ಟೀಂ ಇಂಡಿಯಾದ ಕೆಲವು ಆಟಗಾರರ ಕತೆಗಳು ತುಂಬಾ ರೋಚಕ ಮತ್ತು ನಿಗೂಢವಾಗಿವೆ. ಅದೇ ರೀತಿ ಫೈಜ್ ಫಜಲ್ ಕ್ರಿಕೆಟ್ ಬದುಕು ಕೂಡ ಅಂಥದ್ದೇ ಕತೆಯನ್ನ ಹೇಳ್ತಿದೆ. ಇವರ ಕ್ರಿಕೆಟ್ ಬದುಕು ಹೇಗೆ ಕೊನೆಯಾಯ್ತು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

ಟೀಂ ಇಂಡಿಯಾದ ಕೆಲವು ಆಟಗಾರರ ಕಥೆಗಳು ತುಂಬಾ ಕುತೂಹಲಕಾರಿಯಾಗಿವೆ. ಅವರಲ್ಲಿ ಮಹಾರಾಷ್ಟ್ರದ ಕ್ರಿಕೆಟರ್ ಫೈಜ್ ಫಜಲ್ ಕೂಡ ಒಬ್ಬರು.

ಇವತ್ತು ಫೈಜ್ ಫಜಲ್ ಹೆಸರು ಬಹುತೇಕ ಕ್ರಿಕೆಟ್ ಅಭಿಮಾನಿಗಳಿಗೆ ಗೊತ್ತೇ ಇಲ್ಲ. ಫೈಜ್ ಫಜಲ್ ಬರೋಬ್ಬರಿ 9,184 ಪ್ರಥಮ ದರ್ಜೆ ರನ್ ಗಳಿಸಿದ ಆಟಗಾರ. ವಿದರ್ಭ ತಂಡವನ್ನು ಸತತ ಎರಡು ಬಾರಿ ರಣಜಿ ಟ್ರೋಫಿ ಗೆಲ್ಲಿಸಿದ ನಾಯಕ ಕೂಡ ಹೌದು.

ಚಿಕ್ಕ ವಯಸ್ಸಿನಲ್ಲೇ ಅವರ ಪ್ರತಿಭೆ ಗಮನ ಸೆಳೆದಿತ್ತು. 18ನೇ ವಯಸ್ಸಿನಲ್ಲಿ ವಿದರ್ಭ ಪರ ಚೊಚ್ಚಲ ಪ್ರಥಮ ದರ್ಜೆ ಪಂದ್ಯದಲ್ಲಿ ಅವರು 151 ರನ್ ಸಿಡಿಸಿ ಗಮನ ಸೆಳೆದಿದ್ದರು.

ಅವರು 2004ರ ಅಂಡರ್-19 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಭಾಗವಾಗಬೇಕಿತ್ತು. ಶಿಖರ್ ಧವನ್, ಸುರೇಶ್ ರೈನಾ, ದಿನೇಶ್ ಕಾರ್ತಿಕ್, ರಾಬಿನ್ ಉತ್ತಪ್ಪ ಸೇರಿದಂತೆ ಹಲವು ಆಟಗಾರರು ಆ ತಂಡದಲ್ಲಿದ್ದರು. ಆದರೆ ಟೂರ್ನಿಗೂ ಮುನ್ನ ಬೆರಳಿಗೆ ಗಾಯವಾದ ಕಾರಣ ಫಜಲ್ ತಂಡದಿಂದ ಹೊರಗುಳಿಯಬೇಕಾಯಿತು. ನಂತರ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದರು. ಶೇನ್ ವಾರ್ನ್ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡರು.

2016ರಲ್ಲಿ 30ನೇ ವಯಸ್ಸಿನಲ್ಲಿ ಅವರಿಗೆ ದೊಡ್ಡ ಅವಕಾಶ ಸಿಕ್ಕಿತ್ತು. ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ಟೀಂ ಇಂಡಿಯಾ ಪರ ಆಡುವ ಅವಕಾಶ ಸಿಕ್ಕಿತ್ತು. ಅಂತೆಯೇ ಅಂದಿನ ನಾಯಕ ಎಂ.ಎಸ್. ಧೋನಿ ಅವರಿಂದ ODI ಕ್ಯಾಪ್ ಕೂಡ ಪಡೆದರು. ತಮ್ಮ ಚೊಚ್ಚಲ ಪಂದ್ಯದಲ್ಲಿ ಅಜೇಯ 55 ರನ್ ಗಳಿಸಿದರು. 61 ಎಸೆತಗಳಲ್ಲಿ 7 ಬೌಂಡರಿ ಮತ್ತು ಒಂದು ಸಿಕ್ಸರ್ ಹೊಡೆದರು. ಭಾರತ 10 ವಿಕೆಟ್‌ಗಳಿಂದ ಪಂದ್ಯ ಗೆದ್ದಿತು.

ಅದೇ ಕೊನೆಯ ಪಂದ್ಯ ಆಯಿತು

ಆದರೆ ಫೈಜ್ ಫಜಲ್‌ಗೆ ಅದೇ ಭಾರತದ ಪರ ಕೊನೆಯ ಪಂದ್ಯವಾಯಿತು. ವಿಫಲವಾಗಿ ತಂಡದಿಂದ ಹೊರಬಿದ್ದವರಲ್ಲ. ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿದರೂ ಮತ್ತೆ ಅವಕಾಶ ಸಿಗಲಿಲ್ಲ. ನಂತರವೂ ದೇಶೀಯ ಕ್ರಿಕೆಟ್‌ನಲ್ಲಿ ರನ್‌ಗಳ ಸುರಿಮಳೆ ಮುಂದುವರಿಸಿದ ಫಜಲ್ ವಿದರ್ಭದ ಪ್ರಮುಖ ಆಟಗಾರನಾಗಿ ಬೆಳೆದರು.

ಅಚ್ಚರಿಯೆಂದರೆ ಭಾರತ ತಂಡದಿಂದ ಹೊರಬಂದ ನಂತರ ಅವರ ಕ್ರಿಕೆಟ್ ಜೀವನ ಮುಗಿದಿರಲಿಲ್ಲ. ಬದಲಾಗಿ ವಿದರ್ಭ ಪರ ಅವರು ಇನ್ನಷ್ಟು ಪ್ರಮುಖ ಆಟಗಾರರಾದರು. ಅವರ ನಾಯಕತ್ವದಲ್ಲಿ ವಿದರ್ಭ ಸತತ ಎರಡು ರಣಜಿ ಟ್ರೋಫಿ ಪ್ರಶಸ್ತಿಗಳನ್ನು ಗೆದ್ದಿತು. ಒಟ್ಟಾರೆ 9,184 ಪ್ರಥಮ ದರ್ಜೆ ರನ್‌ಗಳೊಂದಿಗೆ ಫಜಲ್ ತಮ್ಮ ದೇಶೀಯ ಕ್ರಿಕೆಟ್ ಜೀವನವನ್ನು ಮುಗಿಸಿದರು. ಧೋನಿ ಕೈಯಿಂದ ಭಾರತ ಕ್ಯಾಪ್ ಪಡೆದರು… ಚೊಚ್ಚಲ ಪಂದ್ಯದಲ್ಲೇ 55 ಬಾರಿಸಿದರು… ಆದರೆ ಮತ್ತೆ ಭಾರತ ಜೆರ್ಸಿ ತೊಡುವ ಅವಕಾಶ ಮಾತ್ರ ಸಿಗಲಿಲ್ಲ ಅನ್ನೋದು ವಿಪರ್ಯಾಸವೇ ಸರಿ. ಅವರ ವಿಚಾರದಲ್ಲಿ ಕೆಲವರು ಧೋನಿ ವಿರುದ್ಧ ಬೆಟ್ಟು ಮಾಡಿದ್ದೂ ಉಂಟು. ಆದರೆ ಟೀಂ ಇಂಡಿಯಾದಲ್ಲಿ ಅವಕಾಶವನ್ನು ಗಿಟ್ಟಿಸಿಕೊಳ್ಳೋದು ಅಷ್ಟು ಸುಲಭ ಇಲ್ಲ. ಅದು ಇಂದು ನಿನ್ನೆಯ ಕತೆಯೂ ಅಲ್ಲ.