ವಿಡಿಯೋದಲ್ಲಿ ಶಿವರಾಜ್‌ಕುಮಾರ್, ಸಾಂಪ್ರದಾಯಿಕ ಕಪ್ಪು ಬಣ್ಣದ ಬಟ್ಟೆ, ಹಣೆಗೆ ತಿಲಕ, ಕಿವಿಯಲ್ಲಿ, ಕೊರಳಲ್ಲಿ ಮತ್ತು ಕೈಯಲ್ಲಿ ರುದ್ರಾಕ್ಷಿ ಮಾಲೆ ಧರಿಸಿ ಮನೆಯೊಳಗೆ ಪ್ರವೇಶಿಸುತ್ತಿರುವ ದೃಶ್ಯಗಳು ಗಮನ ಸೆಳೆಯುತ್ತವೆ.
ಜನಪ್ರಿಯ ನಿರೂಪಕ ಹಾಗೂ ನಟ ಅಕುಲ್ ಬಾಲಾಜಿ ಇತ್ತೀಚೆಗೆ ನಿರ್ಮಿಸಿರುವ ನೂತನ ಮನೆ ಇದೀಗ ಸಿನಿ ವಲಯದ ಗಮನ ಸೆಳೆಯುತ್ತಿದೆ. ಪ್ರಕೃತಿಯ ಮಡಿಲಲ್ಲಿ ವಿಭಿನ್ನ ವಿನ್ಯಾಸದಲ್ಲಿ ನಿರ್ಮಾಣಗೊಂಡಿರುವ ಈ ಕನಸಿನ ನಿವಾಸಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಹಾಗೂ ಪತ್ನಿ ಗೀತಾ ಶಿವರಾಜ್‌ಕುಮಾರ್ ಭೇಟಿ ನೀಡಿ ಅಕುಲ್ ಬಾಲಾಜಿ ದಂಪತಿಗೆ ಶುಭ ಹಾರೈಸಿದ್ದಾರೆ. ಈ ವಿಶೇಷ ಕ್ಷಣದ ವಿಡಿಯೋವನ್ನು ಅಕುಲ್ ಬಾಲಾಜಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಶಿವರಾಜ್‌ಕುಮಾರ್, ಸಾಂಪ್ರದಾಯಿಕ ಕಪ್ಪು ಬಣ್ಣದ ಬಟ್ಟೆ, ಹಣೆಗೆ ತಿಲಕ, ಕಿವಿಯಲ್ಲಿ, ಕೊರಳಲ್ಲಿ ಮತ್ತು ಕೈಯಲ್ಲಿ ರುದ್ರಾಕ್ಷಿ ಮಾಲೆ ಧರಿಸಿ ಮನೆಯೊಳಗೆ ಪ್ರವೇಶಿಸುತ್ತಿರುವ ದೃಶ್ಯಗಳು ಗಮನ ಸೆಳೆಯುತ್ತವೆ. ಹೊಸ ಮನೆಯ ವಿನ್ಯಾಸ, ಹಸಿರಿನ ವಾತಾವರಣ ಹಾಗೂ ಪ್ರಕೃತಿಯೊಂದಿಗೆ ಬೆರೆತಿರುವ ನಿರ್ಮಾಣ ಶೈಲಿಯನ್ನು ನೋಡಿ ಶಿವಣ್ಣ ಹಾಗೂ ಗೀತಾ ಸಂತಸ ವ್ಯಕ್ತಪಡಿಸಿದ್ದಾರೆ.
ಅಕುಲ್ ಬಾಲಾಜಿ ನಿರ್ಮಿಸಿರುವ ಈ ಮನೆ ಆಧುನಿಕ ಸೌಲಭ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಸ್ವಿಮ್ಮಿಂಗ್ ಪೂಲ್, ಜಿಮ್, ಪಾರ್ಟಿ ಏರಿಯಾ ಸೇರಿದಂತೆ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಲು ಅಗತ್ಯವಿರುವ ಹಲವು ವ್ಯವಸ್ಥೆಗಳನ್ನು ಮನೆಯಲ್ಲೇ ಕಲ್ಪಿಸಲಾಗಿದೆ. ಮನೆ ನಿರ್ಮಾಣದ ಪ್ರತಿಯೊಂದು ಭಾಗದಲ್ಲೂ ವೈಯಕ್ತಿಕ ಅಭಿರುಚಿ ಮತ್ತು ಆಧುನಿಕ ಶೈಲಿಯ ಸ್ಪರ್ಶ ಕಾಣಿಸಿಕೊಳ್ಳುತ್ತದೆ.
ಜೀವನಪೂರ್ತಿ ನೆನಪಿನಲ್ಲಿ ಉಳಿಯುತ್ತವೆ
ಹೊಸ ಮನೆಗೆ ಭೇಟಿ ನೀಡಿದ ಶಿವರಾಜ್‌ಕುಮಾರ್ ದಂಪತಿ ಅಕುಲ್ ಬಾಲಾಜಿ ಹಾಗೂ ಅವರ ಪತ್ನಿ ಜ್ಯೋತಿಗೆ ಶುಭಾಶಯಗಳನ್ನು ತಿಳಿಸಿ, ಹೊಸ ಜೀವನದ ಪಯಣ ಸಂತೋಷ ಹಾಗೂ ಸಮೃದ್ಧಿಯಿಂದ ಕೂಡಿರಲಿ ಎಂದು ಹಾರೈಸಿದರು. ಈ ಭೇಟಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾವುಕವಾಗಿ ಪ್ರತಿಕ್ರಿಯಿಸಿರುವ ಜ್ಯೋತಿ ಅಕುಲ್, "ಕೆಲವು ಭೇಟಿಗಳು ಜೀವನಪೂರ್ತಿ ನೆನಪಿನಲ್ಲಿ ಉಳಿಯುತ್ತವೆ" ಎಂದು ಬರೆದುಕೊಂಡಿದ್ದು, ಶಿವಣ್ಣ-ಗೀತಾ ದಂಪತಿಯ ಆಗಮನ ತಮ್ಮ ಕುಟುಂಬಕ್ಕೆ ಮರೆಯಲಾಗದ ಕ್ಷಣವಾಗಿತ್ತು ಎಂಬುದನ್ನು ಹಂಚಿಕೊಂಡಿದ್ದಾರೆ.
ಸದ್ಯ ಅಕುಲ್ ಬಾಲಾಜಿ ಹಂಚಿಕೊಂಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಶಿವರಾಜ್‌ಕುಮಾರ್ ಅವರ ಸರಳತೆ ಹಾಗೂ ಅಕುಲ್ ಬಾಲಾಜಿ ಅವರ ಹೊಸ ಮನೆಯ ವಿನ್ಯಾಸವನ್ನು ಮೆಚ್ಚಿ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.


