ಟೈಟಾನ್ ಕಂಪನಿಯಲ್ಲಿ ಟಾಟಾ ಸಮೂಹಕ್ಕಿಂತಲೂ ತಮಿಳುನಾಡು ಸರ್ಕಾರದ 'ಟಿಡ್ಕೋ' ಸಂಸ್ಥೆಯು ಹೆಚ್ಚಿನ ಶೇರುಗಳನ್ನು ಹೊಂದಿದೆ. 1984ರಲ್ಲಿ ಜಂಟಿ ಉದ್ಯಮವಾಗಿ ಪ್ರಾರಂಭವಾದ ಈ ಕಂಪನಿಯಲ್ಲಿ, ಟಿಡ್ಕೋ ಇಂದು ಶೇ. 27.88ರಷ್ಟು ಪಾಲುದಾರಿಕೆ ಹೊಂದಿದೆ.

ಬೆಂಗಳೂರು (ಆ.3): ನೀವು ಫಾಸ್ಟ್‌ಟ್ರ್ಯಾಕ್ ವಾಚ್ (Fastrack watch) ಖರೀದಿಸಿದಾಗ ಅಥವಾ ತನಿಷ್ಕ್ (Tanishq) ಶೋರೂಂನಿಂದ ಚಿನ್ನದ ಆಭರಣಗಳನ್ನು ಖರೀದಿಸಿದಾಗ, ನಿಮ್ಮ ಹಣ ಸಂಪೂರ್ಣವಾಗಿ ಟಾಟಾ ಸಮೂಹದ ಜೇಬು ಸೇರುತ್ತದೆ ಎಂದೇ ನೀವು ಭಾವಿಸಿರಬಹುದು. ವಿಚಾರ ಏನೆಂದರೆ, ಪ್ರಸಿದ್ಧ 'ಟೈಟಾನ್' (Titan Company) ಕಂಪನಿಯಲ್ಲಿ ಟಾಟಾ ಸನ್ಸ್‌ಗಿಂತಲೂ ಹೆಚ್ಚಿನ ಶೇರುಗಳನ್ನು ತಮಿಳುನಾಡು ಸರ್ಕಾರದ ಸಂಸ್ಥೆಯಾದ 'ತಮಿಳುನಾಡು ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್' (TIDCO) ಹೊಂದಿದೆ!

ವರ್ಷಂಪ್ರತಿ ಕೋಟ್ಯಂತರ ರೂಪಾಯಿಗಳನ್ನು ಲಾಭಾಂಶವಾಗಿ (Dividend) ಪಡೆಯುತ್ತಿರುವ ಈ ಸಂಸ್ಥೆಯು ಟೈಟಾನ್‌ನಲ್ಲಿ ಹೊಂದಿರುವ ಶೇರುಗಳ ಇಂದಿನ ಮಾರುಕಟ್ಟೆ ಮೌಲ್ಯವೇ ಬರೋಬ್ಬರಿ ₹1.19 ಲಕ್ಷ ಕೋಟಿ ರೂಪಾಯಿ ಆಗಿದೆ.

ಟೈಟಾನ್‌ನಲ್ಲಿ ತಮಿಳುನಾಡು ಸರ್ಕಾರಕ್ಕೆ ಇಷ್ಟೊಂದು ಶೇರು ಸಿಕ್ಕಿದ್ದು ಹೇಗೆ?

1984ರಲ್ಲಿ ಭಾರತದಲ್ಲಿ 'ಲೈಸೆನ್ಸ್ ರಾಜ್' ವ್ಯವಸ್ಥೆ ಜಾರಿಯಲ್ಲಿದ್ದಾಗ ಟೈಟಾನ್ ಸಂಸ್ಥೆ ರೂಪುಗೊಂಡಿತು. ಆ ಕಾಲದಲ್ಲಿ ವಾಚ್ ಉತ್ಪಾದನೆಗೆ ಸರ್ಕಾರದ ಲೈಸೆನ್ಸ್ ಪಡೆದುಕೊಳ್ಳುವುದು ಕಡ್ಡಾಯವಾಗಿತ್ತು. ಆ ಸಮಯದಲ್ಲಿ ಲೈಸೆನ್ಸ್ ಮತ್ತು ಸರ್ಕಾರದ ಬೆಂಬಲ ಹೊಂದಿದ್ದ ತಮಿಳುನಾಡು ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (TIDCO) ಹಾಗೂ ಟಾಟಾ ಸಮೂಹ ಜಂಟಿಯಾಗಿ (Joint Venture) ಟೈಟಾನ್ ಕಂಪನಿಯನ್ನು ಪ್ರಾರಂಭಿಸಿದವು.

ಟಾಟಾ ಸಮೂಹದ ಹಿರಿಯ ಅಧಿಕಾರಿಯಾಗಿದ್ದ ಕ್ಸೆರ್ಕ್ಸ್‌ ದೇಸಾಯಿ (Xerxes Desai) ಅವರ ನೇತೃತ್ವದಲ್ಲಿ ಈ ಯೋಜನೆಗೆ ಚಾಲನೆ ದೊರೆಯಿತು. ಕೇಂದ್ರ ಸರ್ಕಾರದ ಅನುಮತಿ ಸಿಕ್ಕ ಬಳಿಕ ಟಾಟಾ ಗ್ರೂಪ್ ಮತ್ತು 'ಟಿಡ್ಕೋ' (TIDCO) ಕಂಪನಿಯ ಮುಖ್ಯ ಪ್ರವರ್ತಕರಾಗಿ (Promoters) ಕಾರ್ಯನಿರ್ವಹಿಸಲು ತೊಡಗಿದವು.

ಬೆಂಗಳೂರಿನಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ತಮಿಳುನಾಡಿನ ಹೊಸೂರಿನ 'ಸಿಪ್‌ಕಾಟ್' (SIPCOT) ಇಂಡಸ್ಟ್ರಿಯಲ್ ಕಾಂಪ್ಲೆಕ್ಸ್‌ನಲ್ಲಿ ಟೈಟಾನ್‌ನ ಮೊದಲ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಯಿತು. ದೊಡ್ಡ ಕೈಗಾರಿಕಾ ನಗರಗಳಿಂದ ಹೊರಗಿರುವ ಗ್ರಾಮೀಣ/ಹಿಂದುಳಿದ ಪ್ರದೇಶಗಳಿಗೂ ಕೈಗಾರಿಕಾ ಅಭಿವೃದ್ಧಿಯನ್ನು ವಿಸ್ತರಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಕಾಲಕ್ರಮೇಣ ಹೊಸೂರು ದೇಶದ ಪ್ರಮುಖ ಉತ್ಪಾದನಾ ಕೇಂದ್ರಗಳಲ್ಲಿ ಒಂದಾಗಿ ಬೆಳೆಯಲು ಇದು ತಡಿಹಾಕಿತು.

ಟಾಟಾಗಿಂತಲೂ ದೊಡ್ಡ ಪ್ರವರ್ತಕ ಸಂಸ್ಥೆ 'ಟಿಡ್ಕೋ'!

ಕಾಲಕ್ರಮೇಣ ಟೈಟಾನ್ ಸಂಸ್ಥೆಯು ಬೃಹತ್ ಮಟ್ಟದಲ್ಲಿ ಬೆಳೆದಾಗಲೂ ಟಿಡ್ಕೋ ತನ್ನ ಶೇರುಗಳನ್ನು ಮಾರಾಟ ಮಾಡದೆ ತನ್ನಲ್ಲೇ ಉಳಿಸಿಕೊಂಡಿತು. ಇಂದು ಟೈಟಾನ್‌ನಲ್ಲಿ ಟಿಡ್ಕೋ ಸಂಸ್ಥೆಯು ಶೇ. 27.88ರಷ್ಟು ಶೇರುಗಳನ್ನು (ಒಟ್ಟು 24,74,76,720 ಶೇರುಗಳು) ಹೊಂದಿದೆ. ಆದರೆ ಟಾಟಾ ಸನ್ಸ್ ಸಂಸ್ಥೆಯು ಶೇ. 20.84ರಷ್ಟು ಶೇರುಗಳನ್ನು ಮಾತ್ರ ಹೊಂದಿದೆ. ಈ ಮೂಲಕ ಟಾಟಾ ಸನ್ಸ್‌ಗಿಂತಲೂ ಹೆಚ್ಚಿನ ಪ್ರವರ್ತಕ ಶೇರುಗಳನ್ನು ಹೊಂದಿರುವ ಸಂಸ್ಥೆಯಾಗಿ ಟಿಡ್ಕೋ ಹೊರಹೊಮ್ಮಿದೆ. ಟೈಟಾನ್‌ನ ಪ್ರತಿ ಶೇರಿನ ಬೆಲೆ ₹4,862ರಷ್ಟಿರುವ ಲೆಕ್ಕಾಚಾರದಂತೆ, ಟಿಡ್ಕೋ ಹೊಂದಿರುವ ಶೇರುಗಳ ಮಾರುಕಟ್ಟೆ ಮೌಲ್ಯ ಸುಮಾರು ₹1.19 ಲಕ್ಷ ಕೋಟಿ ರೂ. ಆಗಿದೆ.

ಕೋಟ್ಯಂತರ ರೂಪಾಯಿ ಲಾಭಾಂಶ (Dividend)

2025-26ರ ಹಣಕಾಸು ವರ್ಷಕ್ಕಾಗಿ ಟೈಟಾನ್ ಸಂಸ್ಥೆಯು ಪ್ರತಿ ಶೇರಿಗೆ ₹15 ಲಾಭಾಂಶವನ್ನು ಘೋಷಿಸಿದೆ. ಈ ಲೆಕ್ಕಾಚಾರದ ಪ್ರಕಾರ, ತಮಿಳುನಾಡು ಸರ್ಕಾರದ ಟಿಡ್ಕೋ ಸಂಸ್ಥೆಗೆ ಲಾಭಾಂಶದ ರೂಪದಲ್ಲೇ ಬರೋಬ್ಬರಿ ₹371.21 ಕೋಟಿ ರೂಪಾಯಿ ಆದಾಯ ಸಿಗಲಿದೆ! ಕಂಪನಿಯ ಶರವೇಗದ ಬೆಳವಣಿಗೆಯ ಜೊತೆಜೊತೆಗೆ ತನ್ನ ಶೇರುಗಳನ್ನು ಕಾಯ್ದುಕೊಂಡು ಬಂದಿದ್ದರಿಂದ, ತಮಿಳುನಾಡು ಸರ್ಕಾರಿ ಸಂಸ್ಥೆಗೆ ಇಂದು ನೂರಾರು ಕೋಟಿ ರೂಪಾಯಿಗಳ ವಾರ್ಷಿಕ ಲಾಭಾಂಶ ಹಾಗೂ ಲಕ್ಷ ಕೋಟಿ ರೂಪಾಯಿಗೂ ಅಧಿಕ ಶೇರು ಮೌಲ್ಯದ ಸಂಪತ್ತು ಒಲಿದುಬಂದಿದೆ.