Ancient chinese tomb discovery: ಶಕ್ತಿ ಮತ್ತು ಸೌಂದರ್ಯದ ಸಂಕೇತಗಳಾದ ಡ್ರಾಗನ್ ಹಾಗೂ ಫೀನಿಕ್ಸ್ ಕಲ್ಪನೆ ಇಂದಿನದಲ್ಲ, ಬರೋಬ್ಬರಿ 4,300 ವರ್ಷಗಳ ಹಿಂದೆಯೇ ಇತ್ತು! ಚೀನಾದ ಪ್ರಾಚೀನ ಸಮಾಧಿಯೊಂದರಲ್ಲಿ ಪತ್ತೆಯಾದ ಈ ಅಚ್ಚರಿಯ ಸಂಶೋಧನೆ ಜಗತ್ತಿನ ಗಮನ ಸೆಳೆದಿದೆ.

ವಿಶ್ವದ ಪುರಾಣ ಕಥೆಗಳಲ್ಲಿ 'ಡ್ರಾಗನ್' ಮತ್ತು 'ಫೀನಿಕ್ಸ್' ಪಕ್ಷಿಗಳಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಡ್ರಾಗನ್ ಅಧಿಕಾರ, ಅಪ್ರತಿಮ ಶಕ್ತಿ ಹಾಗೂ ಅದೃಷ್ಟದ ಸಂಕೇತವಾದರೆ, ತನ್ನದೇ ಬೂದಿಯಿಂದ ಮತ್ತೆ ಮರುಹುಟ್ಟು ಪಡೆಯುವ ಪೌರಾಣಿಕ ಫೀನಿಕ್ಸ್ ಪಕ್ಷಿ ಸೌಂದರ್ಯ, ಕೃಪೆ ಮತ್ತು ಪುನರ್ಜನ್ಮದ ಪ್ರತೀಕ. ಈ ಎರಡೂ ಸಂಪೂರ್ಣ ವಿರುದ್ಧ ಗುಣದ ಜೀವಿಗಳು ಒಟ್ಟಿಗೆ ಸೇರಿದರೆ, ಅದು ಪ್ರಕೃತಿಯ ವಿರುದ್ಧ ಶಕ್ತಿಗಳ ನಡುವಿನ ಸಮತೋಲನವನ್ನು ಬಿಂಬಿಸುವ 'ಯಿನ್ ಮತ್ತು ಯಾಂಗ್' (Yin-and-Yang) ಸಾಮರಸ್ಯದ ಪರಮ ಸಂಕೇತವಾಗುತ್ತದೆ.

ಈ ಪವಿತ್ರ ಸಾಮರಸ್ಯದ ಕಲ್ಪನೆ ಇಂದಿನದಲ್ಲ, ಬರೋಬ್ಬರಿ 4,300 ವರ್ಷದ ಹಿಂದೆಯೇ ಚೀನಾದಲ್ಲಿ ಅಸ್ತಿತ್ವದಲ್ಲಿತ್ತು ಎಂಬುದಕ್ಕೆ ಚೀನಾದ ಪುರಾತತ್ವ ವಿಜ್ಞಾನಿಗಳು ಇದೀಗ ಬಲವಾದ ಸಾಕ್ಷಿಯೊಂದನ್ನು ಹೊರತೆಗೆದಿದ್ದಾರೆ!

ಸಮಾಧಿಯೊಳಗೆ ಪತ್ತೆಯಾಯ್ತು ಮಾನವ ಗಾತ್ರದ ಮೂರ್ತಿಗಳು!

'ಗ್ಲೋಬಲ್ ಟೈಮ್ಸ್' ವರದಿಯ ಪ್ರಕಾರ, ಉತ್ತರ ಚೀನಾದ ಇನ್ನರ್ ಮಂಗೋಲಿಯಾದಲ್ಲಿ ಪುರಾತತ್ವ ಇಲಾಖೆಯು ನಡೆಸಿದ ಉತ್ಖನನದ ವೇಳೆ ಸುಮಾರು 4,300 ವರ್ಷಗಳಷ್ಟು ಹಳೆಯದಾದ ಸಮಾಧಿಯೊಂದು ಪತ್ತೆಯಾಗಿದೆ. ಈ ಸಮಾಧಿಯೊಳಗೆ ಮೃತದೇಹದ ಅಕ್ಕಪಕ್ಕದಲ್ಲಿ ಮಾನವ ದೇಹದಷ್ಟೇ ದೊಡ್ಡದಾದ ಜೇಡಿಮಣ್ಣಿನ ಡ್ರಾಗನ್ ಮತ್ತು ಫೀನಿಕ್ಸ್ ಶಿಲ್ಪಗಳನ್ನು ಇರಿಸಲಾಗಿತ್ತು. ಮೃತದೇಹದ ಬಲಭಾಗದಲ್ಲಿ ಬೃಹತ್ ಡ್ರಾಗನ್ ಮೂರ್ತಿಯನ್ನು ಇರಿಸಲಾಗಿದ್ದು, ಅದರ ಮುಖವು ಮೃತ ವ್ಯಕ್ತಿಯ ತಲೆಬುರುಡೆಯ ಪಕ್ಕದಲ್ಲೇ ಇತ್ತು. ಇನ್ನು ದೇಹದ ಎಡಭಾಗದಲ್ಲಿದ್ದ ಫೀನಿಕ್ಸ್ ಪಕ್ಷಿಯು ರೆಕ್ಕೆ ಬಿಚ್ಚಿ ಆಕಾಶಕ್ಕೆ ಹಾರುತ್ತಿರುವ ಭಂಗಿಯಲ್ಲಿತ್ತು.

ಮೃತರ ಹಿನ್ನೆಲೆ

ಸಮಾಧಿಯಲ್ಲಿದ್ದ ಅಸ್ಥಿಪಂಜರದ ಹಲ್ಲುಗಳನ್ನು ವಿಶ್ಲೇಷಿಸಿದ ವಿಜ್ಞಾನಿಗಳಿಗೆ ಅಚ್ಚರಿಯ ವಿಚಾರವೊಂದು ತಿಳಿದುಬಂದಿದೆ. ಆ ಕಾಲದ ಸಾಮಾನ್ಯ ಜನರಿಗಿಂತ ಈ ವ್ಯಕ್ತಿ ಅತ್ಯಧಿಕ ಪ್ರಮಾಣದ ಮಾಂಸಾಹಾರವನ್ನು ಸೇವಿಸುತ್ತಿದ್ದ. ಇದರಿಂದ ಈತ ಆ ಕಾಲದ ಪ್ರಭಾವಿ ಮತ್ತು ಅತ್ಯಂತ ಶ್ರೀಮಂತ ನಾಯಕನಾಗಿರಬಹುದು ಎಂದು ಅಂದಾಜಿಸಲಾಗಿದೆ.

ಲೋಂಗ್‌ಶಾನ್ ಯುಗಕ್ಕೆ ಕರೆದೊಯ್ದ ಅಪರೂಪದ ಶೋಧ

"ಡ್ರಾಗನ್ ಮತ್ತು ಫೀನಿಕ್ಸ್‌ನ ಜೋಡಿ ಕಲ್ಪನೆಯನ್ನು ಈ ಸಂಶೋಧನೆಯು ಪ್ರಾಚೀನ ಲೋಂಗ್‌ಶಾನ್ (Longshan) ಯುಗಕ್ಕೆ ಕರೆದೊಯ್ಯುತ್ತದೆ" ಎಂದು ಇನ್ನರ್ ಮಂಗೋಲಿಯಾ ಸಾಂಸ್ಕೃತಿಕ ಅವಶೇಷಗಳು ಮತ್ತು ಪುರಾತತ್ವ ಸಂಸ್ಥೆಯ ಮುಖ್ಯಸ್ಥ ಸುನ್ ಜಿನ್ಸೊಂಗ್ ತಿಳಿಸಿದ್ದಾರೆ.

ನವಶಿಲಾಯುಗದ (Neolithic Period) ಅಂತ್ಯದಲ್ಲೇ, ಅಂದರೆ ಇಂದಿನ ಚೀನಾ ಒಂದು ಏಕೀಕೃತ ಸಾಮ್ರಾಜ್ಯವಾಗಿ ಹೊರಹೊಮ್ಮುವ ಮುನ್ನವೇ, ಅಲ್ಲಿನ ಪ್ರಾಚೀನ ಸಮಾಜದಲ್ಲಿ ಈ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಸಾಮರಸ್ಯದ ಪರಿಕಲ್ಪನೆ ಬೇರೂರಿತ್ತು ಎಂಬುದಕ್ಕೆ ಇದು ಐತಿಹಾಸಿಕ ಸಾಕ್ಷಿಯಾಗಿದೆ.

ಇತಿಹಾಸದ ಪುಟಗಳಲ್ಲಿ ಡ್ರಾಗನ್ ಮತ್ತು ಫೀನಿಕ್ಸ್

ಡ್ರಾಗನ್ ಮತ್ತು ಫೀನಿಕ್ಸ್ ಒಟ್ಟಿಗೆ ಜೋಡಿಯಾಗಿ ಸಿಕ್ಕಿರುವ ಅತ್ಯಂತ ಪುರಾತನ ಪುರಾವೆ ಇದಾಗಿದ್ದರೂ, ಇವುಗಳ ಪ್ರತ್ಯೇಕ ಇತಿಹಾಸ ಇನ್ನಷ್ಟು ಪ್ರಾಚೀನವಾಗಿದೆ.

ಡ್ರಾಗನ್: ಇದಕ್ಕೂ ಮೊದಲು ಇನ್ನರ್ ಮಂಗೋಲಿಯಾದಲ್ಲಿ 5,000 ವರ್ಷಗಳಷ್ಟು ಹಳೆಯದಾದ ಹಸಿರು 'ಜೇಡ್' (Jade) ಕಲ್ಲಿನ ಡ್ರಾಗನ್ ಪತ್ತೆಯಾಗಿತ್ತು.

ಫೆಂಗ್‌ಹುವಾಂಗ್ (ಫೀನಿಕ್ಸ್): ಚೀನೀ ಪುರಾಣಗಳಲ್ಲಿ ಫೀನಿಕ್ಸ್ ಅನ್ನು 'ಫೆಂಗ್‌ಹುವಾಂಗ್' ಎನ್ನಲಾಗುತ್ತದೆ. ಕ್ರಿ.ಪೂ.6,000 ರಿಂದ 7,000 ರ ನಡುವೆಯೇ ಇದರ ಕುರುಹುಗಳು ಸಿಕ್ಕಿವೆ. ಆರಂಭದಲ್ಲಿ ಗಂಡು ರೂಪವನ್ನು ‘ಫೆಂಗ್’ ಎಂದೂ, ಹೆಣ್ಣು ರೂಪವನ್ನು ‘ಹುವಾಂಗ್’ ಎಂದೂ ಕರೆಯಲಾಗುತ್ತಿತ್ತು. ಕಾಲಕ್ರಮೇಣ ಇವೆರಡೂ ಸೇರಿ ಒಂದೇ ಪೌರಾಣಿಕ ಜೀವಿಯಾಯಿತು.

ಆಧುನಿಕ ಇತಿಹಾಸ: ಈ ಜೋಡಿಯು ಎಷ್ಟೊಂದು ಶಕ್ತಿಶಾಲಿಯೆಂದರೆ, 1913 ರಿಂದ 1928ರವರೆಗೆ ರಿಪಬ್ಲಿಕ್ ಆಫ್ ಚೀನಾದ ಅಧಿಕೃತ ರಾಷ್ಟ್ರೀಯ ಲಾಂಛನವಾಗಿ ಹಾಗೂ ನಾಣ್ಯಗಳ ಮೇಲೂ ಇದು ರಾರಾಜಿಸಿತ್ತು.

ಸಾವಿನಲ್ಲೂ ಸಾಮರಸ್ಯದ ಗೌರವ

ಪ್ರಾಚೀನ ಚೀನಾದಲ್ಲಿ ಮಡಕೆ ಕಲೆಗೆ ಪ್ರಸಿದ್ಧವಾಗಿದ್ದ ‘ಲೋಂಗ್‌ಶಾನ್ ಸಂಸ್ಕೃತಿ’ಯಲ್ಲಿ (ಕ್ರಿ.ಪೂ. 3000 - 1900) ಶವಸಂಸ್ಕಾರಕ್ಕೆ ಅಪಾರ ಮಹತ್ವವಿತ್ತು. ಜೀವನವೆಂಬುದು ಪರಸ್ಪರ ವಿರುದ್ಧ ಶಕ್ತಿಗಳ (ಕತ್ತಲು-ಬೆಳಕು, ಶಕ್ತಿ-ಸೌಂದರ್ಯ) ಸಮತೋಲನ. ಸಾವಿನ ನಂತರವೂ ಆತ್ಮಕ್ಕೆ ಅಂತಹದ್ದೇ ಶಾಂತಿಯುತ ಸಾಮರಸ್ಯ ಸಿಗಲಿ ಎಂಬ ನಂಬಿಕೆಯಿಂದಲೇ ಈ ಡ್ರಾಗನ್ ಮತ್ತು ಫೀನಿಕ್ಸ್ ಮೂರ್ತಿಗಳನ್ನು ಸಮಾಧಿಯಲ್ಲಿ ಇರಿಸಲಾಗಿತ್ತು ಎಂದು ಇತಿಹಾಸಕಾರರು ವಿಶ್ಲೇಷಿಸಿದ್ದಾರೆ.