ರಾಜನಾಥ್ ಸಿಂಗ್ ಕೇಂದ್ರ ರಕ್ಷಣಾ ಸಚಿವರು.. ಅತೀ ಸರಳ, ವಿನಯ, ವಿನಮ್ರ ಹಾಗೂ ಚಿಂತನಾಶೀಲ ವ್ಯಕ್ತಿತ್ವ ಹೊಂದಿರೋರು. ಇದೀಗ ಅವರು ಮತ್ತೊಮ್ಮೆ ತಮ್ಮ ಹೃದಯವಂತಿಕೆಯಿಂದ ಸುದ್ದಿಯಾಗಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ..
ಆಗ್ರಾ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು ತಮ್ಮ ಮಾನವೀಯ ಗುಣಗಳಿಮದ ಮತ್ತೊಮ್ಮೆ ಎಲ್ಲರ ಹೃದಯ ಗೆದ್ದಿದ್ದಾರೆ. ಆಗ್ರಾದಲ್ಲಿ ನಡೆದ ತುಂಬಿದ ಸಭೆಯಲ್ಲಿ ರಕ್ಷಣಾ ಸಚಿವರಿಗೆ ‘ಬೆಳ್ಳಿ ಕಿರೀಟ’ ನೀಡಲಾಗಿತ್ತು. ಆರಂಭದಲ್ಲಿ ಅದನ್ನು ಖುಷಿಯಿಂದಲೇ ಸ್ವೀಕರಿಸಿದ ಅವರು, ನಂತರ ಅದನ್ನು ಯಾರು ನೀಡಿದರೋ ಅವರಿಗೇ ಹಸ್ತಾಂತರಿಸಿ ಅಚ್ಚರಿ ಮೂಡಿಸಿದರು. ರಾಜನಾಥ್ ಸಿಂಗ್ ಅಚ್ಚರಿಯ ನಿರ್ಧಾರದ ಹಿಂದೆ ಅವರ ಹೃದಯವಂತಿಕೆ ಕೆಲಸ ಮಾಡಿತ್ತು…
ಅಷ್ಟಕ್ಕೂ ಆಗಿದ್ದೇನು?
ಆಗ್ರದಲ್ಲಿ 'ಖಾತಿಕ್ ಗರ್ಜನ ಸಮ್ಮೇಳನ' ನಡೆಯಿತು. ಸಮಾರಂಭದಲ್ಲಿ ಕೇಂದ್ರ ಸಚಿವರು ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು. ಈ ವೇಳೆ ಸಭೆಯ ಆಯೋಜಕರು ಸಚಿವರನ್ನು ತುಂಬು ಹೃಯದಿಂದ ಸ್ವಾಗತಿಸಿ ಅವರನ್ನು ಸನ್ಮಾನಿಸಿದರು. ಸನ್ಮಾನವನ್ನು ಆತ್ಮೀಯವಾಗಿ ಸ್ವೀಕರಿಸಿದ ರಾಜನಾಥ್ ಸಿಂಗ್, ಕೊನೆಯಲ್ಲಿ ತಮಗೆ ನೀಡಿದ್ದ ಬೆಳ್ಳಿ ಕಿರೀಟವನ್ನು ಹಿಂತಿರುಗಿಸಿ ತಬ್ಬಿಬ್ಬುಗೊಳಿಸಿದರು.
ಬಳಿಕ ತಮ್ಮಲ್ಲಿರುವ ಮಾನವೀಯ ಉದ್ದೇಶದ ಬಗ್ಗೆ ತಿಳಿಸಿದ ಅವರು.. ನಾನು ಎಲ್ಲವನ್ನೂ ಸ್ವೀಕರಿಸುತ್ತೇನೆ. ಆದರೆ ನೀವು ನೀಡಿರುವ ಬೆಳ್ಳಿ ಕಿರೀಟವನ್ನು ಹಿಂತಿರುಗಿಸುತ್ತೇನೆ. ಬಡ ದಂಪತಿಯ ಮಗಳ ಒಬ್ಬಳು ಮದುವೆ ನಂತರ ಗಂಡನ ಮನೆಗೆ ಹೋಗುವಾಗ ಆಕೆಯ ಕಾಲಿಗೆ ಗೆಜ್ಜೆ ಮಾಡಿಸಿಕೊಡಿ. ಇದೇ ಕಿರೀಟವನ್ನು ಮುರಿಸಿ ಆಕೆಯ ಕಾಲಿಗೆ ಗೆಜ್ಜೆ ಇಲ್ಲದಿದ್ದರೆ, ಕಾಲುಂಗರ ಇಲ್ಲದಿದ್ದರೆ ಅದೆಲ್ಲ ಮಾಡಿಸಿ ಕೊಡಿ ಎಂದು ಹೇಳಿದರು. ಸಿಂಗ್ ಅವರ ಈ ಮಾತು ಕೇಳುತ್ತಿದ್ದಂತೆಯೇ, ತುಂಬಿದ ಸಭಿಕರ ಬಹುತೇಕರ ಕಣ್ಣಾಲೆಗಳು ಒದ್ದೆಯಾಗಿದ್ದವು..
ರಾಜನಾಥ್ ಸಿಂಗ್ ಅವರ ಈ ನಡವಳಿಕೆ ಭಾರೀ ಪ್ರಶಂಸೆಗೆ ಕಾರಣವಾಗಿದೆ. ಜೊತೆಗೆ ಅದೆಷ್ಟೋ ಮಂದಿಗೆ ಸ್ಫೂರ್ತಿಯಾಗಿದೆ.
ಕೊನೆಗೆ ಮಾತು ಮುಂದುವರಿಸಿರುವ ಅವರು, ಕೆಲವರು ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಹೆಚ್ಚಿಸಿಕೊಳ್ಳಲು, ಇತರರನ್ನ ಪ್ರಚೋದಿಸಲು ಪ್ರಯತ್ನಿಸುತ್ತಾರೆ. ಧರ್ಮದ ಹೆಸರಲ್ಲಿ ಸಮಾಜದ ಹೆಸರಲ್ಲಿ ವಿಭಜಿಸಲು ಪ್ರಯತ್ನಿಸುತ್ತಾರೆ. ಆದರೆ ನಾವು ಅದಕ್ಕೆಲ್ಲ ಅವಕಾಶ ಮಾಡಿಕೊಡಬಾರದು. ನಾವು ಯಾರಿಂದಲೂ ಪ್ರಭಾವಿತರಾಗುವುದಿಲ್ಲ ಎಂದು ದೃಢ ಸಂಕಲ್ಪ ಮಾಡಿಕೊಳ್ಳಬೇಕು. ಸಮಾಜಗಳು ವಿಭಜನೆ ಆಗಲು ನಾವು ಬಿಡುವುದಿಲ್ಲ. ಸಮಾಜದಲ್ಲಿ ಪ್ರೀತಿ, ಸಹಕಾರ ಇರುವಂತೆ ಸಂತೋಷ ಮತ್ತು ದುಃಖದ ಸಮಯದಲ್ಲೂ ಬೆಂಬಲವಾಗಿ ನಿಲ್ಲುವ ಮನೋಭಾವ ಇರುವಂತೆ ಒಟ್ಟಾಗಿ ಕೆಲಸ ಮಾಡಬೇಕು. ವಿಭಜನೆ ನಮ್ಮನ್ನು ಒಡೆಯುತ್ತದೆ, ಏಕತೆ ನಮ್ಮನ್ನು ಮೇಲಕ್ಕೆ ಕೊಂಡೊಯ್ಯುತ್ತದೆ ಎಂದು ರಾಜನಾಥ್ ಸಿಂಗ್ ಕಿವಿಮಾತು ಹೇಳಿದರು.
ಖಾತಿಕ್ ಸಮುದಾಯದ ಬೆನ್ನು ತಟ್ಟಿದ ಕೇಂದ್ರ ಸಚಿವ
1946ರಲ್ಲಿ ಪಶ್ಚಿಮ ಬಂಗಾಳದಲ್ಲಿ ಹಿಂದೂಗಳನ್ನ ಗುರಿಯಾಗಿಸಿಕೊಂಡು ದಾಳಿಗಳು ನಡೆದವು. ಈ ವೇಳೆ ಗೋಪಾಲ್ ಪಾಠಾ ನಾಯಕತ್ವದಲ್ಲಿ ಖಾತಿಕ್ ಸಮುದಾಯದ ಅನೇಕರು ಅಧಿಕಾರ ವಹಿಸಿಕೊಂಡು ಮುಂದೆ ಬಂದರು. ಅವರೆಲ್ಲ ಹಿಂದೂಗಳ ರಕ್ಷಿಸುವ ಕೆಲಸವನ್ನು ಮಾಡಿದರು. ಕಾತಿಕ್ ಅಂದ್ರೆ ಭಯವನ್ನೂ ಹೆದರಿಸಬಲ್ಲವನು ಎಂದರ್ಥ. ಯಾವುದೇ ಕಾರಣಕ್ಕೂ ಹೆದರಿ ಹಿಂತಿರುಗಿ ಹೋಗುವ ಜಾಯಮಾನ ಕಾತಿಕ್ ಸಮುದಾಯಕ್ಕೆ ಇಲ್ಲ. ಯಾವುದೇ ಸಮಯ, ಸಂದರ್ಭ, ಸವಾಲು ಜೊತೆಗೆ ಶತ್ರು ಎಷ್ಟೇ ಪ್ರಭಲವಾಗಿದ್ದರೂ ಸಹ ಧರ್ಮ ಮತ್ತು ರಾಷ್ಟ್ರದ ಗೌರವದ ರಕ್ಷಣೆಯಿಂದ ಅವರು ಹಿಂದೆ ಸರಿಯುವುದಿಲ್ಲ ಎಂದು ಸಿಂಗ್ ಬಣ್ಣಿಸಿದರು.


