15 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ, ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ತಮ್ಮ ಅದ್ಭುತ ಆಟದ ಜೊತೆಗೆ, ಅವರು ಒಂದು ದಿನದ ಜಾಹೀರಾತು ಶೂಟ್‌ಗೆ ₹1.5 ರಿಂದ ₹2 ಕೋಟಿ ಗಳಿಸುವ ಮೂಲಕ ಬ್ರ್ಯಾಂಡ್ ಜಗತ್ತಿನಲ್ಲೂ ಸದ್ದು ಮಾಡುತ್ತಿದ್ದಾರೆ. ಅವರ ಭವಿಷ್ಯದ ಸಾಮರ್ಥ್ಯದ ಮೇಲೆ ಬ್ರ್ಯಾಂಡ್‌ಗಳು ಕೋಟ್ಯಂತರ ರೂಪಾಯಿ ಹೂಡಿಕೆ ಮಾಡುತ್ತಿವೆ.
ಇಂಡಿಯಾ ಕ್ರಿಕೆಟ್‌ನಲ್ಲಿ ವೈಭವ್ ಸೂರ್ಯವಂಶಿ ದೊಡ್ಡ ಸಂಚಲನ ಸೃಷ್ಟಿಸಿದ್ದಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ ಅವರಿಗೆ ಇನ್ನೂ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳುವ ವಯಸ್ಸು. ಆದರೆ ಬ್ರ್ಯಾಂಡ್‌ಗಳ ಕಣ್ಣಲ್ಲಿ ವೈಭವ್ ಸೂರ್ಯವಂಶಿ ಅಂದ್ರೆ ಈಗಾಗಲೇ ಕೋಟ್ಯಂತರ ರೂಪಾಯಿ ಮೌಲ್ಯ.
ಹೌದು, ಬಿಹಾರದ ಸೂರ್ಯವಂಶಿ ಕೇವಲ ಕ್ರಿಕೆಟ್ ಕಾರಣಕ್ಕೆ ಮಾತ್ರ ಸುದ್ದಿ ಆಗುತ್ತಿಲ್ಲ. ಅವರು ಬ್ಯಾಟಿಂಗ್‌ನಲ್ಲಿ ಮಾಡುತ್ತಿರುವ ದಾಖಲೆಗಳ ಜೊತೆಗೆ ಅವರ ನಡೆಯುತ್ತಿರುವ ದೊಡ್ಡ ಮಟ್ಟದ ಹಣದ ವ್ಯವಹಾರವೂ ಹೆಚ್ಚು ಸೌಂಡ್ ಮಾಡುತ್ತಿದೆ. ಅಚ್ಚರಿಯ ವಿಷಯ ಏನೆಂದರೆ, ವೈಭವ್‌ಗೆ ಒಂದು ದಿನದ ಜಾಹೀರಾತು ಶೂಟ್ ಅಥವಾ ಬ್ರ್ಯಾಂಡ್ ಕಾರ್ಯಕ್ರಮಕ್ಕೆ ಸಿಗುವ ಮೊತ್ತ ಬರೋಬ್ಬರಿ ₹1.5 ಕೋಟಿಯಿಂದ ₹2 ಕೋಟಿ ಎಂದು ವರದಿಯಾಗಿದೆ.
ಸೂರ್ಯವಂಶಿಗೆ ಇನ್ನೂ ವಯಸ್ಸು 15
ಎಲ್ಲರಿಗೂ ತಿಳಿದಿರುವ ಹಾಗೆ ವೈಭವ್ ಸೂರ್ಯವಂಶಿಗೆ ಕೇವಲ 15 ವರ್ಷ. ಅಂದರೆ ಅವರು ಇನ್ನೂ ಅಪ್ರಾಪ್ತರು. ಈ ವಯಸ್ಸಿನಲ್ಲಿ ಅವರು ತಮ್ಮ ಹೆಸರಿನಲ್ಲಿ ಎಲ್ಲಾ ರೀತಿಯ ಕಾನೂನು ಒಪ್ಪಂದಗಳನ್ನು ಸ್ವತಂತ್ರವಾಗಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ಪೋಷಕರು ಅಥವಾ ಕಾನೂನುಬದ್ಧ ಗಾರ್ಡಿಯನ್‌ಗಳ ಪಾತ್ರ ಅಗತ್ಯ ಇರುತ್ತದೆ.
ಇದನ್ನ ಉದಾಹರಣೆ ಅಂದರೆ ಈ ಬಾರಿಯ ಐಪಿಎಲ್‌ನಲ್ಲಿ ಅತ್ಯುತ್ತಮ ಆಟಗಾರನ ಪ್ರಶಸ್ತಿಗೆ ಭಾಜನರಾದರು. ಆದರೆ ಟಾಟಾ ಎಸ್‌ಯುವಿ ಬಹುಮಾನವಾಗಿ ಸಿಕ್ಕಿದ್ದರೂ, ಅವರ ವಯಸ್ಸಿನ ಕಾರಣದಿಂದ ಅದನ್ನು ಸ್ವತಂತ್ರವಾಗಿ ಚಾಲನೆ ಮಾಡುವಂತಿಲ್ಲ. ಒಂದೆಡೆ ಇಂತಹ ನಿರ್ಬಂಧಗಳು. ಮತ್ತೊಂದೆಡೆ ಒಂದು ದಿನದ ಬ್ರ್ಯಾಂಡ್ ಕೆಲಸಕ್ಕೆ ಕೋಟ್ಯಂತರ ರೂಪಾಯಿ. ಇದೇ ಈಗ ವೈಭವ್ ಸೂರ್ಯವಂಶಿಯ ಕಥೆಯನ್ನು ಇನ್ನಷ್ಟು ಕುತೂಹಲಕರವಾಗಿಸಿದೆ.
ಒಂದೇ ಸೀಸನ್… ಕೋಟಿ ಕೋಟಿ!
2025ರ ಐಪಿಎಲ್‌ನಲ್ಲಿ ವೈಭವ್ ಸೂರ್ಯವಂಶಿ ದೊಡ್ಡ ಮೊಟ್ಟದಲ್ಲಿ ಚರ್ಚೆಯಾದರು. ನಂತರ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ 175 ರನ್‌ಗಳಂತಹ ದೊಡ್ಡ ಪ್ರದರ್ಶನವು ಅವರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ತು. ಬಳಿಕ 2026ರ ಐಪಿಎಲ್ ಸೀಸನ್ ವೃತ್ತಿಜೀವನದ ಜೊತೆಗೆ ಬ್ರ್ಯಾಂಡ್ ಮೌಲ್ಯವನ್ನೇ ಬದಲಿಸಿಬಿಟ್ಟಿತು. ಐಪಿಎಲ್ ತಂಡಗಳ ಮೌಲ್ಯಮಾಪನದ ಬಗ್ಗೆ ವರದಿ ಮಾಡಿರುವ Houlihan Lokey ಸಂಸ್ಥೆಯ 2026ರ ಅಧ್ಯಯನದಲ್ಲೂ ವೈಭವ್ ಅವರ ಬಗ್ಗೆ ಗಮನಾರ್ಹ ಉಲ್ಲೇಖವಿದೆ. ವರದಿಯಲ್ಲಿ ಅವರ ಪ್ರೇಕ್ಷಕರನ್ನು ಸೆಳೆಯುವ ಸಾಮರ್ಥ್ಯವನ್ನು ಸಚಿನ್ ತೆಂಡೂಲ್ಕರ್ ಅವರೊಂದಿಗೆ ಹೋಲಿಸಲಾಗಿದೆ.
ಪ್ರಶ್ನೆ ಏನೆಂದರೆ ಇಂದು ಅವರ ಮೇಲೆ ಹಣ ಹೂಡುತ್ತಿರುವ ಬ್ರ್ಯಾಂಡ್‌ಗಳು ಏನನ್ನು ಖರೀದಿಸುತ್ತಿವೆ? ಅವರು ಈಗಾಗಲೇ ಮಾಡಿದ ಸಾಧನೆಗಿಂತ, ಮುಂದೆ ಮಾಡಬಹುದಾದ ಸಾಧನೆಯ ಮೇಲಿನ ನಂಬಿಕೆಯನ್ನು ಖರೀದಿಸುತ್ತಿವೆ. AMP Sports & Entertainment ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಇಂದ್ರನಿಲ್ ದಾಸ್ ಬ್ಲಾ ಅವರ ಪ್ರಕಾರ, ಐಪಿಎಲ್‌ಗೂ ಮೊದಲು ವೈಭವ್‌ಗೆ ಇಂತಹ ದೊಡ್ಡ ದರಕ್ಕೆ ಯಾವುದೇ ಸ್ಪಷ್ಟ ಮಾರುಕಟ್ಟೆ ಮಾನದಂಡ ಇರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ. ಸದ್ಯ ಒಂದು ದಿನದ ಬ್ರ್ಯಾಂಡ್ ಕೆಲಸಕ್ಕೆ ಸುಮಾರು ₹1.5–2 ಕೋಟಿ ದರ ಇದೆ ಎನ್ನಲಾಗುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಅವರ ಫಾರ್ಮ್ ಇದೇ ರೀತಿ ಮುಂದುವರಿದರೆ ಈ ಮೊತ್ತ ₹3–4 ಕೋಟಿಗೂ ಏರಬಹುದು ಎಂಬ ನಿರೀಕ್ಷೆಯೂ ಇದೆ.


