ಅಕ್ಟೋಬರ್ 1 ರಿಂದ ಮಂಗಳೂರು ರೈಲ್ವೆ ವಲಯವು ಅಧಿಕೃತವಾಗಿ ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ಬೇರ್ಪಟ್ಟು, ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳ್ಳಲಿದೆ. ಈ ಆಡಳಿತಾತ್ಮಕ ಬದಲಾವಣೆಯ ಭಾಗವಾಗಿ ಆಸ್ತಿ, ಸಿಬ್ಬಂದಿ ಹಾಗೂ ಕಾರ್ಯಾಚರಣೆಗಳ ಹಸ್ತಾಂತರ ಪ್ರಕ್ರಿಯೆ ಅಂತಿಮಗೊಳ್ಳಲಿದ್ದು, ಉಳ್ಳಾಲ ಮತ್ತು ತೋಕೂರು ಹೊಸ ಗಡಿಗಳಾಗಲಿವೆ.

ಮಂಗಳೂರು: ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲ್ವೆ ವಲಯವು ಅಕ್ಟೋಬರ್ 1ರಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದೆ. ಈ ಮಹತ್ವದ ಆಡಳಿತಾತ್ಮಕ ಬದಲಾವಣೆಯ ಹಸ್ತಾಂತರ ಪ್ರಕ್ರಿಯೆಯನ್ನು ಅಂತಿಮಗೊಳಿಸಲು ಉಭಯ ವಿಭಾಗಗಳ ಹಿರಿಯ ಅಧಿಕಾರಿಗಳು ಹಾಗೂ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (DRM) ಶುಕ್ರವಾರ ಅಂದರೆ ಸೆಪ್ಟೆಂಬರ್ 11 ರಂದು ಮಂಗಳೂರಿನಲ್ಲಿ ಜಂಟಿ ಸಭೆ ನಡೆಸಲಿದ್ದಾರೆ.

ಆಗಸ್ಟ್ 21ರಂದು ರೈಲ್ವೆ ಸಚಿವಾಲಯ ಹೊರಡಿಸಿದ ಆದೇಶದಂತೆ, ರೈಲುಗಳ ಸುಗಮ ಕಾರ್ಯಾಚರಣೆ ಹಾಗೂ ಆಡಳಿತಾತ್ಮಕ ಅನುಕೂಲಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ ಆಸ್ತಿ-ಪಾಸ್ತಿ, ಕಾರ್ಯನಿರ್ವಹಿಸುತ್ತಿರುವ ಸುಮಾರು 2,000 ಸಿಬ್ಬಂದಿಯ ಜವಾಬ್ದಾರಿ ಹಾಗೂ ದೈನಂದಿನ ಕಾರ್ಯಾಚರಣೆಗಳ ಹಸ್ತಾಂತರದ ಕುರಿತು ಅಂತಿಮ ರೂಪುರೇಷೆ ಸಿದ್ಧಪಡಿಸಲಾಗುವುದು.

ಗಡಿ ಬದಲಾವಣೆ ಮತ್ತು ವ್ಯಾಪ್ತಿ:

ಹೊಸ ಗಡಿ: ದಕ್ಷಿಣದ ಕಡೆಗೆ ಪಾಲಕ್ಕಾಡ್ ವಿಭಾಗದ ಗಡಿಯು ಉಳ್ಳಾಲ ನಿಲ್ದಾಣದ ಮೊದಲು ಕೊನೆಗೊಳ್ಳಲಿದ್ದು, ಹಾಲಿ ಪಡೀಲ್‌ನಲ್ಲಿದ್ದ ಗಡಿಯು ಉಳ್ಳಾಲಕ್ಕೆ ಸ್ಥಳಾಂತರಗೊಳ್ಳಲಿದೆ.

ಉತ್ತರದ ಗಡಿ: ಕೊಂಕಣ ರೈಲ್ವೆ ನಿಗಮಕ್ಕೆ ಸೇರುವ ತೋಕೂರು ನಿಲ್ದಾಣದವರೆಗೆ ನೈಋತ್ಯ ರೈಲ್ವೆಯ ವ್ಯಾಪ್ತಿ ಇರಲಿದೆ.

ಒಟ್ಟು ಮಾರ್ಗ: ಮಂಗಳೂರು ರೈಲ್ವೆ ಪ್ರದೇಶದ ಒಟ್ಟು 39 ಕಿ.ಮೀ. ಪೈಕಿ ಸುಮಾರು 30 ಕಿ.ಮೀ. ಭಾಗವು ಇನ್ಮುಂದೆ ಮೈಸೂರು ವಿಭಾಗದ ಆಡಳಿತಕ್ಕೆ ಒಳಪಡಲಿದೆ.

ಸಿಬ್ಬಂದಿ ಮತ್ತು ಕಾರ್ಯಾಚರಣೆಯಲ್ಲಿ ಯಥಾಸ್ಥಿತಿ:

ಹಸ್ತಾಂತರದ ಆರಂಭಿಕ ಹಂತದಲ್ಲಿ ರೈಲು ಸಂಚಾರ ಮತ್ತು ಸಿಬ್ಬಂದಿ ವ್ಯವಸ್ಥೆಯಲ್ಲಿ ಯಾವುದೇ ತಕ್ಷಣದ ದೊಡ್ಡ ಬದಲಾವಣೆಗಳಿರುವುದಿಲ್ಲ. ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ತಕ್ಷಣಕ್ಕೆ ವರ್ಗಾವಣೆ ಅಥವಾ ಸ್ಥಳಾಂತರ ಮಾಡದೆ ಹಾಲಿ ವ್ಯವಸ್ಥೆಯನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ.

ಮಂಗಳೂರು ವಲಯದ ಪ್ರಮುಖ ರೈಲ್ವೆ ಆಸ್ತಿಗಳು ಹಾಗೂ ಸೌಲಭ್ಯಗಳು:

ಮಂಗಳೂರು ಸೆಂಟ್ರಲ್: 6 ಪ್ಲಾಟ್‌ಫಾರ್ಮ್‌ಗಳು ಹಾಗೂ 1 ಬೇ ಪ್ಲಾಟ್‌ಫಾರ್ಮ್. 3 ಪಿಟ್‌ಲೈನ್‌ಗಳು (24 ಕೋಚ್‌ಗಳ ಸಾಮರ್ಥ್ಯ, ಹೈ-ಪ್ರೆಶರ್ ಜೆಟ್ ಸೌಲಭ್ಯ) ಮತ್ತು 1 ಸಿಕ್‌ಲೈನ್. ಪಾಲಕ್ಕಾಡ್ ವಿಭಾಗದ ಪ್ರಮುಖ ಕೋಚಿಂಗ್ ಡಿಪೋ ಹೊಂದಿದ್ದು, 17 ಜೋಡಿ ರೈಲುಗಳ (450 ಕೋಚ್‌ಗಳು) ಪ್ರಾಥಮಿಕ ನಿರ್ವಹಣೆ ಇಲ್ಲೇ ನಡೆಯುತ್ತದೆ. ದಿನಕ್ಕೆ ಸರಾಸರಿ 30 ರೈಲುಗಳ ಸಂಚಾರ ಹಾಗೂ 63 ಹಾಸಿಗೆಗಳುಳ್ಳ (ಮಹಿಳಾ ಸಿಬ್ಬಂದಿಗೆ 4) ರನ್ನಿಂಗ್ ರೂಂ ಸೌಲಭ್ಯ ಇದೆ.

ಮಂಗಳೂರು ಜಂಕ್ಷನ್: 3 ಪ್ಲಾಟ್‌ಫಾರ್ಮ್ ಹಾಗೂ 7 ರೈಲು ಮಾರ್ಗಗಳು (4 ಪ್ರಯಾಣಿಕ ರೈಲುಗಳಿಗೆ, 2 ಸರಕು ರೈಲುಗಳಿಗೆ, 1 ಸಿಕ್‌ಲೈನ್‌ಗೆ). ಪ್ರಮುಖ ವ್ಯಾಗನ್ ತಪಾಸಣಾ ಡಿಪೋ ಮತ್ತು ಡೀಸೆಲ್ ಲೋಕೋಮೋಟಿವ್ ಇಂಧನ ಪೂರೈಕೆ ಕೇಂದ್ರ. ಪ್ರತಿದಿನ 70 ನಿಲುಗಡೆ ರೈಲುಗಳು ಹಾಗೂ 10 ಆರಂಭಿಕ/ಅಂತಿಮ ರೈಲುಗಳ ನಿರ್ವಹಣೆ. ಕಾರ್ಯಾಚರಣೆ ಸಿಬ್ಬಂದಿಗೆ 64 ಹಾಸಿಗೆಗಳ ರನ್ನಿಂಗ್ ರೂಂ ಸೌಲಭ್ಯ ಇದೆ.

ಕಾಸರಗೋಡು ಪ್ರಯಾಣಿಕರ ಬೇಡಿಕೆ:

ಈ ಆಡಳಿತಾತ್ಮಕ ಗಡಿ ಬದಲಾವಣೆಯಿಂದ ಪಾಲಕ್ಕಾಡ್ ವಿಭಾಗದ ಆದಾಯ ಮತ್ತು ಕಾರ್ಯಾಚರಣೆ ಸಾಮರ್ಥ್ಯಕ್ಕೆ ಧಕ್ಕೆಯಾಗಲಿದೆ ಎಂದು ಸ್ಥಳೀಯ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಮಂಜೇಶ್ವರ ಹಾಗೂ ಕುಂಬ್ಳ ರೈಲು ನಿಲ್ದಾಣಗಳು ದಕ್ಷಿಣ ರೈಲ್ವೆಯ ಕೊನೆಯ ನಿಲ್ದಾಣಗಳಾಗುವುದರಿಂದ, ಅಲ್ಲಿ ಸೂಕ್ತ ಕೋಚಿಂಗ್ ಹಾಗೂ ಮೂಲಸೌಕರ್ಯಗಳನ್ನು ಕಲ್ಪಿಸಬೇಕೆಂದು ಕಾಸರಗೋಡಿನ ರೈಲು ಬಳಕೆದಾರರ ವೇದಿಕೆಗಳು ಒತ್ತಾಯಿಸಿವೆ. ಒಟ್ಟಿನಲ್ಲಿ ಮಂಗಳೂರು ವಿಭಾಗವು ಮೈಸೂರು ಡಿವಿಜನ್ ಸೇರುವುದು ಪಕ್ಕಾ ಆಗಿದ್ದು, ದಾಖಲೆಗಳ ಹಸ್ತಾಂತರ ನಡೆಯಲಿದೆ.