ಏಷ್ಯಾ ಟಿ20 ಗೆದ್ದರೂ ಭಾರತಕ್ಕೆ ಕಪ್ ಇಲ್ಲ; ಪಾಕ್ ಸಚಿವನಿಗೆ ಮುಖಭಂಗ ಮಾಡಿದ ಭಾರತೀಯ ವನಿತೆಯರು!
ಶ್ರೀಲಂಕಾ ವಿರುದ್ಧ 72 ರನ್‌ಗಳ ಜಯ ಸಾಧಿಸಿ 8ನೇ ಬಾರಿಗೆ ಮಹಿಳಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ ತಂಡ, ಪಾಕ್ ಗೃಹ ಸಚಿವ ಹಾಗೂ ಏಷ್ಯಾ ಕ್ರಿಕೆಟ್ ಸಮಿತಿ (ಎಸಿಸಿ) ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತು. ಪ್ರಶಸ್ತಿ ಇಲ್ಲದೆಯೇ ತಂಡ ಡ್ರೆಸ್ಸಿಂಗ್ ರೂಂ ಸೇರಿತು.

ದುಬೈ (ಸೆ.14): ಕಳೆದ ವರ್ಷ ಪುರುಷರ ಏಷ್ಯಾಕಪ್ ಫೈನಲ್ ಬಳಿಕ ನಡೆದಿದ್ದ ಟ್ರೋಫಿ ಹೈಡ್ರಾಮಾ, ಭಾನುವಾರ ಮಹಿಳೆಯರ ಏಷ್ಯಾಕಪ್ ಫೈನಲ್ ಮುಕ್ತಾಯಗೊಂಡ ಬಳಿಕವೂ ಮರುಕಳಿಸಿತು. ಏಷ್ಯಾ ಕ್ರಿಕೆಟ್ ಸಮಿತಿ (ಎಸಿಸಿ) ಅಧ್ಯಕ್ಷ, ಪಾಕಿಸ್ತಾನದ ಗೃಹ ಸಚಿವ ಮೊಹ್ಸಿನ್ ನಖ್ವಿ ವಿಜೇತ ತಂಡಕ್ಕೆ ತಾವೇ ಟ್ರೋಫಿ ವಿತರಿಸಬೇಕು ಎಂದು ಪಟ್ಟು ಹಿಡಿದ ಬಳಿಕ, ಅವರಿಂದ ಟ್ರೋಫಿ ಸ್ವೀಕರಿಸದೆ ಇರಲು ಭಾರತ ತಂಡ ನಿರ್ಧರಿಸಿತು. ಇದರಿಂದಾಗಿ, ಪುರುಷರ ತಂಡದಂತೆ ಮಹಿಳಾ ತಂಡಕ್ಕೂ ಚಾಂಪಿಯನ್ ಆದರೂ ಟ್ರೋಫಿ ಸಿಗಲಿಲ್ಲ.
ಪಂದ್ಯ ಮುಗಿದು ಮುಕ್ಕಾಲು ಗಂಟೆಯಾದರೂ ಪ್ರಶಸ್ತಿ ವಿತರಣಾ ಸಮಾರಂಭ ಶುರುವಾಗಲಿಲ್ಲ. ಈ ನಡುವೆ ಭಾರತ ತಂಡವನ್ನು ಮೈದಾನದಲ್ಲಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹಾಗೂ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅಭಿನಂದಿಸಿದರು. ಆ ಬಳಿಕ ಭಾರತ ತಂಡ ಡ್ರೆಸ್ಸಿಂಗ್ ರೂಂ ಸೇರಿಕೊಂಡಿತು. ವೇದಿಕೆ ಮೇಲೆ ನಖ್ವಿ ಹಾಗೂ ಇತರ ಅತಿಥಿಗಳು ಕಾಯುತ್ತಾ ನಿಂತಿದ್ದರು. ಕೊನೆಗೆ ಪ್ರಶಸ್ತಿ ವಿತರಣಾ ಸಮಾರಂಭ ಆರಂಭಗೊಂಡಾಗ, ಶ್ರೀಲಂಕಾ ತಂಡ ಮಾತ್ರ ವೇದಿಕೆ ಮೇಲೆ ಬಂದು ರನ್ನರ್-ಅಪ್ ಪದಕ ಹಾಗೂ ಚೆಕ್ ಸ್ವೀಕರಿಸಿತು.
ಗಮ್ ಅಗಿಯುತ್ತಾ ನಿಂತಿದ್ದ ನಖ್ವಿ:
ಮೊಹ್ಸಿನ್ ನಖ್ವಿ ವೇದಿಕೆ ಮೇಲೆ ಚೂಯಿಂಗ್ ಗಮ್ ಅಗಿಯುತ್ತಾ ನಿಂತಿದ್ದರು. ಅವರ ಮುಖದಲ್ಲಿ ಹತಾಶೆ ಕಾಣುತಿತ್ತು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ನಖ್ವಿ, ಕ್ರೀಡಾಂಗಣದಿಂದ ಹೊರಟು ಹೋದರು. ಪುರುಷರ ಏಷ್ಯಾಕಪ್ ಫೈನಲ್ ಬಳಿಕ ಅವರು ಟ್ರೋಫಿಯನ್ನೂ ತಮ್ಮೊಂದಿಗೆ ಕೊಂಡೊಯ್ದಿದ್ದರು. ಆದರೆ ಈ ಬಾರಿ ಟ್ರೋಫಿಯನ್ನು ಅವರು ತೆಗೆದುಕೊಂಡು ಹೋದಂತೆ ಕಾಣಲಿಲ್ಲ.
ಭಾರತಕ್ಕೆ ಇನ್ನೂ ಸಿಕ್ಕಿಲ್ಲ ಟ್ರೋಫಿ:
ಕಳೆದ ಸೆಪ್ಟೆಂಬರ್‌ನಲ್ಲಿ ಭಾರತ ಪುರುಷರ ತಂಡ ಏಷ್ಯಾಕಪ್ ಗೆದ್ದಿತ್ತು. ಪಹಲ್ಗಾಂ ದಾಳಿಯನ್ನು ಖಂಡಿಸಿ ಭಾರತ ತಂಡ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತ್ತು. ಬಳಿಕ ಬಿಸಿಸಿಐ ಮಧ್ಯಸ್ಥಿಕೆ ವಹಿಸಿದರೂ, ಭಾರತ ತಂಡಕ್ಕೆ ಇನ್ನೂ ಟ್ರೋಫಿ ಸಿಕ್ಕಿಲ್ಲ. ಟ್ರೋಫಿಯನ್ನು ನಖ್ವಿ ದುಬೈನಲ್ಲಿರುವ ಎಸಿಸಿ ಕಚೇರಿಯಲ್ಲೇ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.
ಸಮಾರಂಭಕ್ಕೂ ಮುನ್ನ ಸೈಕಿಯಾ, ಶುಕ್ಲಾ ಜೊತೆ ನಖ್ವಿ ಮಾತುಕತೆ!
ಪಂದ್ಯ ಮುಗಿಯುವ ಹಂತದಲ್ಲಿದ್ದಾಗ ಕ್ರೀಡಾಂಗಣಕ್ಕೆ ಆಗಮಿಸಿದ ನಖ್ವಿ, ಬಿಸಿಸಿಐ ಕಾರ್ಯದರ್ಶಿ ಸೈಕಿಯಾ ಹಾಗೂ ಉಪಾಧ್ಯಕ್ಷ ಶುಕ್ಲಾ ಅವರ ಹಿಂದಿನ ಸಾಲಿನಲ್ಲಿ ಕೂತಿದ್ದರು. ಪಂದ್ಯ ಮುಗಿಯುತ್ತಿದ್ದಂತೆ ಎದ್ದು ಬಂದ ನಖ್ವಿ, ಸೈಕಿಯಾ ಹಾಗೂ ಶುಕ್ಲಾರನ್ನು ಮಾತನಾಡಿಸಿದರು.
ಭಾರತಕ್ಕೆ 72 ರನ್ ಭರ್ಜರಿ ಜಯ
ಫೈನಲ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ, ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧನಾ ಅವರ ಅರ್ಧಶತಕಗಳ ನೆರವಿನಿಂದ 20 ಓವರಲ್ಲಿ 5 ವಿಕೆಟ್‌ಗೆ 183 ರನ್ ಗಳಿಸಿತು. ಶ್ರೀಲಂಕಾ 20 ಓವರಲ್ಲಿ 111 ರನ್‌ಗೆ ಆಲೌಟ್ ಆಯಿತು. 72 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ಭಾರತ 8ನೇ ಬಾರಿಗೆ ಚಾಂಪಿಯನ್ ಆಯಿತು.
ಸ್ಕೋರ್: ಭಾರತ 20 ಓವರಲ್ಲಿ 183/5 (ಶಫಾಲಿ 68, ಸ್ಮೃತಿ 59, ಮಿಥಾಲಿ 1-33), ಲಂಕಾ 20 ಓವರಲ್ಲಿ 111/10 (ಚಾಮರಿ 36, ಶ್ರೀಚರಣಿ 4-20, ದೀಪ್ತಿ 3-19)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

