ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದ ಬಳಿಕ, ಭಾರತದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಗಾಯಗೊಂಡು ಸರಣಿಯಿಂದ ಹೊರಬಿದ್ದಿದ್ದಾರೆ. ಪದೇ ಪದೇ ಗಾಯದ ಸಮಸ್ಯೆಗೆ ತುತ್ತಾಗುತ್ತಿರುವ ಅವರ ಸ್ಥಿತಿ, ಬಿಸಿಸಿಐನ ವೈದ್ಯಕೀಯ ನಿರ್ವಹಣೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ದೆಹಲಿ: ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯ ಗೆದ್ದ ಬೆನ್ನಲ್ಲೇ ಭಾರತ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ತಂಡದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಗಾಯದ ಕಾರಣ ಸರಣಿಯ ಉಳಿದ ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಭಾನುವಾರ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ನಾಲ್ಕು ಓವರ್ ಬೌಲ್ ಮಾಡಿದ ನಂತರ ಅವರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಪದೇ ಪದೇ ಗಾಯಕ್ಕೆ ಒಳಗಾಗುತ್ತಿರುವ ವರುಣ್ ಚಕ್ರವರ್ತಿ
ಆದರೆ, ಗಾಯದ ಸ್ವರೂಪ ಮತ್ತು ತೀವ್ರತೆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಕಳೆದ ಕೆಲವು ತಿಂಗಳುಗಳಿಂದ ವರುಣ್ ಚಕ್ರವರ್ತಿ ಪದೇ ಪದೇ ಗಾಯದ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ಆಡುವಾಗ ಕಾಲಿಗೆ ಗಾಯ ಮಾಡಿಕೊಂಡಿದ್ದ ವರುಣ್, ಸ್ವಲ್ಪ ಸಮಯ ವಿಶ್ರಾಂತಿ ಪಡೆದು ಐರ್ಲೆಂಡ್ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದರು.
ಬಳಿಕ ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಚಿಕಿತ್ಸೆ ಪಡೆದು, ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಮೂಲಕ ತಂಡಕ್ಕೆ ವಾಪಸಾಗಿದ್ದರು. ಆದರೆ, ಮೂರನೇ ಪಂದ್ಯದ ನಂತರ ಹ್ಯಾಮ್‌ಸ್ಟ್ರಿಂಗ್ ಗಾಯದಿಂದಾಗಿ ಮತ್ತೆ ತಂಡದಿಂದ ಹೊರಬಿದ್ದರು. ನಂತರ ಆಗಸ್ಟ್‌ನಲ್ಲಿ ನಡೆದ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಆಡಿ, ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದರು. ಮೊದಲ ಟಿ20 ಪಂದ್ಯದಲ್ಲಿ ವರುಣ್ ನಾಲ್ಕು ಓವರ್ ಬೌಲ್ ಮಾಡಿ ಕೇವಲ 16 ರನ್ ನೀಡಿ ಒಂದು ವಿಕೆಟ್ ಪಡೆದು ಮಿಂಚಿದ್ದರು.
ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾಗ ವರುಣ್ ತಮಗೆ ಗಾಯವಾಗಿರುವ ಬಗ್ಗೆ ಯಾವುದೇ ಸುಳಿವು ನೀಡಿರಲಿಲ್ಲ. "ಕ್ರೀಡಾಪಟುಗಳಿಗೆ ಗಾಯಗಳು ಸಹಜ. ನಾವು ನಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ ಅನ್ನೋದಕ್ಕೆ ಇದೇ ಸಾಕ್ಷಿ. ಕೆಲವೊಮ್ಮೆ ನಾವು ನಮ್ಮ ಮಿತಿ ಮೀರಿ ಪ್ರಯತ್ನಿಸಿದಾಗ ದೇಹ ಸಹಕರಿಸುವುದಿಲ್ಲ. ಅಂತಹ ಸಮಯದಲ್ಲಿ ಒಂದು ಹೆಜ್ಜೆ ಹಿಂದೆ ಸರಿದು, ಮತ್ತಷ್ಟು ಬಲಿಷ್ಠವಾಗಿ ವಾಪಸ್ ಬರಬೇಕು" ಎಂದು ಗಾಯಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದರು. ಅದೇ ರೀತಿ, ಆಟಗಾರರು ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ ಕೆಲವೇ ದಿನಗಳಲ್ಲಿ ಮತ್ತೆ ಗಾಯಗೊಳ್ಳುತ್ತಿರುವುದು, ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ನ ವೈದ್ಯಕೀಯ ನಿರ್ವಹಣೆ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಆಫ್ಘನ್ ವಿರುದ್ಧ ಭಾರತ ಅಬ್ಬರ
ಅಫ್ಘಾನಿಸ್ತಾನ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಆಲ್ರೌಂಡ್ ಆಟದ ಮೂಲಕ ಆಫ್ಘನ್ ಪಡೆಯ ಮೇಲೆ ಸವಾರಿ ಮಾಡಿದ ಭಾರತ, ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು.
ಟಾಸ್ ಗೆದ್ದು ಫೀಲ್ಡ್ ಮಾಡಲು ನಿರ್ಧರಿಸಿದ ಭಾರತ, ಅಜ್ಮತುಲ್ಲಾ ಓಮರ್‌ಝಾಯ್, ಮೊಹಮದ್ ನಬಿಯ ಹೋರಾಟದ ಹೊರತಾಗಿಯೂ ಅಫ್ಘಾನಿಸ್ತಾನ 20 ಓವರಲ್ಲಿ 8 ವಿಕೆಟ್‌ಗೆ 156 ರನ್‌ಗೆ ಕಟ್ಟಿಹಾಕಿತು. ಬಳಿಕ ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್, ಆಫ್ಘನ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. 157 ರನ್ ಗುರಿಯನ್ನು ಭಾರತ ಕೇವಲ 13.4 ಓವರಲ್ಲೇ ತಲುಪಿತು.


