‘ಅಮೆರಿಕಾ ಅಮೆರಿಕಾ 2’ ಸಿನಿಮಾ 1997ರ ‘ಅಮೆರಿಕಾ ಅಮೆರಿಕಾ’ ಚಿತ್ರದ ಯಶಸ್ಸನ್ನು ಬಳಸಿಕೊಳ್ಳಲು ಮಾಡಿದ್ದಲ್ಲ ಎಂದು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ವಿದೇಶದ ಬದುಕಿನ ಕುರಿತು ಅವರು ಮಾತನಾಡಿದ್ದಾರೆ.

ಆರ್. ಕೇಶವಮೂರ್ತಿ

* ಅಮೆರಿಕಾ ಅಮೆರಿಕಾ ಮೊದಲ ಭಾಗ ಸಕ್ಸಸ್‌ ಆಗಿದ್ದಕ್ಕೆ ಪಾರ್ಟ್‌ 2 ಮಾಡಿದ್ದಾ?

ಮೊದಲಿನ ಭಾಗದ ಸಕ್ಸಸ್‌ಗೇ ಮಾಡಬೇಕು ಅಂತಿದ್ರೆ 30 ವರ್ಷ ಕಾಯುತ್ತಿರಲಿಲ್ಲ. ಕಾಡುವ ಮತ್ತು ಯೋಚಿಸುವಂತಹ ಒಂದು ಕತೆ ಸಿಕ್ಕಿತು. ಅದು ‘ಅಮೆರಿಕಾ ಅಮೆರಿಕಾ’ ಶೀರ್ಷಿಕೆಗೆ ತುಂಬಾ ಹೊಂದಾಣಿಕೆ ಆಗುತ್ತಿತ್ತು. ಕತೆ ಮತ್ತು ಟೈಟಲ್‌ ಎರಡೂ ಕೂಡಿ ಬಂದಿದ್ದರಿಂದ ‘ಅಮೆರಿಕಾ ಅಮೆರಿಕಾ 2’ ಸಿನಿಮಾ ಆಯಿತು.

* ಈಗ ಕಾದಂಬರಿಯನ್ನು ಸಿನಿಮಾ ಮಾಡೋದು, ಅದನ್ನು ನೋಡುಗರಿಗೆ ಒಪ್ಪಿಸೋದು ಸವಾಲು ಅಲ್ಲವೇ?

ಇದು ಸಹನಾ ವಿಜಯ್‌ ಕುಮಾರ್‌ ಅವರು ಬರೆದಿರುವ ‘ಕ್ಷಮೆ’ ಕಾದಂಬರಿ ಆಧಾರಿತ ಚಿತ್ರ. ನನಗೆ ಕಾದಂಬರಿಯನ್ನು ಸಿನಿಮಾಗೆ ಅಳವಡಿಸುವ ಸವಾಲುಗಿಂತ ‘ಇದು ನಿನ್ನಿಂದ ಸಿನಿಮಾ ಮಾಡಲು ಸಾಧ್ಯವೇ, ಇದು ಆಗುತ್ತಾ, ನೋಡು’ ಹಿತೈಷಿಗಳು ಕೊಟ್ಟ ಎಚ್ಚರಿಕೆಗಳೇ ನನಗೆ ಸವಾಲಾಗಿದ್ದವು.

* ಹೊರದೇಶಗಳು ಈಗ ಬಹುತೇಕರಿಗೆ ಅಪರಿಚಿತವಲ್ಲದ ಹೊತ್ತಿನಲ್ಲಿ ‘ಅಮೆರಿಕಾ ಅಮೆರಿಕಾ 2’ ಕತೆ ಹೇಗೆ ಪ್ರಸ್ತುತ?

ಆ ಕಾರಣಕ್ಕೆ ಮೊದಲ ಭಾಗದಲ್ಲಿ ಮಾಡಿದ್ದನ್ನು ಇಲ್ಲಿ ಮಾಡಕ್ಕೆ ಹೋಗಿಲ್ಲ. ಆಗ ಅಮೆರಿಕಾದ ಆಕರ್ಷಣಿಯ ಸ್ಥಳಗಳನ್ನು ದರ್ಶನ ಮಾಡಿಸಿದ್ದೆ. ಈಗ ಸಿಯಾಟಲ್‌, ಚಾರಿತ್ರಿಕ ನಗರ, ಸಾಫ್ಟ್‌ವೇರ್‌, ದುಡಿಯುವ ಮಹಿಳೆ, ತಂದೆ, ತಾಯಿ, ಸಂಬಂಧಗಳು, ಪ್ರೀತಿ- ಪ್ರೇಮ, ಸಂಸಾರದ ತಲ್ಲಣಗಳು... ಇತ್ಯಾದಿಗಳ ಜೊತೆಗೆ ಅಮೆರಿಕಾದ ಕತೆ ಹೇಳಿದ್ದೇನೆ. ಇದು ನುಡಿ ಎನ್ನುವ ಕನ್ನಡದ ಸಾಫ್ಟ್‌ವೇರ್‌ ಹೆಣ್ಣು ಮಗಳ ಕತೆಯಾದರೂ ಭಾರತದ ಬಹುತೇಕ ದುಡಿಯುವ ಹೆಣ್ಣುಮಕ್ಕಳ ಬದುಕು ಹೀಗೆಯೇ ಇದೆ. ಅವರೆಲ್ಲರನ್ನು ಇಲ್ಲಿನ ನುಡಿ ಪಾತ್ರಧಾರಿ ಸಾಂಕೇತಿಕವಾಗಿ ಬಿಂಬಿಸುತ್ತಾಳೆ.

* ಮೊದಲ ಭಾಗದ ನೆನಪಿನಲ್ಲಿರುವ ಬರುವ ಪ್ರೇಕ್ಷಕರಿಗೆ ಏನು ಹೇಳುತ್ತೀರಿ?

ಹಾಗೆಯೇ ಬನ್ನಿ. ಬಂದ ಮೇಲೆ ‘ಅಮೆರಿಕಾ ಅಮೆರಿಕಾ 2’ ನಿಮಗೆ ಹೊಸ ಸ್ವಾದ, ಹೊಸ ಅನುಭವ ನೀಡುತ್ತದೆ. ಹಳೆಯದನ್ನು ಮರೆಯಬೇಕು ಅಂತ ನಾನು ಬಯಸಲ್ಲ. ಈ ಚಿತ್ರದ ಟ್ಯಾಗ್‌ ಲೈನ್‌ ‘ಹಳೆಯ ಕಥೆಗಳಿಂದ್ಲೆ ಹೊಸ ಕಥೆಗಳು ಹುಟ್ಟೋದು..’ ಅಂತಿರೋದು ಅದೇ ಕಾರಣಕ್ಕೆ. 30 ವರ್ಷಗಳ ಹಿಂದಿನ ಭೂಮಿಕ, ಈಗಿನ ನುಡಿ ಪಾತ್ರ, ತ್ರಿಕೋನ ಪ್ರೇಮ ಕತೆ, ಮೈಸೂರು- ಸಿಯಾಟಲ್‌ ನಡುವಿನ ಪ್ರಯಾಣ... ಈ ಎಲ್ಲವೂ ಹೊಸ ಅನುಭವ ನೀಡುತ್ತವೆ.

* ಈಗಿನ ಜನರೇಷನ್‌ಗೆ ಈ ಸಿನಿಮಾ ಹೇಗೆ ಕನೆಕ್ಟ್‌ ಆಗಬಹುದು?

ಈಗಿನ ಜನರೇಷನ್‌ ಅಂದರೆ ಜೆನ್‌ ಝೀಗಳು. ಪ್ರಶ್ನೆ ಮತ್ತು ಪ್ರತಿಭಟನೆ ಮಾಡುವ ಮನೋಭಾವದ ಈ ಜನರೇಷನ್‌ ಬಗ್ಗೆ ನನಗೆ ಗೌರವ ಮತ್ತು ಪ್ರೀತಿ ಇದೆ. ಚಿತ್ರದಲ್ಲಿ ಮಧ್ಯ ವಯಸ್ಸಿನ ತಂದೆ, ಜಗತ್ತನ್ನು ಕುತೂಹಲದಿಂದ ನೋಡುವ ಪ್ರತಿಯೊಂದನ್ನು ಪ್ರಶ್ನಿಸುವ ಪುಟ್ಟ ಮಗು, ತಾಳ್ಮೆ ಇಲ್ಲದೆ ಯುವ ಮನಸ್ಸುಗಳು, ಎಐ ತಂತ್ರಜ್ಞಾನ, ದುಡಿಮೆಯ ಅನಿವಾರ್ಯತೆ.... ಹೀಗೆ ಎಲ್ಲವೂ ಈ ಚಿತ್ರದಲ್ಲಿದೆ. ನಾನು ಒಟ್ಟಾರೆ ಪ್ರೇಕ್ಷಕರನ್ನು ಅಡ್ರೆಸ್‌ ಮಾಡಿ ಮಾಡಿರುವ ಸಿನಿಮಾ ಇದು.

* ಎಲ್ಲವೂ ಗೊತ್ತು ಎನ್ನುವ ಜನರೇಷನ್‌ ಇದು. ಇಂಥವರ ನಡುವೆ ಕತೆ ಹೇಳುವುದು ಎಷ್ಟು ಸವಾಲು?

ತುಂಬಾ ತುಂಬಾ ಸವಾಲು. ಯಾಕೆಂದರೆ ಕೌತುಕತೆ ಹೋಗಿದೆ. ಗೊತ್ತಿದೆ ಅಂದರೆ ನನಗೇನು ಹೇಳಬೇಡಿ ಎನ್ನುವ ಅರ್ಥ. ಆದರೆ, ನಾವುಗಳು ತಾಳ್ಮೆ ಕಳೆದುಕೊಳ್ಳುವುದೇ ಹೇಳಬೇಕಿದೆ. ಬುದ್ಧಿವಾದ, ಸಂದೇಶ ಏನೇ ಇದ್ದರೂ ತುಂಬಾ ಆಪ್ತವಾಗಿ ಬಹುಬೇಗ ಅರ್ಥವಾಗುವಂತೆ ಹೇಳಬೇಕಿದೆ. ಆ ರೀತಿ ದೃಶ್ಯಗಳು ಈ ಚಿತ್ರದಲ್ಲಿ ತುಂಬಾ ಇವೆ.

* ಈ ಚಿತ್ರಕ್ಕೆ ನಿರೂಪ್‌ ಭಂಡಾರಿ, ಪೃಥ್ವಿ ಅಂಬರ್‌, ಶಾನ್ವಿ ಶ್ರೀವಾಸ್ತವ್‌ ಆಯ್ಕೆ ಹೇಗೆ?

ತುಂಬಾ ಜನರ ಆಡಿಷನ್‌, ಸಂದರ್ಶನ ಮಾಡಿದ ನಂತರ ಕೊನೆಗೆ ಸಿಕ್ಕ ಕಲಾವಿದರು ಇವರು. ನನ್ನೊಳಗಿನ ಟಿಪಿಕಲ್‌ ಟೀಚರ್‌ ವ್ಯಕ್ತಿತ್ವವೇ ಈ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದೆ. ತುಂಬಾ ಇಂಟಲಿಜೆಂಟ್‌ ಹಾಗೂ ಸೂಕ್ಷ್ಮಗ್ರಾಹಿಗಳಾಗಿದ್ದರಿಂದ ಇವರು ಈ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ.