milk cover earn money : ಹಾಲಿನ ಕವರ್‌ ಕಸಕ್ಕೆ ಎಸಿತಿದ್ದೀರಾ? ಇನ್ಮುಂದೆ ಅದನ್ನು ಸಂಗ್ರಹಿಸಿ. ಈ ಕವರ್ ನಿಮಗೆ ಕಸ ಎನ್ನಿಸಿದ್ರೂ ಸಣ್ಣ ಗಳಿಕೆಗೆ ಸಹಾಯ ಮಾಡುತ್ತೆ.

ಪ್ರತಿದಿನ ಬೆಳಗ್ಗೆ ಹಾಲಿನ ಪ್ಯಾಕೆಟ್ ಮನೆಗೆ ಬರುತ್ತೆ. ಹಾಲನ್ನು ಪಾತ್ರೆಗೆ ಹಾಕಿ ಪ್ಯಾಕೆಟ್‌ ಕಸಕ್ಕೆ ಹಾಕ್ತೇವೆ. ಆದ್ರೆ ಈ ಖಾಲಿ ಪ್ಲಾಸ್ಟಿಕ್ ಪ್ಯಾಕೆಟ್ ಕಸಕ್ಕೆ ಹಾಕೋ ಬದಲು ಅದ್ರಲ್ಲೇ ಹಣ ಮಾಡ್ಬುದು. ಮನೆಗೆ ಪ್ರತಿ ದಿನ ಬರುವ ಹಾಲಿನ ಪ್ಯಾಕೆಟನ್ನು ಕಸಕ್ಕೆ ಹಾಕುವ ಬದಲು ಪ್ರತ್ಯೇಕವಾಗಿ ಸಂಗ್ರಹಿಸಿ.

ಹಾಲಿನ ಪ್ಯಾಕೆಟ್ಗಳು ಸಾಮಾನ್ಯವಾಗಿ LDPE ಪ್ಲಾಸ್ಟಿಕ್ನಿಂದ ತಯಾರಾಗಿರುತ್ತವೆ. ಇವುಗಳನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿ ಸ್ಕ್ರ್ಯಾಪ್ ವ್ಯಾಪಾರಿಗಳಿಗೆ ಅಥವಾ ಮರುಬಳಕೆ ಮಾಡುವ ಸಂಸ್ಥೆಗಳಿಗೆ ನೀಡಬಹುದು. ಆದರೆ ಒಂದು ವಿಷಯ ನೆನಪಿಟ್ಟುಕೊಳ್ಳಬೇಕು. ಹಾಲಿನ ಪ್ಯಾಕೆಟ್ಗೆ ದೇಶಾದ್ಯಂತ ಒಂದೇ ಬೆಲೆ ಇರೋದಿಲ್ಲ.

ಪ್ಯಾಕೆಟ್ ಗೆ ಎಷ್ಟು ಹಣ ಸಿಗಬಹುದು?

ಲಭ್ಯವಿರುವ ಕೆಲವು ಮಾರುಕಟ್ಟೆ ಪಟ್ಟಿಗಳು ಮತ್ತು ಡೈರಿ ಸ್ಕ್ರ್ಯಾಪ್ ಹರಾಜು ದಾಖಲೆಗಳನ್ನು ನೋಡಿದರೆ, ಬೆಲೆ ಸ್ಥಳ, ಪ್ಲಾಸ್ಟಿಕ್ನ ಗುಣಮಟ್ಟ, ಸ್ವಚ್ಛತೆ ಮತ್ತು ಸಂಗ್ರಹಿಸಿರುವ ಪ್ರಮಾಣದ ಮೇಲೆ ಬದಲಾಗುತ್ತದೆ. ಕೆಲವು ಕಡೆ ಕಿಲೋಗೆ ಸುಮಾರು 13ರಿಂದ 20 ರೂಪಾಯಿ ದರಗಳು ಕಂಡುಬಂದಿವೆ. ಕೆಲವು ವಿಶೇಷ LDPE ಫಿಲ್ಮ್ ಸ್ಕ್ರ್ಯಾಪ್ಗಳಿಗೆ ಇದಕ್ಕಿಂತ ಹೆಚ್ಚಿನ ದರವೂ ದಾಖಲಾಗಿದೆ.

ಸೋಶಿಯಲ್‌ ಮೀಡಿಯಾದಲ್ಲಿ ಪ್ರತಿ ಕಿಲೋ ಹಾಲಿನ ಪ್ಯಾಕೆಟ್ಗೆ 70 ರೂಪಾಯಿ ಸಿಗುತ್ತೆ ಅಂತ ಹೇಳಲಾಗ್ತಿದೆ. ಆದ್ರೆ ಅದು ಸಂಪೂರ್ಣ ಸತ್ಯವಲ್ಲ. ಎಲ್ಲ ಕಡೆ ನಿಮಗೆ ಇಷ್ಟೊಂದು ಬೆಲೆ ಸಿಗೋದಿಲ್ಲ. ಆದ್ರೆ ಕಸಕ್ಕೆ ಎಸೆದು ಪರಿಸರ ನಾಶ ಮಾಡುವ ಬದಲು ನೀವು ಈ ಪ್ಲಾಸ್ಟಿಕ್‌ ಕವರನ್ನು ಮಾರಾಟ ಮಾಡಿ ಸಣ್ಣ ಪ್ರಮಾಣದಲ್ಲಿ ಹಣ ಸಂಪಾದನೆ ಮಾಡ್ಬಹುದು. ಹಾಗೆಯೇ ಪರಿಸರ ರಕ್ಷಣೆಗೆ ನಿಮ್ಮ ಪುಟ್ಟ ಸೇವೆ ಮಾಡ್ಬಹುದು.

ಏನು ಮಾಡ್ಬೇಕು?

ನೀವು ಹಾಲಿನ ಪ್ಯಾಕೆಟ್‌ ಮಾರಾಟ ಮಾಡುವ ಮನಸ್ಸು ಹೊಂದಿದ್ದರೆ ಹಾಲಿನ ಪ್ಯಾಕೆಟ್ಗಳನ್ನು ಕಸದ ಜೊತೆ ಬೆರೆಸದೆ, ಸಾಧ್ಯವಾದಷ್ಟು ಸ್ವಚ್ಛವಾಗಿ ಒಣಗಿಸಿ ಪ್ರತ್ಯೇಕವಾಗಿ ಸಂಗ್ರಹಿಸಿ. ಸಾಕಷ್ಟು ಪ್ರಮಾಣದಲ್ಲಿ ಕವರ್‌ ಸಂಗ್ರಹವಾದಾಗ ನೀವು ಪ್ಲಾಸ್ಟಿಕ್‌ ಕವರ್‌ ಖರೀದಿ ಮಾಡುವವರನ್ನು ಸಂಪರ್ಕಿಸಿ.