ಟೀಂ ಇಂಡಿಯಾ ಇದೇ ಮೊದಲ ಬಾರಿಗೆ ವಂದೇ ಮಾತರಂ ಹಾಡಿದೆ. ಆಫ್ಘಾನಿಸ್ತಾನ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ವಂದೇ ಮಾತರಂ ಗೀತೆ ಮೊಳಗಿದೆ. ಬಳಿಕ ಜನ ಗಣ ಮನ ರಾಷ್ಟ್ರಗೀತೆ ಹಾಡಲಾಗಿದೆ.
ದೆಹಲಿ (ಸೆ.13) ವಂದೇ ಮಾತರಂ ಹಾಡಿನ 6 ಚರಣ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್‌ನ ಕೆಲ ನಾಯಕರು ಅಪಸ್ವರ ಎತ್ತಿದ್ದಾರೆ. ಜೊತೆಗೆ ಕೆಲೆವೆಡೆ ವಿರೋಧಗಳು ವ್ಯಕ್ತವಾಗಿದೆ. ಇದರ ನಡುವೆ ಟೀಂ ಇಂಡಿಯಾ ಐತಿಹಾಸಿಕ ಹೆಜ್ಜೆ ಇಟ್ಟಿದೆ. ಟೀಂ ಇಂಡಿಯಾ ಇದೇ ಮೊದಲ ಬಾರಿಗೆ ವಂದೇ ಮಾತರಂ ಹಾಡಿದೆ. ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ವಂದೇ ಮಾತರಂ ಹಾಡಿ ಬಳಿಕ ಜನ ಗಣ ಮನ ರಾಷ್ಟ್ರಗೀತೆ ಹಾಡಿದೆ. ಅಂತಾರಾಷ್ಟ್ರೀಯ ಪಂದ್ಯ ಒಂದರಲ್ಲೇ ಇದೇ ಮೊದಲ ಬಾರಿಗೆ ವಂದೇ ಮಾತರಂ ಹಾಡಲಾಗಿದೆ.
ಹೊಸ ಇತಿಹಾಸ ರಚಿಸಿದ ಟೀಂ ಇಂಡಿಯಾ
ರಾಷ್ಟ್ರ ಗಾನ ಹಾಗೂ ರಾಷ್ಟ್ರ ಗೀತೆ ಎರಡು ಹಾಡುವುದು ಕಡ್ಡಾಯ ಮಾಡಲಾಗಿದೆ. ಅಧಿಕೃತ ಕಾರ್ಯಕ್ರಮಗಳಲ್ಲಿ ಮೊದಲು ವಂದೇ ಮಾತರಂ ಹಾಗೂ ಜನಗಣ ಮನ ಹಾಡಲು ಕೇಂದ್ರ ಗೃಹ ಸಚಿವಾಲ ಇತ್ತೀಚೆಗೆ ಆದೇಶ ನೀಡಿತ್ತು. ಇದು ಪರ ವಿರೋಧಗಳಿಗೂ ಕಾರಣವಾಗಿತ್ತು. ಈ ಬೆಳವಣಿಗೆ ನಡುವೆ ಟೀಂ ಇಂಡಿಯಾ ಮೊದಲ ಬಾರಿಗೆ ವಂದೇ ಮಾತರಂ ಹಾಡಿ ಹೊಸ ಇತಿಹಾಸ ರಚಿಸಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಎರಡು ರಾಷ್ಟ್ರ ಗೀತೆಗಳನ್ನು ಹಾಡಿದೆ. ಮೊದಲು ವಂದೇ ಮಾತರಂ ಹಾಡಿದ ಬಳಿಕ ಜನಗಣ ಮನ ಹಾಡಿದೆ.ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಟೀಂ ಇಂಡಿಯಾದ ವಂದೇ ಮಾತರಂ ಟ್ರೆಂಡ್ ಆಗಿದೆ. ಹಲವು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಟೀಂ ಇಂಡಿಯಾ ಹಾಗೂ ಬಿಸಿಸಿಐ ನಡೆಯನ್ನು ಮೆಚ್ಚಿದ್ದಾರೆ.
ಸೂರ್ಯವಂಶಿಗೆ ಸ್ಥಾನವಿಲ್ಲ
ಆಫ್ಘಾನಿಸ್ತಾನ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಭಾರಿ ಕುತೂಹಲ ಮೂಡಿಸಿದ್ದ ಪ್ಲೇಯಿಂಗ್ 11 ಹಲವು ಅಚ್ಚರಿಗೂ ಕಾರಣವಾಗಿದೆ. ವಂಡರ್ ಕಿಡ್ ಎಂದೇ ಗುರುತಿಸಿಕೊಂಡಿರುವ ವೈಭವ್ ಸೂರ್ಯವಂಶಿಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ಸಿಕ್ಕಿಲ್ಲ. ವಾಶಿಂಗ್ಟನ್ ಸುಂದರ್ ಕೂಡ ಪ್ಲೇಯಿಂಗ್ 11ನಿಂದ ಹೊರಗುಳಿದಿದ್ದಾರೆ.
ಟೀಂ ಇಂಡಿಯಾ ಪ್ಲೇಯಿಂಗ್ 11
ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಸರ್ ಪಟೇಲ್, ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ
ಆಫ್ಘಾನಿಸ್ತಾನ ಪ್ಲೇಯಿಂಗ್ 11
ಇಬ್ರಾಹಿಂ ಜರ್ದಾನ್ (ನಾಯಕ), ರಹಮಾನುಲ್ಹಾ ಗುರ್ಬಾಜ್, ಸೆದಿಖುಲ್ಲಾ ಅತಲ್, ದಾರ್ವಿಶ್ ರಸೂಲಿ, ಅಜ್ಮತುಲ್ಹಾ ಒಮರ್ಝೈ, ಗುಲ್‌ಬಾದಿನ್ ನೈಬ್, ಮೊಹಮ್ಮದ್ ನಬಿ, ರಶೀದ್ ಖಾನ್, ಮಜೀಪ್ ಯುಆರ್ ರಹೆಮಾನ್, ನೂರ್ ಅಹಮ್ಮದ್, ಪಝಲ್‌ಹಖ್ ಫಾರೂಖಿ


