ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಸೆಪ್ಟೆಂಬರ್ 11ರಂದು ಬಿಡುಗಡೆಯಾಗಲಿದೆ. ಸ್ತ್ರೀಕೇಂದ್ರಿತ ಕಥೆ ಮತ್ತು ಸಿನಿಮಾದ ಗಂಭೀರ ವಿಚಾರದ ಬಗ್ಗೆ ನಿರ್ದೇಶಕರು ಹೇಳಿದ್ದೇನು?

‘ಅಮೆರಿಕಾ ಅಮೆರಿಕಾ ಸಿನಿಮಾದಲ್ಲಿ ಹೊರದೇಶಕ್ಕೆ ಹೋದ ಉದ್ಯೋಗಸ್ಥ ಹೆಣ್ಣುಮಗಳ ಭಾವನೆಗಳ ಚಿತ್ರಣ ಇದೆ. ಇಡೀ ಸಿನಿಮಾ ಸ್ತ್ರೀಕೇಂದ್ರಿತವಾಗಿದೆ. ಇದರಲ್ಲಿ ಗಂಭೀರವಾದ ವಿಚಾರವೊಂದರ ಪ್ರಸ್ತುತಿ ಇದೆ. ಅದನ್ನು ಸಮಾಜ ಹೇಗೆ ಸ್ವೀಕರಿಸುತ್ತದೆ ಎಂಬುದರ ಬಗ್ಗೆ ನನಗೆ ಆತಂಕವಿದೆ. ’

ಈ ಮಾತು ಹೇಳಿದ್ದು ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌. ಸಹನಾ ವಿಜಯಕುಮಾರ್‌ ಅವರ ‘ಕ್ಷಮೆ’ ಕಾದಂಬರಿ ಆಧರಿಸಿ ಅವರು ನಿರ್ದೇಶಿಸಿರುವ ಸಿನಿಮಾ ‘ಅಮೆರಿಕಾ ಅಮೆರಿಕಾ 2’. ಈ ಸಿನಿಮಾದ ‘ರನ್‌ ರನ್‌’ ಹಾಡನ್ನು ‘ಕನ್ನಡಪ್ರಭ’ದ ಸಂಪಾದಕ ಜೋಗಿ ಬಿಡುಗಡೆ ಮಾಡಿದರು. ಈ ಸಿನಿಮಾ ಸೆಪ್ಟೆಂಬರ್‌ 11ರಂದು ಬಿಡುಗಡೆಯಾಗುತ್ತಿದೆ. ನಾಗತಿಹಳ್ಳಿ ಚಂದ್ರಶೇಖರ್‌, ‘ನಮ್ಮ ಕನ್ನಡ ಸಿನಿಮಾ ಅಮೆರಿಕಾ, ಕೆನಡಾ, ಯುರೋಪ್‌, ಆಸ್ಟ್ರೇಲಿಯಾ ದೇಶಗಳಲ್ಲೂ ಬಿಡುಗಡೆಯಾಗಲಿದೆ. ಚಂಡಮಾರುತದಂಥಾ ಟಾಕ್ಸಿಕ್‌ ರಿಲೀಸ್‌ ಬೆನ್ನಲ್ಲೇ ನಮ್ಮ ಚಿತ್ರ ತೆರೆಗೆ ಬರಲಿದೆ’ ಎಂದರು.

ಜೆನ್ Zಗೆ ಕನೆಕ್ಟ್ ಆಗುವ ಹಾಡು

‘ಕನ್ನಡಪ್ರಭ’ ಸಂಪಾದಕ ಜೋಗಿ ಮಾತನಾಡಿ, ‘ಅಮೆರಿಕಾ ಅಮೆರಿಕಾ 2 ಸಿನಿಮಾದ ರನ್‌ ರನ್‌ ಹಾಡು ಜೆನ್‌ ಜೀಗಳ ಜೀವನದ ಹಾಡಿನಂತಿದೆ. ಅವರ ಟೇಸ್ಟ್‌ಗೆ ತಕ್ಕಂತೆ ರೂಪುಗೊಂಡಿದೆ. ಇನ್ನೊಂದೆಡೆ ಅಮೆರಿಕಾ ಬಿಡುಗಡೆಯ ದೇಶ ಎಂಬ ಭಾವನೆ ಇದೆ. ಆ ಬಿಡುಗಡೆಯಿಂದ ನಾಯಕಿ ಅನುಭವಿಸುವ ಕಷ್ಟಗಳೇನು ಅನ್ನುವುದನ್ನು ಸಿನಿಮಾ ಸಂವೇದನಾತ್ಮಕವಾಗಿ ಕಟ್ಟಿಕೊಡುತ್ತದೆ. ನಾಗತಿಹಳ್ಳಿ ಅವರು ಚಿತ್ರರಂಗಕ್ಕೆ ಮೇಷ್ಟ್ರರಂತಿರುವವರು. ಸದ್ಯ ಸಂಕಷ್ಟದಲ್ಲಿರುವ ಚಿತ್ರರಂಗಕ್ಕೆ ಅವರಂಥವರ ಅಗತ್ಯ ಹೆಚ್ಚಿದೆ’ ಎಂದರು.

ನಾಯಕಿ ಸಾನ್ವಿ ಶ್ರೀವಾಸ್ತವ್‌, ‘ಮೂರು ವರ್ಷಗಳ ನಂತರ ನನ್ನ ನಟನೆಯ ಸಿನಿಮಾ ಬರುತ್ತಿದೆ ಅನ್ನೋದೆ ಖುಷಿ ಕೊಡುತ್ತದೆ’ ಎಂದರು. ನಾಯಕ ಪೃಥ್ವಿ ಅಂಬಾರ್‌, ಸಂಗೀತ ನಿರ್ದೇಶಕ ಮನೋಮೂರ್ತಿ ಹಾಗೂ ಚಿತ್ರತಂಡದವರು ಹಾಜರಿದ್ದರು. ಇದೇ ವೇಳೆ ಮನೋಮೂರ್ತಿ ಹಾಗೂ ನಾಗತಿಹಳ್ಳಿ ಚಂದ್ರಶೇಖರ್‌ ಅವರು ‘ಅಮೆರಿಕಾ ಅಮೆರಿಕಾ’ ಸಿನಿಮಾದಿಂದ ‘ಅಮೆರಿಕಾ ಅಮೆರಿಕಾ 2’ ಸಿನಿಮಾವರೆಗೆ ಹಾಡುಗಳ ಜರ್ನಿಯನ್ನು ನೆನಪಿಸಿಕೊಂಡರು.