರ ಮನಗೆದ್ದಿದ್ದ ಮಲ್ಲಮ್ಮ ಅವರ ಈ ಸಾಧನೆಯ ಹಿಂದೆ ಪಲ್ಲವಿ ಅವರ ಪಾತ್ರ ಬಹಳ ದೊಡ್ಡದಿತ್ತು. ಉತ್ತರ ಕರ್ನಾಟಕದಿಂದ ಬಂದ ಮಲ್ಲಮ್ಮ ಅವರಿಗೆ ಬೆಂಗಳೂರಿನಲ್ಲಿ ಆಶ್ರಯ ನೀಡಿ, ತಮ್ಮ ಫ್ಯಾಷನ್ ಬೋಟಿಕ್‌ನಲ್ಲೇ ಕೆಲಸ ನೀಡಿದ್ದರು. ಮಲ್ಲಮ್ಮ ಅವರನ್ನು ಕೇವಲ ಕೆಲಸದಾಕೆಯಂತೆ ನೋಡದೆ, ತಮ್ಮ ಮನೆಯವರಂತೆ ಪ್ರೀತಿಯಿಂದ ನೋಡಿಕೊಂಡಿದ್ದರು. ಕಿರುತೆರೆ ನಟ ಮನೋಜ್ ಕುಮಾರ್ ಅವರಷ್ಟೇ ಮಲ್ಲಮ್ಮ ಬಿಗ್ ಬಾಸ್ ವೇದಿಕೆಗೆ ಹೋಗಲು ಪಲ್ಲವಿ ಅವರೂ ಪ್ರಮುಖ ಕಾರಣಕರ್ತರಾಗಿದ್ದರು.
"ನಮ್ಮ ಮೇಡಂ ಅಂದ್ರೆ ನನಗೆ ಪ್ರಾಣ"
ಬಿಗ್ ಬಾಸ್‌ನಿಂದ ಹೊರಬಂದ ನಂತರ ನೀಡಿದ ಪ್ರತಿಯೊಂದು ಸಂದರ್ಶನದಲ್ಲೂ ಮಲ್ಲಮ್ಮ ತಮ್ಮ ಪಲ್ಲವಿ ಮೇಡಂ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಿದ್ದರು. "ನಮ್ಮ ಮೇಡಂ ಅಂದ್ರೆ ನನಗೆ ತುಂಬಾ ಇಷ್ಟ, ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ" ಎಂದು ಭಾವುಕರಾಗಿ ಹೇಳಿಕೊಳ್ಳುತ್ತಿದ್ದರು. ಇದೀಗ ತಮ್ಮನ್ನು ಈ ಮಟ್ಟಕ್ಕೆ ಬೆಳೆಸಿದ ಆ ಪ್ರೀತಿಯ 'ಮೇಡಂ' ಇನ್ನಿಲ್ಲ ಎಂಬ ಸುದ್ದಿ ಮಲ್ಲಮ್ಮ ಅವರಿಗೆ ಸಹಿಸಲಾಗದ ಆಘಾತ ತಂದಿದೆ.
ಸೆಲೆಬ್ರಿಟಿಗಳ ನೆಚ್ಚಿನ ಡಿಸೈನರ್
ಪಲ್ಲವಿ ಅವರು ಕೇವಲ ಬೋಟಿಕ್ ಮಾಲೀಕರಷ್ಟೇ ಅಲ್ಲದೆ, ಚಂದನವನದ ಖ್ಯಾತ ನಟ-ನಟಿಯರಿಗೆ ಮತ್ತು ಸೆಲೆಬ್ರಿಟಿಗಳಿಗೆ ಕಾಸ್ಟ್ಯೂಮ್ ಡಿಸೈನ್ ಮಾಡುತ್ತಿದ್ದ ಜನಪ್ರಿಯ ಫ್ಯಾಷನ್ ಡಿಸೈನರ್ ಆಗಿದ್ದರು. 'ರಿಷಿ ಡಿಸೈನ್' ಮೂಲಕ ಫ್ಯಾಷನ್ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಕಂಬನಿ ಮಿಡಿದ ನೆಟ್ಟಿಗರು
ಪಲ್ಲವಿ ಅವರ ಅಕಾಲಿಕ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಹಾಗೂ ಆಪ್ತರು ತೀವ್ರ ಸಂತಾಪ ಸೂಚಿಸಿದ್ದಾರೆ. "ಅಯ್ಯೋ ದೇವರೇ… ಇದನ್ನು ನಂಬಲಿಕ್ಕೇ ಸಾಧ್ಯವಾಗುತ್ತಿಲ್ಲ. ಪಲ್ಲವಿ ಅವರು ಅತ್ಯಂತ ಒಳ್ಳೆಯ ವ್ಯಕ್ತಿಯಾಗಿದ್ದರು. ಮಲ್ಲಮ್ಮ ಇಂದು ಇಷ್ಟೊಂದು ಫೇಮಸ್ ಆಗಿ ಬಿಗ್ ಬಾಸ್‌ಗೆ ಹೋಗಲು ಪಲ್ಲವಿ ಹಾಗೂ ರಿಷಿ ಅವರೇ ಮುಖ್ಯ ಕಾರಣ. ಇಬ್ಬರೂ ತುಂಬಾ ಒಳ್ಳೆಯ ಜೀವಗಳು, ಇಂತಹ ಒಳ್ಳೆಯ ವ್ಯಕ್ತಿಗೆ ಹೀಗಾಗಬಾರದಿತ್ತು" ಎಂದು ನೆಟ್ಟಿಗರು ಕಣ್ಣೀರಿಡುತ್ತಿದ್ದಾರೆ.
ಒಳ್ಳೆಯ ಮನಸ್ಸಿನ, ಸದಾ ನಗುಮುಖದ ಡಿಸೈನರ್ ಪಲ್ಲವಿ ಅವರ ನಿಧನಕ್ಕೆ ಚಿತ್ರರಂಗ ಮತ್ತು ಕಿರುತೆರೆ ಗಣ್ಯರು ಕಂಬನಿ ಮಿಡಿದಿದ್ದಾರೆ.

