2 ಕೋಟಿ ರೂಪಾಯಿ ಬಜೆಟ್ ಮೂಲಕ ನಿರ್ಮಾಣವಾದ ಹನುಮಾನ್ ಅಂಶ್ ಸಿನಿಮಾ ಈಗಾಗಲೇ 75 ಕೋಟಿ ರೂಪಾಯಿ ದಾಖಲೆ ಕಲೆಕ್ಷನ್ ಮಾಡಿದೆ. ಇದೀಗ ಈ ಸಿನಿಮಾವನ್ನು ಕರ್ನಾಟಕದ ಹೆಮ್ಮೆಯ ಹೊಂಬಾಳೆ ಫಿಲ್ಮ್ಸ್ ಜಾಗತಿಕ ರಿಲೀಸ್ ಮಾಡುತ್ತಿದೆ.
ಭಾರತೀಯ ಚಿತ್ರರಂಗದ ಕಥೆಗಳು ಮತ್ತು ನಮ್ಮ ಸಂಸ್ಕೃತಿಯನ್ನು ಗಡಿಗಳನ್ನು ದಾಟಿಸಿ ಜಾಗತಿಕ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಸದಾ ಮುಂಚೂಣಿಯಲ್ಲಿರುವ ಕರ್ನಾಟಕದ ಹೆಮ್ಮೆಯ ಹೊಂಬಾಳೆ ಫಿಲ್ಮ್ಸ್, ಭಕ್ತಿಪ್ರಧಾನ ಚಿತ್ರ ‘ಹನುಮಾನ್ ಅಂಶ್’ ಚಿತ್ರದ ವಿದೇಶಿ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದೆ. ಭಾರತದಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರವು ಇದೀಗ ಸೆಪ್ಟೆಂಬರ್ 11, 2026ರಂದು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ.
ನೀಮ್ ಕರೋಲಿ ಬಾಬಾ ಜೀವನ ಆಧಾರಿತ ಸಿನಿಮಾ
ವಿಶಾಲ್ ಚತುರ್ವೇದಿ ನಿರ್ದೇಶನ ಮತ್ತು ಬರವಣಿಗೆಯ ಹನುಮಾನ್ ಅಂಶ್, ಭಕ್ತರು ಹನುಮಂತನ ಅವತಾರವೆಂದು ನಂಬುವ ಪ್ರಸಿದ್ಧ ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ, ಮಹಾರಾಜ್-ಜೀ ಅವರ ಜೀವನವನ್ನು ಆಧರಿಸಿದೆ. ಪ್ರೀತಿ, ಭಕ್ತಿ, ಸೇವೆ ಮತ್ತು ಆಧ್ಯಾತ್ಮಿಕತೆಯ ಸಂದೇಶವನ್ನು ಸಾರಿದ ಮಹಾರಾಜ್-ಜೀ ಅವರ ಪ್ರಭಾವ ಭಾರತವನ್ನು ಮೀರಿ ಜಗತ್ತಿನಾದ್ಯಂತ ಹರಡಿದೆ. ವಿಶೇಷವಾಗಿ 1960 ಮತ್ತು 70ರ ದಶಕಗಳಲ್ಲಿ ಭಾರತಕ್ಕೆ ಆಗಮಿಸಿದ ಹಲವಾರು ಪಾಶ್ಚಿಮಾತ್ಯ ಆಧ್ಯಾತ್ಮಿಕ ಅನ್ವೇಷಕರ ಮೇಲೆ ಅವರ ಪ್ರಭಾವ ಗಾಢವಾಗಿತ್ತು.
ದಾಖಲೆ ಕಲೆಕ್ಷನ್ ಕಂಡ ಸಿನಿಮಾ
ಭಾರತದಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಹನುಮಾನ್ ಅಂಶ್ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಗಮನಾರ್ಹ ಬೆಳವಣಿಗೆ ಕಂಡಿದೆ. ಸುಮಾರು ₹10 ಲಕ್ಷದ ಆರಂಭಿಕ ಗಳಿಕೆಯಿಂದ ಚಿತ್ರವು 26ನೇ ದಿನಕ್ಕೆ ₹63.82 ಕೋಟಿಗೂ ಅಧಿಕ ಗಳಿಕೆ ದಾಖಲಿಸಿದೆ ಎಂದು ವರದಿಯಾಗಿದೆ. ಪ್ರೇಕ್ಷಕರಿಂದ ದೊರೆತ ಉತ್ತಮ ಪ್ರತಿಕ್ರಿಯೆ ಮತ್ತು ಬಲವಾದ ವರ್ಡ್ ಆಫ್ ಮೌತ್ ಚಿತ್ರದ ಯಶಸ್ಸಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ದಿಗ್ಗಜರು ಬೇಟಿ ನೀಡಿದ ಕ್ಷೇತ್ರ
ಮಹಾರಾಜ್-ಜೀ ಅವರ ಆಧ್ಯಾತ್ಮಿಕ ಪ್ರಭಾವವು ಸ್ಟೀವ್ ಜಾಬ್ಸ್, ಮಾರ್ಕ್ ಜುಕರ್‌ಬರ್ಗ್ ಮತ್ತು ಜೂಲಿಯಾ ರಾಬರ್ಟ್ಸ್ ಅವರಂತಹ ಜಾಗತಿಕ ವ್ಯಕ್ತಿಗಳೊಂದಿಗೆ ಕೂಡ ಸಂಬಂಧ ಹೊಂದಿದೆ. ಸ್ಟೀವ್ ಜಾಬ್ಸ್ 1974ರಲ್ಲಿ ಮಹಾರಾಜ್-ಜೀ ಅವರನ್ನು ಭೇಟಿಯಾಗುವ ಆಧ್ಯಾತ್ಮಿಕ ಹುಡುಕಾಟದಲ್ಲಿ ಭಾರತಕ್ಕೆ ಬಂದಿದ್ದರು. ಮಾರ್ಕ್ ಜುಕರ್‌ಬರ್ಗ್ ಕೂಡ ಭಾರತ ಪ್ರವಾಸದ ವೇಳೆ ಕೈಂಚಿ ಧಾಮ್ಗೆ ಭೇಟಿ ನೀಡಿದ್ದರು. ಜೂಲಿಯಾ ರಾಬರ್ಟ್ಸ್ ಅವರು ಕೂಡ ಮಹಾರಾಜ್-ಜೀ ಅವರ ಚಿತ್ರವು ತಮ್ಮ ಆಧ್ಯಾತ್ಮಿಕ ಪಯಣದ ಮೇಲೆ ಪ್ರಭಾವ ಬೀರಿದ್ದನ್ನು ಹಂಚಿಕೊಂಡಿದ್ದಾರೆ. ಭಾರತದಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಸೇರಿದಂತೆ ಹಲವು ಗಣ್ಯರು ಕೈಂಚಿ ಧಾಮ್ಗೆ ಭೇಟಿ ನೀಡಿದ್ದಾರೆ.
ಕೈಂಚಿ ಧಾಮ್‌ನಿಂದ ಜಗತ್ತಿನ ವೇದಿಕೆಯವರೆಗೆ ಮಹಾರಾಜ್-ಜೀ ಅವರ ಕಥೆ ಈಗ ಗಡಿಗಳನ್ನು ದಾಟಿ ಜಾಗತಿಕ ಪ್ರೇಕ್ಷಕರನ್ನು ತಲುಪಲು ಸಜ್ಜಾಗಿದೆ.


