ಕನ್ನಡ ನಟಿ ಆಶಿಕಾ ರಂಗನಾಥ್ ಸಿನಿಮಾಗಳ ಸಂಖ್ಯೆಯಿಗಿಂತ ಪಾತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದಾಗಿ ಹೇಳಿದ್ದಾರೆ. ಪ್ರತಿಯೊಂದು ಸಿನಿಮಾದಲ್ಲೂ ವಿಭಿನ್ನವಾಗಿ ಕಾಣಿಸಿಕೊಳ್ಳಬೇಕು ಎಂಬ ತಮ್ಮ ಆಸೆಯನ್ನು ಹಂಚಿಕೊಂಡಿದ್ದಾರೆ.
ಸಿನಿರಂಗದಲ್ಲಿ ಕೆಲ ನಟಿಯರು ಒಂದೆರಡು ಸಿನಿಮಾಗಳಲ್ಲಿ ಮಿಂಚಿ ಬಳಿಕ ಚಿತ್ರರಂಗದಿಂದ ದೂರವಾಗುತ್ತಾರೆ. ಇನ್ನೂ ಕೆಲವರು ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳದಿದ್ದರೂ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ. ಆಗಾಗ ಗ್ಲಾಮರಸ್ ಫೋಟೋಗಳು ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಫ್ಯಾನ್ಸ್‌ಗೆ ಟ್ರೀಟ್ ನೀಡುತ್ತಿರುತ್ತಾರೆ.
ಇನ್ನು ಕೆಲ ನಟಿಯರಿಗೆ ಮಾತ್ರ ಸಿನಿಮಾಗಳ ಸಂಖ್ಯೆಗಿಂತ ತಾವು ಆಯ್ಕೆ ಮಾಡಿಕೊಳ್ಳುವ ಪಾತ್ರಗಳೇ ಹೆಚ್ಚು ಮುಖ್ಯ. ಸವಾಲಿನ ಪಾತ್ರಗಳು ಸಿಕ್ಕಾಗ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಲು ಕಾಯುವ ಇಂತಹ ನಟಿಯರ ಸಾಲಿಗೆ ಇದೀಗ ಮತ್ತೊಬ್ಬ ನಾಯಕಿ ಸೇರಿದ್ದಾರೆ. ಸತತವಾಗಿ ಸಿನಿಮಾಗಳನ್ನು ಮಾಡುವುದಕ್ಕಿಂತ, ನೆನಪಿನಲ್ಲಿ ಉಳಿಯುವಂತಹ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಮುಖ್ಯ ಎಂದು ಈ ಕ್ಯೂಟ್ ಬೆಡಗಿ ಹೇಳಿಕೊಂಡಿದ್ದಾರೆ.
ಪಾತ್ರಗಳೇ ನನಗೆ ಮೊದಲ ಆದ್ಯತೆ!
ಅಷ್ಟಕ್ಕೂ ಈ ಮಾತು ಹೇಳಿರುವ ನಟಿ ಯಾರು ಅಂತೀರಾ? ಬೇರೆ ಯಾರೂ ಅಲ್ಲ, ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡು ಇದೀಗ ಟಾಲಿವುಡ್‌ನಲ್ಲೂ ಮಿಂಚುತ್ತಿರುವ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್. ಸಿನಿಮಾಗಳ ಸಂಖ್ಯೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಕ್ಕಿಂತ, ತಾನು ನಟಿಸುವ ಪ್ರತಿಯೊಂದು ಚಿತ್ರದಲ್ಲೂ ವಿಭಿನ್ನವಾಗಿ ಕಾಣಿಸಿಕೊಳ್ಳಬೇಕು ಎಂಬುದು ತಮ್ಮ ಆಸೆ ಎಂದು ಆಶಿಕಾ ಹೇಳಿದ್ದಾರೆ. ನಾಯಕಿಯಾಗಿ ಅವಕಾಶ ಸಿಗುವುದು ಒಂದು ವಿಚಾರವಾದರೆ, ಸಿಕ್ಕ ಪ್ರತಿಯೊಂದು ಸಿನಿಮಾದಲ್ಲೂ ಪ್ರೇಕ್ಷಕರಿಗೆ ಹೊಸ ಆಶಿಕಾಳನ್ನು ತೋರಿಸುವುದು ತಮ್ಮ ಗುರಿ ಎಂದಿದ್ದಾರೆ.
ಸ್ಟಾರ್ ಹೀರೋಗಳಿಗಿಂತ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ!
ಸ್ಟಾರ್ ಹೀರೋಗಳ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವುದಕ್ಕಿಂತಲೂ, ಕಥೆಯಲ್ಲಿ ತನ್ನ ಪಾತ್ರಕ್ಕೆ ಸೂಕ್ತವಾದ ಪ್ರಾಮುಖ್ಯತೆ ಇರಬೇಕು ಎಂಬುದು ಆಶಿಕಾ ಅವರ ಅಭಿಪ್ರಾಯ. ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದೇನೆ ಎಂಬ ಹೆಗ್ಗಳಿಕೆಗಿಂತ, ತಾನು ಮಾಡಿದ ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯಬೇಕು ಎಂಬುದೇ ಮುಖ್ಯ ಎಂದು ಅವರು ಹೇಳಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೂಡ ವಿಭಿನ್ನ ಹಾಗೂ ಪ್ರಾಮುಖ್ಯತೆ ಇರುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಸೂಚನೆಯನ್ನು ಸಹ ನೀಡಿದ್ದಾರೆ.
ಸ್ಯಾಂಡಲ್‌ವುಡ್‌ನಿಂದ ಟಾಲಿವುಡ್‌ವರೆಗೆ ಆಶಿಕಾ ಜರ್ನಿ
1996ರ ಆಗಸ್ಟ್ 5ರಂದು ಕರ್ನಾಟಕದ ತುಮಕೂರಿನಲ್ಲಿ ಜನಿಸಿದ ಆಶಿಕಾ ರಂಗನಾಥ್, ರಂಗನಾಥ್ ಮತ್ತು ಸುಧಾ ರಂಗನಾಥ್ ದಂಪತಿಯ ಪುತ್ರಿ. ಇವರಿಗೆ ಅನುಷಾ ರಂಗನಾಥ್ ಎಂಬ ಅಕ್ಕ ಕೂಡ ಇದ್ದು, ಅವರು ಕೂಡ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆಶಿಕಾ ಫ್ರೀಸ್ಟೈಲ್, ಬೆಲ್ಲಿ ಡ್ಯಾನ್ಸ್ ಹಾಗೂ ವೆಸ್ಟರ್ನ್ ಡ್ಯಾನ್ಸ್‌ನಲ್ಲಿ ತರಬೇತಿ ಪಡೆದಿದ್ದಾರೆ. 2014ರಲ್ಲಿ ನಡೆದ ‘ಕ್ಲೀನ್ ಅಂಡ್ ಕ್ಲಿಯರ್ ಫ್ರೆಶ್ ಫೇಸ್ ಬೆಂಗಳೂರು’ ಸ್ಪರ್ಧೆಯಲ್ಲಿ ರನ್ನರ್‌ಅಪ್ ಆಗಿ ಗುರುತಿಸಿಕೊಂಡಿದ್ದರು.
2016ರಲ್ಲಿ ಬಿಡುಗಡೆಯಾದ ‘ಕ್ರೇಜಿ ಬಾಯ್’ ಚಿತ್ರದ ಮೂಲಕ ಆಶಿಕಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಈ ಸಿನಿಮಾದಲ್ಲಿನ ಅಭಿನಯಕ್ಕಾಗಿ ಸೈಮಾ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಡೆಬ್ಯೂ ನಟಿ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದರು. ಆ ಬಳಿಕ ‘ರ್ಯಾಂಬೋ 2’, ‘ರೇಮೋ’, ‘ಮದಗಜ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಕನ್ನಡ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ‘ಮದಗಜ’ ಚಿತ್ರದ ಅಭಿನಯಕ್ಕಾಗಿ ಸೈಮಾ ಅತ್ಯುತ್ತಮ ನಟಿ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು.
‘ಅಮಿಗೋಸ್’ ಮೂಲಕ ಟಾಲಿವುಡ್‌ಗೆ ಪರಿಚಯ
2023ರಲ್ಲಿ ನಂದಮೂರಿ ಕಲ್ಯಾಣ್ ರಾಮ್ ಅಭಿನಯದ ‘ಅಮಿಗೋಸ್’ ಚಿತ್ರದ ಮೂಲಕ ಆಶಿಕಾ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ಬಳಿಕ 2024ರಲ್ಲಿ ಕಿಂಗ್ ನಾಗಾರ್ಜುನ ಅಭಿನಯದ ‘ನಾ ಸಾಮಿರಂಗ’ ಸಿನಿಮಾದಲ್ಲಿ ಕಾಣಿಸಿಕೊಂಡು ತೆಲುಗು ಪ್ರೇಕ್ಷಕರ ಗಮನ ಸೆಳೆದರು. ವಿಶೇಷವಾಗಿ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ‘ವಿಶ್ವಂಭರ’ ಸಿನಿಮಾದಲ್ಲೂ ಆಶಿಕಾ ನಟಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲೂ ಸಖತ್ ಆಕ್ಟಿವ್
ಸಿನಿಮಾಗಳ ಜೊತೆಗೆ ಸೋಷಿಯಲ್ ಮೀಡಿಯಾದಲ್ಲೂ ಆಶಿಕಾ ರಂಗನಾಥ್ ಸಖತ್ ಆಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಫೋಟೋಗಳು, ವಿಡಿಯೋಗಳು ಹಾಗೂ ಗ್ಲಾಮರಸ್ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿರುತ್ತಾರೆ. ಇನ್ನು ಸಿನಿಮಾಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದಕ್ಕಿಂತ ತಮ್ಮ ಪಾತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂಬ ಆಶಿಕಾ ಅವರ ನಿಲುವು ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಮುಂದೆ ಯಾವ ರೀತಿಯ ವಿಭಿನ್ನ ಪಾತ್ರಗಳ ಮೂಲಕ ಆಶಿಕಾ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಎಂಬುದೇ ಸದ್ಯ ಕುತೂಹಲ ಮೂಡಿಸಿದೆ.


