ಬಾಲಿವುಡ್‌ ನಟಿ ಕರೀನಾ ಕಪೂರ್ ಖಾನ್, ತಾನು 11ನೇ ತರಗತಿ ನಂತರ ಓದು ನಿಲ್ಲಿಸಿದ್ದಕ್ಕೆ ಈಗಲೂ ಪಶ್ಚಾತ್ತಾಪ ಪಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ತನ್ನ ಮಕ್ಕಳು ಶಿಕ್ಷಣವನ್ನು ಪೂರ್ಣಗೊಳಿಸಬೇಕು ಎಂಬ ಆಸೆಯನ್ನೂ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್‌ನ ಫೇಮಸ್ ನಟಿ ಕರೀನಾ ಕಪೂರ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ? ತಮ್ಮ ಸೌಂದರ್ಯ, ನಟನೆ ಮತ್ತು ಫ್ಯಾನ್ಸ್‌ ಮೇಲಿನ ಪ್ರೀತಿಯಿಂದ ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದಾರೆ. ಸದ್ಯಕ್ಕೆ ಅವರು ಮೇಘನಾ ಗುಲ್ಜಾರ್ ನಿರ್ದೇಶನದ 'ದಾಯ್ರಾ' ಅನ್ನೋ ಸಿನಿಮಾದಲ್ಲಿ ನಟ ಪೃಥ್ವಿರಾಜ್ ಸುಕುಮಾರನ್ ಜೊತೆ ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರೋಕೆ ರೆಡಿಯಾಗಿದ್ದಾರೆ.

ಆದರೆ, ಇತ್ತೀಚೆಗೆ ಕರೀನಾ ತಮ್ಮ ಜೀವನದ ಒಂದು ದೊಡ್ಡ ಬೇಸರದ ಬಗ್ಗೆ ಮಾತನಾಡಿದ್ದಾರೆ. ತಾನು 11ನೇ ತರಗತಿ ನಂತರ ಓದು ನಿಲ್ಲಿಸಿದ್ದು ತಪ್ಪು ಎನಿಸುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಹೌದು, ನೀವು ಓದಿದ್ದು ನಿಜ. ಕರೀನಾ 11ನೇ ತರಗತಿವರೆಗೆ ಮಾತ್ರ ಓದಿದ್ದು, ಆ ನಂತರ ನಟನೆ ಮತ್ತು ಸಿನಿಮಾಗಳ ದಾರಿ ಹಿಡಿದಿದ್ದರು. ಇದೇ ಕಾರಣಕ್ಕೆ, ತನ್ನ ಮಕ್ಕಳು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಬೇಕು ಅಂತ ಅವರು ಬಯಸುತ್ತಿದ್ದಾರೆ. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಯುನಿಸೆಫ್ ಜೊತೆ ಕೈಜೋಡಿಸಿರುವುದರ ಹಿಂದೆಯೂ ಇದೇ ಕಾರಣ ಇದೆ.

ಓದು ಪೂರ್ಣಗೊಳಿಸದ ಬಗ್ಗೆ ಕರೀನಾ ಬೇಸರ

ಪಾಡ್‌ಕಾಸ್ಟರ್ ಹನುಮಾನ್ ದಾಸ್ ಜೊತೆ ಮಾತನಾಡಿದ ಕರೀನಾ, 'ನಾನು ನನ್ನ ಶಿಕ್ಷಣವನ್ನು ಪೂರ್ಣಗೊಳಿಸಲಿಲ್ಲ. ಆ ಕೊರಗು ನನ್ನ ಜೊತೆ ಯಾವಾಗಲೂ ಇತ್ತು. ನನಗೆ ಅವಕಾಶಗಳಿದ್ದರೂ, 11ನೇ ತರಗತಿ ನಂತರ ಓದು ಮುಂದುವರಿಸದೆ ಸಿನಿಮಾಗೆ ಬಂದೆ. ಇದಕ್ಕಾಗಿ ಹಲವರು ನನ್ನನ್ನು ಗೇಲಿ ಮಾಡಬಹುದು ಅಥವಾ ಏನೇನೋ ಅನ್ನಬಹುದು. ಆದರೆ, ನಾನೊಬ್ಬ ನಟಿಯಾಗಿ ನನ್ನನ್ನು ನಾನು ಸಾಬೀತುಪಡಿಸಿಕೊಳ್ಳಬೇಕಿತ್ತು. ನನ್ನ ಮನಸ್ಸು ಹೇಳಿದ್ದನ್ನು ನಾನು ಕೇಳಿದೆ' ಎಂದು ಹೇಳಿದ್ದಾರೆ.

'ನನ್ನ ಓದನ್ನು ಪೂರ್ಣಗೊಳಿಸದೇ ಇದ್ದಿದ್ದಕ್ಕೆ ನನಗೆ ಈಗಲೂ ಬೇಸರವಿದೆ. ಅದಕ್ಕಾಗಿಯೇ ನನ್ನ ಮಕ್ಕಳು ಮೊದಲು ತಮ್ಮ ಶಿಕ್ಷಣವನ್ನು ಮುಗಿಸಿ, ನಂತರ ಅವರ ಮನಸ್ಸಿಗೆ ಇಷ್ಟವಾದ ದಾರಿ ಹಿಡಿಯಲಿ ಎಂದು ನಾನು ಬಯಸುತ್ತೇನೆ. ಯುನಿಸೆಫ್‌ನವರು ಭಾರತದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಬೆಂಬಲ ನೀಡುವಂತೆ ನನ್ನನ್ನು ಸಂಪರ್ಕಿಸಿದಾಗ, ನನಗೆ ತುಂಬಾ ಹತ್ತಿರವಾಯಿತು. ಯಾಕಂದ್ರೆ, ನನ್ನ ಶಿಕ್ಷಣವನ್ನು ಪೂರ್ಣಗೊಳಿಸಿಲ್ಲ ಎಂಬ ಕೊರಗು ನನ್ನಲ್ಲಿ ಯಾವಾಗಲೂ ಇತ್ತು' ಅಂತ ಕರೀನಾ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

ಯುನಿಸೆಫ್ ಜೊತೆ ಕರೀನಾ ನಂಟು

ಕರೀನಾ 2014ರಿಂದ ಯುನಿಸೆಫ್ ಇಂಡಿಯಾ ಜೊತೆ ಕೆಲಸ ಮಾಡುತ್ತಿದ್ದಾರೆ. ಹೆಣ್ಣುಮಕ್ಕಳ ಶಿಕ್ಷಣ, ಲಿಂಗ ಸಮಾನತೆ ಮತ್ತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಅವರು ಸಕ್ರಿಯವಾಗಿ ಧ್ವನಿ ಎತ್ತುತ್ತಿದ್ದಾರೆ.