ಕನ್ನಡ ಬಿಗ್‌ಬಾಸ್ ಶೋನಿಂದ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ಹಿರಿಯ ಸ್ಪರ್ಧಿ, ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಷ್ಟಕ್ಕೂ ಅವರಿಗೆ ಏನು ಆಗಿತ್ತು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

ಬೆಂಗಳೂರು: ಕನ್ನಡ ಬಿಗ್‌ಬಾಸ್ ಶೋನಿಂದ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ಹಿರಿಯ ಸ್ಪರ್ಧಿ, ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವರದಿಗಳ ಪ್ರಕಾರ, ಓಂ ಪ್ರಕಾಶ್ ರಾವ್ ಅವರು ತೀವ್ರ ಕಾಲು ನೋವಿನಿಂದ ಬಳಲುತ್ತಿದ್ದು, ಬಿಗ್‌ ಬಾಸ್ ತಂಡ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದೆ ಎನ್ನಲಾಗಿದೆ.

ಅಸಲಿಗೆ ಆಗಿದ್ದೇನು?

ಓಂ ಪ್ರಕಾಶ್ ರಾವ್ ಈ ಹಿಂದೆ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಈ ವೇಳೆ ಅವರ ಕಾಲಿಗೆ ಬಲವಾದ ಏಟು ಬಿದ್ದಿತ್ತು. ಬಿಗ್ ಬಾಸ್ ಮನೆ ಪ್ರವೇಶಿಸಿದ ನಂತರ ತಮ್ಮ ವಯಸ್ಸನ್ನೂ ಲೆಕ್ಕಿಸದೇ ಇತರೆ ಸ್ಪರ್ಧಿಗಳ ಜೊತೆ ಪೈಪೋಟಿಗೆ ಇಳಿದು ಆಟವಾಡಲು ಶುರುಮಾಡಿದ್ದರು. ಇತ್ತೀಚೆಗೆ ನಡೆದ ಟಾಸ್ಕ್‌ಗಳಲ್ಲಿ ಸತತವಾಗಿ ಭಾಗಿಯಾಗಿದ್ದರು. ಇದರಿಂದ ಹಳೆಯ ನೋವು ಮತ್ತೆ ಉಲ್ಬಣಿಸಿದೆ ಎನ್ನಲಾಗಿದೆ.

ನಿರಂತರ ಓಡಾಟದಿಂದಾಗಿ ಕಾಲಿನಲ್ಲಿ ತೀವ್ರ ಊತ ಮತ್ತು ವಿಪರೀತ ನೋವು ಕಾಣಿಸಿಕೊಂಡಿದೆ. ಓಂ ಪ್ರಕಾಶ್ ರಾವ್ ನೋವಿನಿಂದ ಬಳಲುತ್ತಿರುವುದನ್ನು ಗಮನಿಸಿದ ಬಿಗ್ ಬಾಸ್ ತಂಡ, ತಡಮಾಡದೇ ಮನೆಯಿಂದ ಹೊರತಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿಗ್‌ ಬಾಸ್‌ಗೆ ವಾಪಸ್ ಆಗ್ತಾರಾ?

ಇನ್ನು ಓಂ ಪ್ರಕಾಶ್ ರಾವ್ ಅಭಿಮಾನಿಗಳಿಗೆ ಸಮಾಧಾನಕರ ವಿಷಯವೆಂದರೆ.. ಅವರು ಪ್ರಸ್ತುತ ವೈದ್ಯರ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನಂತರ ಆರೋಗ್ಯದಲ್ಲಿ ಮತ್ತೆ ಚೇತರಿಕೆ ಕಂಡುಬಂದಿದೆ. ಕಾಲಿನ ಊತ ಕಡಿಮೆಯಾದ ತಕ್ಷಣ ವೈದ್ಯರ ಸಲಹೆ ಪಡೆದು ಮತ್ತೆ ಬಿಗ್ ಬಾಸ್ ಮನೆಗೆ ಕಮ್‌ಬ್ಯಾಕ್ ಮಾಡಲಿದ್ದಾರೆ. ಓಂ ಪ್ರಕಾಶ್ ರಾವ್ ಬಿಗ್‌ ಬಾಸ್ ಮನೆಯಲ್ಲಿ ಹಾಸ್ಯ ಮತ್ತು ನೇರ ನುಡಿಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಆದಷ್ಟು ಬೇಗ ಅವರು ಗುಣಮುಖರಾಗಿ ಕಂಬ್ಯಾಕ್ ಮಾಡಲಿ ಎಂದು ಹಿತೈಸಿಗಳು, ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.