ರೇಲಿಗೇರ್ ಬ್ರೋಕಿಂಗ್ ವರದಿಯ ಪ್ರಕಾರ, ಸೆಪ್ಟೆಂಬರ್ 2026ಕ್ಕೆ ಅನ್ವಯಿಸುವಂತೆ ಅಧಿಕ ಡಿವಿಡೆಂಡ್ ನೀಡುವ ಟಾಪ್ 10 ಷೇರುಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಪಿಟಿಸಿ ಇಂಡಿಯಾ ಅಗ್ರಸ್ಥಾನದಲ್ಲಿದೆ.

ಬೆಂಗಳೂರು/ನವದೆಹಲಿ (ಸೆ.3): ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಉತ್ತಮ 'ಡಿವಿಡೆಂಡ್' (ಲಾಭಾಂಶ) ಪಡೆಯಲು ಬಯಸುವ ಹೂಡಿಕೆದಾರರಿಗೆ ಇದು ಸುವರ್ಣಾವಕಾಶ. ರೇಲಿಗೇರ್ ಬ್ರೋಕಿಂಗ್ ಲಿಮಿಟೆಡ್ (Religare Broking Ltd) ಬಿಡುಗಡೆ ಮಾಡಿರುವ ಸೆಪ್ಟೆಂಬರ್ 2026ರ ಇತ್ತೀಚಿನ ವಿಶ್ಲೇಷಣಾ ವರದಿಯ ಪ್ರಕಾರ, ಭಾರತೀಯ ಶೇರು ಮಾರುಕಟ್ಟೆಯ ಪ್ರಮುಖ 10 ಕಂಪನಿಗಳು ಶೇ. 3.3 ರಿಂದ ಶೇ. 9.7 ರಷ್ಟು ಅತ್ಯಧಿಕ ಡಿವಿಡೆಂಡ್ ಈಲ್ಡ್ (Dividend Yield) ನೀಡುತ್ತಿವೆ. ಈ ಪಟ್ಟಿಯಲ್ಲಿ ಟಿಸಿಎಸ್, ಎಚ್‌ಸಿಎಲ್‌ ಟೆಕ್, ಗೇಲ್ ಮತ್ತು ಒಎನ್‌ಜಿಸಿಯಂತಹ ದಿಗ್ಗಜ ಕಂಪನಿಗಳು ಸ್ಥಾನ ಪಡೆದಿದ್ದು, 'ಪಿಟಿಸಿ ಇಂಡಿಯಾ' (PTC India) ಗರಿಷ್ಠ ಲಾಭಾಂಶ ನೀಡುವ ಕಂಪನಿಯಾಗಿ ಅಗ್ರಸ್ಥಾನದಲ್ಲಿದೆ. 2025-26ನೇ ಹಣಕಾಸು ವರ್ಷದ (FY26) ಹೊಂದಾಣಿಕೆಯ ಪಾವತಿಗಳ ಆಧಾರದ ಮೇಲೆ ಸಿದ್ಧಪಡಿಸಲಾದ ಟಾಪ್ 10 ಡಿವಿಡೆಂಡ್ ಷೇರುಗಳ ವಿವರ ಇಲ್ಲಿದೆ:

ಲಾಭಾಂಶ ನೀಡುವ ಟಾಪ್ 10 ಕಂಪನಿಗಳ ಪಟ್ಟಿ

ಪಿಟಿಸಿ ಇಂಡಿಯಾ (PTC India): ಡಿವಿಡೆಂಡ್‌ ವಿಚಾರದಲ್ಲಿ ಪಿಟಿಸಿ ಇಂಡಿಯಾ ಅಗ್ರಸ್ಥಾನದಲ್ಲಿದೆ. 2025-26ನೇ ಹಣಕಾಸು ವರ್ಷದಲ್ಲಿ ಪ್ರತಿ ಷೇರಿಗೆ ₹14.70 ಡಿವಿಡೆಂಡ್ ನೀಡಿದೆ. ಇದು 2024-25ರಲ್ಲಿ ನೀಡಿದ್ದ ₹7.80 ಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ.

ಕೋಲ್ ಇಂಡಿಯಾ (Coal India): 2ನೇ ಸ್ಥಾನದಲ್ಲಿ ಕೋಲ್‌ ಇಂಡಿಯಾ ಇದ್ದು, ಶೇ. 6.6ರಷ್ಟು ಡಿವಿಡೆಂಡ್‌ ಪಾವತಿ ಮಾಡಿದೆ. FY26ರಲ್ಲಿ ಪ್ರತಿ ಷೇರಿಗೆ ₹26.40 ನೀಡಿದೆ (FY25ರಲ್ಲಿ ₹25.50 ಇತ್ತು). ಜೊತೆಗೆ, FY26ಕ್ಕೆ ಕಂಪನಿಯು ಪ್ರತಿ ಷೇರಿಗೆ ₹5.25 ಅಂತಿಮ ಡಿವಿಡೆಂಡ್ (Final Dividend) ಕೂಡ ಪ್ರಕಟ ಮಾಡಿದೆ.

ಆರ್‌ಇಸಿ (REC Ltd): ಮೂರನೇ ಸ್ಥಾನದಲ್ಲಿ ಆರ್‌ಇಸಿ ಇಂಡಿಯಾ ಲಿಮಿಟೆಡ್‌ ಕಂಪನಿ ಇದ್ದು, ಶೇ. 6.2ನಷ್ಟು ಡಿವಿಡೆಂಡ್‌ ನೀಡಿದೆ. ಮೌಲ್ಯಮಾಪನದಲ್ಲಿ ಅತ್ಯಂತ ಕಡಿಮೆಯಿರುವ ಷೇರುಗಳಲ್ಲಿ ಒಂದಾಗಿದೆ. ಸಾಲ ನೀಡಿಕೆಯಲ್ಲಿ ತೊಡಗಿರುವ ಈ ಕಂಪನಿಯು FY26ರಲ್ಲಿ ಪ್ರತಿ ಷೇರಿಗೆ ₹19.60 ಲಾಭಾಂಶ (FY25ರಲ್ಲಿ ₹20.40 ಪಾವತಿಸಿತ್ತು) ನೀಡಿದೆ.

ಒಎನ್‌ಜಿಸಿ (ONGC): ಈ ಕಂಪನಿಯ ಡಿವಿಡೆಂಡ್ ಈಲ್ಡ್ ಶೇ. 5.8ರಷ್ಟಿದ್ದು, ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು FY26ರಲ್ಲಿ ಪ್ರತಿ ಷೇರಿಗೆ ₹13.50 ನೀಡಿದೆ (FY25ರಲ್ಲಿ ₹12.30 ನೀಡಲಾಗಿತ್ತು).

ಗುಜರಾತ್ ಪೀಪಾವಾವ್ ಪೋರ್ಟ್ (Gujarat Pipavav Port):ಡಿವಿಡೆಂಡ್ ಈಲ್ಡ್ ಶೇ. 5.7ರಷ್ಟಿದ್ದು, ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಬಂದರು ನಿರ್ವಹಣೆಯ ಈ ಕಂಪನಿಯು FY26ರಲ್ಲಿ ನೀಡಿದ ಡಿವಿಡೆಂಡ್ ₹9.60 ಕ್ಕೆ ಏರಿಕೆಯಾಗಿದೆ (FY25ರಲ್ಲಿ ₹7.70 ಇತ್ತು).

ಪವರ್ ಫೈನಾನ್ಸ್ ಕಾರ್ಪೊರೇಷನ್ (PFC): ಈ ಇಡೀ ಪಟ್ಟಿಯಲ್ಲೇ ಅತ್ಯಂತ ಕಡಿಮೆ ಪಿ/ಇ ಹೊಂದಿರುವ ಷೇರು ಇದಾಗಗಿದ್ದು, ಶೇ.5ರಷ್ಟು ಡಿವಿಡೆಂಟ್‌ ನೀಡಿದೆ.FY26ರಲ್ಲಿ ಪ್ರತಿ ಷೇರಿಗೆ ₹16.70 ಪಾವತಿಸಿದೆ (FY25ರಲ್ಲಿ ₹13.50 ಇತ್ತು).

ಟಿಸಿಎಸ್ ಮತ್ತು ಎಚ್‌ಸಿಎಲ್‌ ಟೆಕ್ (TCS & HCLTech):ಟಿಸಿಎಸ್ (TCS) ಶೇ. 4.5 ಡಿವಿಡೆಂಡ್ ಈಲ್ಡ್ ಹೊಂದಿದ್ದು, FY26ರಲ್ಲಿ ಪ್ರತಿ ಷೇರಿಗೆ ₹109 ಡಿವಿಡೆಂಡ್ ನೀಡಿದೆ. ಎಚ್‌ಸಿಎಲ್‌ ಟೆಕ್ (HCLTech) ಕಂಪನಿ ಶೇ. 4.1 ಡಿವಿಡೆಂಡ್ ಈಲ್ಡ್ ಹೊಂದಿದ್ದು FY26ರಲ್ಲಿ ಪ್ರತಿ ಷೇರಿಗೆ ₹54 ಡಿವಿಡೆಂಡ್ ನೀಡಿದೆ.

ಗೇಲ್ ಇಂಡಿಯಾ (GAIL India): ಈ ಕಂಪನಿ ಶೇ. 3.5 ರಷ್ಟು ಡಿವಿಡೆಂಡ್‌ ಹೊಂದಿದ್ದು, FY26ರಲ್ಲಿ ಪ್ರತಿ ಷೇರಿಗೆ ₹6 ಡಿವಿಡೆಂಡ್ ನೀಡಿದೆ (FY25ರಲ್ಲಿ ನೀಡಿದ್ದ ₹6.50 ಕ್ಕಿಂತ ಕೊಂಚ ಕಡಿಮೆ).

ಪೆಟ್ರೋನೆಟ್ ಎಲ್‌ಎನ್‌ಜಿ (Petronet LNG): ಡಿವಿಡೆಂಡ್ ಈಲ್ಡ್ ಶೇ. 3.3ರಷ್ಟಿದ್ದು, ಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ. FY26ರಲ್ಲಿ ಪ್ರತಿ ಷೇರಿಗೆ ₹10 ಡಿವಿಡೆಂಡ್ ನೀಡಿದ್ದು, ಹಿಂದಿನ ಹಣಕಾಸು ವರ್ಷದ ದರದಲ್ಲೇ ಯಥಾವತ್ತಾಗಿ ಕಾಯ್ದುಕೊಂಡಿದೆ.