ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಅಭಿನಯದ ಸಿನಿಮಾಗಳಿಗೆ ಅಭಿಮಾನಿಗಳಲ್ಲಿ ಯಾವಾಗಲೂ ವಿಶೇಷ ನಿರೀಕ್ಷೆ ಇರುತ್ತದೆ. ಇದೀಗ ಶಿವಣ್ಣ ನಟಿಸಿರುವ ಬಹುನಿರೀಕ್ಷಿತ ‘ಕೂರ್ಮಾವತಾರ್’ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಅಭಿನಯದ ಸಿನಿಮಾಗಳಿಗೆ ಅಭಿಮಾನಿಗಳಲ್ಲಿ ಯಾವಾಗಲೂ ವಿಶೇಷ ನಿರೀಕ್ಷೆ ಇರುತ್ತದೆ. ಇದೀಗ ಶಿವಣ್ಣ ನಟಿಸಿರುವ ಬಹುನಿರೀಕ್ಷಿತ ‘ಕೂರ್ಮಾವತಾರ್’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಪೌರಾಣಿಕತೆ, ಮಿಸ್ಟರಿ ಹಾಗೂ ಆ್ಯಕ್ಷನ್‌ನ ವಿಭಿನ್ನ ಸಂಯೋಜನೆ ಸಿನಿಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿವರಾಜ್‌ಕುಮಾರ್, ಸಿನಿಮಾದಲ್ಲಿ ತಮ್ಮ ಅನುಭವ, ನಿರ್ದೇಶಕರ ಮೇಲಿಟ್ಟ ನಂಬಿಕೆ ಹಾಗೂ ತಮ್ಮ ಪಾತ್ರದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅದರಲ್ಲೂ, ‘ನನ್ನ ಪರ್ಫಾರ್ಮೆನ್ಸ್ ನಿರ್ದೇಶಕರಿಗೆ ಇಷ್ಟವಾಗಿದೆಯೇ ಎಂಬುದೇ ನನಗೆ ಮುಖ್ಯ’ ಎಂಬರ್ಥದಲ್ಲಿ ಶಿವಣ್ಣ ಹೇಳಿರುವ ಮಾತು ಅವರ ಸರಳತೆ ಮತ್ತು ಕಲೆಯ ಮೇಲಿನ ಬದ್ಧತೆಯನ್ನು ಮತ್ತೊಮ್ಮೆ ತೋರಿಸಿದೆ.

‘ನನ್ನ ಪರ್ಫಾರ್ಮೆನ್ಸ್‌ನಿಂದ ನಿರ್ದೇಶಕರು ಖುಷಿಯಾಗಿರಬೇಕು ಅನ್ನೋದೇ ಆಸೆ!’

‘ಕೂರ್ಮಾವತಾರ್’ ಸಿನಿಮಾದಲ್ಲಿ ಕೆಲಸ ಮಾಡಿರುವ ಅನುಭವದ ಬಗ್ಗೆ ಮಾತನಾಡಿದ ಶಿವಣ್ಣ, ನಿರ್ದೇಶಕ ಹರ್ಷವರ್ಧನ್ ಕಡಿಯಾಳ ಅವರ ದೃಷ್ಟಿಕೋನದ ಮೇಲೆ ತಾವು ಸಂಪೂರ್ಣ ನಂಬಿಕೆ ಇಟ್ಟಿದ್ದಾಗಿ ಹೇಳಿದ್ದಾರೆ. ‘ನನ್ನ ಅಭಿನಯದಿಂದ ನಿರ್ದೇಶಕರು ಖುಷಿಯಾಗಿದ್ದಾರೆ ಮತ್ತು ತೃಪ್ತರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ’ ಎಂದು ಶಿವಣ್ಣ ಹೇಳಿದ್ದಾರೆ.

ಚಿತ್ರದ ನಿರ್ದೇಶಕರು ಇಂಡಸ್ಟ್ರಿಗೆ ಹೊಸಬರಾಗಿದ್ದರೂ, ಅವರ ಕಥೆ ಮತ್ತು ದೃಷ್ಟಿಕೋನದ ಮೇಲೆ ನಂಬಿಕೆ ಇಟ್ಟು ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾಗಿ ಶಿವಣ್ಣ ತಿಳಿಸಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಮನೋಭಾವದ ಜೊತೆಗೆ, ನಿರ್ದೇಶಕರ ಕಲ್ಪನೆಯಂತೆ ಪಾತ್ರವನ್ನು ಕಟ್ಟಿಕೊಡುವುದು ತಮ್ಮ ಜವಾಬ್ದಾರಿ ಎಂಬ ರೀತಿಯಲ್ಲಿ ಅವರು ಮಾತನಾಡಿದ್ದಾರೆ.

ಪೌರಾಣಿಕತೆ, ಮಿಸ್ಟರಿ, ಆ್ಯಕ್ಷನ್... ‘ಕೂರ್ಮಾವತಾರ್’ ಟೀಸರ್‌ನಲ್ಲಿ ಏನಿದೆ?

ವಿಷ್ಣುವಿನ ಕೂರ್ಮ ಅವತಾರದಿಂದ ಪ್ರೇರಣೆ ಪಡೆದಿರುವ ‘ಕೂರ್ಮಾವತಾರ್’ ಸಿನಿಮಾ ಪೌರಾಣಿಕ ಹಿನ್ನೆಲೆಯ ಜೊತೆಗೆ ಮಿಸ್ಟರಿ ಮತ್ತು ಆ್ಯಕ್ಷನ್ ಅಂಶಗಳನ್ನು ಒಳಗೊಂಡಿರುವಂತೆ ಟೀಸರ್‌ನಲ್ಲಿ ಸುಳಿವು ನೀಡಿದೆ. ಟೀಸರ್ ಸಂಪೂರ್ಣ ಕಥೆಯನ್ನು ಬಹಿರಂಗಪಡಿಸದೇ ಪ್ರೇಕ್ಷಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಪುರಾತನ ಜಗತ್ತು ಮತ್ತು ಆಧುನಿಕ ಕಾಲಘಟ್ಟವನ್ನು ಒಂದು ವಿಭಿನ್ನ ಕಥಾಹಂದರದಲ್ಲಿ ಜೋಡಿಸುವ ಪ್ರಯತ್ನ ಇಲ್ಲಿ ಕಾಣಿಸುತ್ತಿದೆ. ಹರ್ಷವರ್ಧನ್ ಕಡಿಯಾಳ ನಿರ್ದೇಶನದ ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಜೊತೆಗೆ ಸಾಯಿ ಕುಮಾರ್, ವರಲಕ್ಷ್ಮಿ ಶರತ್‌ಕುಮಾರ್ ಹಾಗೂ ರಾಜ್ ತರುಣ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ.

‘ತೆಲುಗಿನಲ್ಲಿ ನನಗೆ ಅದೃಷ್ಟ ಚೆನ್ನಾಗಿದೆ!’

ತೆಲುಗು ಚಿತ್ರರಂಗದೊಂದಿಗಿನ ತಮ್ಮ ನಂಟಿನ ಬಗ್ಗೆಯೂ ಶಿವಣ್ಣ ಮಾತನಾಡಿದ್ದಾರೆ. ತೆಲುಗಿನಲ್ಲಿ ತಮ್ಮ ಪಯಣ ಆರಂಭವಾಗಿದ್ದು 2017ರಲ್ಲಿ ನಂದಮೂರಿ ಬಾಲಕೃಷ್ಣ ಅಭಿನಯದ ‘ಗೌತಮಿಪುತ್ರ ಶಾತಕರ್ಣಿ’ ಸಿನಿಮಾದಲ್ಲಿ ವಿಶೇಷ ಪಾತ್ರದ ಮೂಲಕ ಎಂದು ಅವರು ನೆನಪಿಸಿಕೊಂಡಿದ್ದಾರೆ. ಅದಾದ ಬಳಿಕ 2026ರ ‘ಪೆಡ್ಡಿ’ ಸಿನಿಮಾದಲ್ಲೂ ಕಾಣಿಸಿಕೊಂಡಿರುವ ಶಿವಣ್ಣ, ಇದೀಗ ‘ಕೂರ್ಮಾವತಾರ್’ ಚಿತ್ರದ ಭಾಗವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ತೆಲುಗು ಚಿತ್ರರಂಗದಲ್ಲಿ ತಮ್ಮ ಮೇಲಿನ ಪ್ರೀತಿ ಮತ್ತು ಸ್ವೀಕಾರಕ್ಕೆ ತಾವು ಅದೃಷ್ಟಶಾಲಿ ಎಂದು ಭಾವಿಸುವುದಾಗಿ ಶಿವಣ್ಣ ಹೇಳಿದ್ದಾರೆ.

ಫೈಟ್ ಸೀಕ್ವೆನ್ಸ್‌ಗಳಲ್ಲಿ ಸಖತ್ ಎಂಜಾಯ್ ಮಾಡಿದ ಶಿವಣ್ಣ!

‘ಕೂರ್ಮಾವತಾರ್’ ಶೂಟಿಂಗ್ ವೇಳೆ ನಡೆದ ಆ್ಯಕ್ಷನ್ ಸನ್ನಿವೇಶಗಳ ಅನುಭವವನ್ನೂ ಶಿವಣ್ಣ ಹಂಚಿಕೊಂಡಿದ್ದಾರೆ. ವಿಶೇಷವಾಗಿ ಫೈಟ್ ಸೀಕ್ವೆನ್ಸ್‌ಗಳ ಚಿತ್ರೀಕರಣದ ವೇಳೆ ಸೆಟ್‌ನಲ್ಲಿ ಉತ್ತಮ ಎನರ್ಜಿ ಇತ್ತು ಎಂದು ಅವರು ಹೇಳಿದ್ದಾರೆ. ಆ್ಯಕ್ಷನ್ ದೃಶ್ಯಗಳಲ್ಲಿ ಕೆಲಸ ಮಾಡುವಾಗ ಸಾಕಷ್ಟು ಮಜಾ ಸಿಕ್ಕಿತು. ಇಡೀ ತಂಡವೇ ಉತ್ಸಾಹದಿಂದ ಕೆಲಸ ಮಾಡಿದ್ದು, ಶೂಟಿಂಗ್ ಅನುಭವವನ್ನು ಮತ್ತಷ್ಟು ಆನಂದದಾಯಕವಾಗಿಸಿತು ಎಂದು ಶಿವಣ್ಣ ನೆನಪಿಸಿಕೊಂಡಿದ್ದಾರೆ.

ಸಾಯಿ ಕುಮಾರ್ ಜೊತೆ ಮತ್ತೆ ಸ್ಕ್ರೀನ್ ಶೇರ್!

ಸಾಯಿ ಕುಮಾರ್ ಅವರೊಂದಿಗೆ ಮತ್ತೊಮ್ಮೆ ಕೆಲಸ ಮಾಡುತ್ತಿರುವುದಕ್ಕೂ ಶಿವಣ್ಣ ಸಂತಸ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಅವರೊಂದಿಗೆ ಕೆಲಸ ಮಾಡಿದ್ದ ನೆನಪುಗಳನ್ನು ಮೆಲುಕು ಹಾಕಿದ ಶಿವಣ್ಣ, ಮತ್ತೆ ಒಟ್ಟಿಗೆ ನಟಿಸುವ ಅವಕಾಶ ಸಿಕ್ಕಿರುವುದಕ್ಕೆ ಖುಷಿ ಪಟ್ಟಿದ್ದಾರೆ. ಇದೇ ವೇಳೆ ವರಲಕ್ಷ್ಮಿ ಶರತ್‌ಕುಮಾರ್ ಅವರ ಅಭಿನಯದ ಬಗ್ಗೆಯೂ ಶಿವಣ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ನಟನೆಯಷ್ಟೇ ಅಲ್ಲದೆ, ನಿರ್ದೇಶಕಿಯಾಗಿ ಅವರ ದೃಷ್ಟಿಕೋನವನ್ನೂ ತಾವು ಮೆಚ್ಚಿಕೊಂಡಿರುವುದಾಗಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ವರಲಕ್ಷ್ಮಿ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡುವ ಅವಕಾಶ ಸಿಗಲಿ ಎಂಬ ಆಶಯವನ್ನೂ ಶಿವಣ್ಣ ವ್ಯಕ್ತಪಡಿಸಿದ್ದಾರೆ.

ಪ್ರೇಕ್ಷಕರ ಪ್ರೀತಿಯೇ ಶಿವಣ್ಣನಿಗೆ ದೊಡ್ಡ ಎನರ್ಜಿ!

ಎಷ್ಟೇ ದೊಡ್ಡ ಸಿನಿಮಾ ಆಗಿರಲಿ, ಎಷ್ಟೇ ವಿಭಿನ್ನ ಪಾತ್ರವಾಗಿರಲಿ, ಕಲಾವಿದನಿಗೆ ಪ್ರೇಕ್ಷಕರ ಮೆಚ್ಚುಗೆಯೇ ಹೊಸ ಹುರುಪು ನೀಡುತ್ತದೆ ಎಂಬ ಮಾತನ್ನೂ ಶಿವಣ್ಣ ಹೇಳಿದ್ದಾರೆ. ಪ್ರೇಕ್ಷಕರಿಂದ ಸಿಗುವ ಪ್ರೀತಿ, ಚಿತ್ರತಂಡದ ಮೆಚ್ಚುಗೆ ಹಾಗೂ ಸಹ ಕಲಾವಿದರ ಬೆಂಬಲವೇ ಮತ್ತಷ್ಟು ಹೊಸ ಪ್ರಯೋಗಗಳನ್ನು ಮಾಡಲು ಪ್ರೇರಣೆ ನೀಡುತ್ತದೆ. ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಹೊಸ ಸವಾಲುಗಳನ್ನು ಸ್ವೀಕರಿಸಲು ಇದೇ ಶಕ್ತಿ ನೀಡುತ್ತದೆ ಎಂಬುದು ಶಿವಣ್ಣನ ಮಾತಿನ ಸಾರ.

ಒಟ್ಟಿನಲ್ಲಿ, ಪೌರಾಣಿಕ ಹಿನ್ನೆಲೆ, ನಿಗೂಢ ಕಥಾಹಂದರ ಹಾಗೂ ಆ್ಯಕ್ಷನ್‌ನೊಂದಿಗೆ ಬರುತ್ತಿರುವ ‘ಕೂರ್ಮಾವತಾರ್’ ಚಿತ್ರದ ಟೀಸರ್ ಈಗಾಗಲೇ ಕುತೂಹಲ ಹೆಚ್ಚಿಸಿದೆ. ಅದರಲ್ಲೂ ಶಿವರಾಜ್‌ಕುಮಾರ್ ಅವರ ವಿಭಿನ್ನ ಪಾತ್ರ ಮತ್ತು ಅಭಿನಯ ಹೇಗಿರಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.