ಭಾರತದ ಇತಿಹಾಸದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾದ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ವಾರೆನ್ ಹೇಸ್ಟಿಂಗ್ಸ್ ಸಹಿ ಮಾಡಿರುವ 1794ರ ಅಪರೂಪದ ಚೆಕ್‌ವೊಂದು ಬೆಂಗಳೂರಿನಲ್ಲಿ ಇದೀಗ ಭಾರೀ ಕುತೂಹಲ ಮೂಡಿಸಿದೆ.
ಭಾರತದ ಇತಿಹಾಸದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾದ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ವಾರೆನ್ ಹೇಸ್ಟಿಂಗ್ಸ್ ಸಹಿ ಮಾಡಿರುವ 1794ರ ಅಪರೂಪದ ಚೆಕ್‌ವೊಂದು ಬೆಂಗಳೂರಿನಲ್ಲಿ ಇದೀಗ ಭಾರೀ ಕುತೂಹಲ ಮೂಡಿಸಿದೆ. ವಿಶೇಷವೆಂದರೆ, ಈ ಚೆಕ್ ಹಲವು ವರ್ಷಗಳಿಂದ ಬೆಂಗಳೂರು ಮೂಲದ ಪುರಾತನ ಕಲಾ ಮುದ್ರಣಗಳು, ನಕ್ಷೆಗಳು, ಪುಸ್ತಕಗಳು ಹಾಗೂ ಐತಿಹಾಸಿಕ ಕಲಾಕೃತಿಗಳ ಸಂಗ್ರಾಹಕ ಸುನಿಲ್ ಬಾಬೂ ಅವರ ಸಂಗ್ರಹದಲ್ಲಿತ್ತು. ಆದರೆ ಅದರ ಸತ್ಯಾಸತ್ಯತೆಯನ್ನು ಅವರು ಕೇವಲ ಎರಡು ವಾರಗಳ ಹಿಂದಷ್ಟೇ ದೃಢಪಡಿಸಿದ್ದಾರೆ.
1794ರ ಮೇ 17ರಂದು ಸಹಿ ಮಾಡಿದ್ದ ಚೆಕ್
ವಾರೆನ್ ಹೇಸ್ಟಿಂಗ್ಸ್ ಸಹಿ ಹೊಂದಿರುವ ಈ ಚೆಕ್‌ಗೆ ಮೇ 17, 1794ರ ದಿನಾಂಕವಿದೆ. ಗೊಸ್ಲಿಂಗ್ಸ್ ಬ್ಯಾಂಕ್‌ನಿಂದ ನೀಡಲಾಗಿರುವ ಈ ಚೆಕ್‌ನಲ್ಲಿ £30 ಮೊತ್ತವನ್ನು ಪಾವತಿಸುವಂತೆ ನಮೂದಿಸಲಾಗಿದೆ. ಇದರ ಫಲಾನುಭವಿ ಜೋಸುವಾ ಪ್ಯಾಟ್ರಿಕ್ ಎಂಬ ವ್ಯಕ್ತಿಯಾಗಿದ್ದು, ಅವರಿಗೆ ಹೇಸ್ಟಿಂಗ್ಸ್ ನಿಯಮಿತವಾಗಿ ಪಾವತಿಗಳನ್ನು ಮಾಡುತ್ತಿದ್ದರು ಎನ್ನುವುದಕ್ಕೆ ಈಗ ಐತಿಹಾಸಿಕ ದಾಖಲೆಗಳು ಪತ್ತೆಯಾಗಿವೆ. ಜೋಸುವಾ ಪ್ಯಾಟ್ರಿಕ್ ಯಾರು? ಅವರಿಗೆ ಹೇಸ್ಟಿಂಗ್ಸ್ ಯಾವ ಕಾರಣಕ್ಕಾಗಿ ಹಣ ಪಾವತಿಸುತ್ತಿದ್ದರು? ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಿಲ್ಲ. ಆದರೆ ಈ ಚೆಕ್ ಒಂದೇ ಬಾರಿ ನಡೆದ ವಹಿವಾಟಿನ ಭಾಗವಾಗಿರಲಿಲ್ಲ ಎಂಬುದು ಇದೀಗ ಪತ್ತೆಯಾದ ದಾಖಲೆಗಳಿಂದ ತಿಳಿದುಬಂದಿದೆ.
ವರ್ಷಗಳ ಕಾಲ ಸುನಿಲ್ ಅವರ ಸಂಗ್ರಹದಲ್ಲಿದ್ದ ಚೆಕ್
ಸುನಿಲ್ ಬಾಬೂ ಅವರು ಹಲವು ವರ್ಷಗಳ ಹಿಂದೆ ಆಟೋಗ್ರಾಫ್‌ಗಳ ಸಂಗ್ರಹದಲ್ಲಿ ಪರಿಣತಿ ಹೊಂದಿದ್ದ ಪ್ರಸಿದ್ಧ ವ್ಯಾಪಾರಿಯೊಬ್ಬರಿಂದ ಈ ಚೆಕ್ ಅನ್ನು ಖರೀದಿಸಿದ್ದರು. ಬಳಿಕ ತಮ್ಮ ಇತರ ಸಂಗ್ರಹಗಳೊಂದಿಗೆ ಅದನ್ನು ಸುರಕ್ಷಿತವಾಗಿ ಇಟ್ಟಿದ್ದರು. ಆದರೆ ಚೆಕ್‌ನ ನೈಜತೆಯನ್ನು ಖಚಿತಪಡಿಸಿಕೊಳ್ಳಲು ಅವರಿಗೆ ಹಲವು ವರ್ಷಗಳೇ ಬೇಕಾಯಿತು. ಕೊನೆಗೆ ಎರಡು ವಾರಗಳ ಹಿಂದೆ ಅದರ ಮೂಲವನ್ನು ಪತ್ತೆಹಚ್ಚುವ ಪ್ರಯತ್ನಕ್ಕೆ ಮುಂದಾದರು. ಐತಿಹಾಸಿಕ ದಾಖಲೆಗಳನ್ನು ಸಂರಕ್ಷಿಸಲು ಬಳಸುವ ಆರ್ಕೈವಲ್-ಗ್ರೇಡ್ ಮೈಲಾರ್ ಹಾಳೆಗಳಲ್ಲಿ ಚೆಕ್ ಅನ್ನು ಸಂರಕ್ಷಿಸಲಾಗಿತ್ತು. ಇದರಿಂದ ತೇವಾಂಶ ಸೇರಿದಂತೆ ಇತರ ಹಾನಿಕಾರಕ ಅಂಶಗಳಿಂದ ಕಾಗದವನ್ನು ರಕ್ಷಿಸಲಾಗಿತ್ತು.
230 ವರ್ಷಗಳ ಬಳಿಕ ಮೂಲ ಬ್ಯಾಂಕ್ ದಾಖಲೆಗಳಲ್ಲಿ ಸಿಕ್ಕ ಸುಳಿವು
ಚೆಕ್ ನಿಜವಾಗಿಯೂ ವಾರೆನ್ ಹೇಸ್ಟಿಂಗ್ಸ್ ಅವರದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸುನಿಲ್ ಅವರು ಮೂಲ ಬ್ಯಾಂಕ್ ದಾಖಲೆಗಳನ್ನು ಹುಡುಕಲು ಮುಂದಾದರು. 1794ರಲ್ಲಿ ಚೆಕ್ ನೀಡಿದ್ದ ಗೊಸ್ಲಿಂಗ್ಸ್ ಬ್ಯಾಂಕ್ ನಂತರ 1896ರಲ್ಲಿ ಇತರ ಕೆಲವು ಬ್ಯಾಂಕ್‌ಗಳೊಂದಿಗೆ ವಿಲೀನಗೊಂಡು ಬಾರ್ಕ್ಲೇಸ್ ಆ್ಯಂಡ್ ಕಂಪನಿ ಲಿಮಿಟೆಡ್ ಎಂಬ ಸಂಸ್ಥೆಯ ಭಾಗವಾಯಿತು. ಹೀಗಾಗಿ ಸುನಿಲ್ ಅವರು ಬಾರ್ಕ್ಲೇಸ್‌ನ ಆರ್ಕೈವ್ಸ್ ವಿಭಾಗವನ್ನು ಸಂಪರ್ಕಿಸಿದರು. ಆರ್ಕೈವ್ಸ್ ತಂಡವು ಹೇಸ್ಟಿಂಗ್ಸ್‌ಗೆ ಸಂಬಂಧಿಸಿದ ಮೂಲ ಗೊಸ್ಲಿಂಗ್ಸ್ ಮತ್ತು ಶಾರ್ಪ್ ಲೆಡ್ಜರ್ ಅನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಯಿತು. ಅಲ್ಲಿದ್ದ ದಾಖಲೆಯಲ್ಲಿನ ಸಂಬಂಧಿತ ಪುಟವನ್ನು ಪರಿಶೀಲಿಸಿದಾಗ, ವಾರೆನ್ ಹೇಸ್ಟಿಂಗ್ಸ್ ಅವರು ಜೋಸುವಾ ಪ್ಯಾಟ್ರಿಕ್ ಅವರಿಗೆ ಹಲವು ಬಾರಿ ಪಾವತಿಗಳನ್ನು ಮಾಡಿರುವುದು ಕಂಡುಬಂದಿದೆ. ಇದರಿಂದ ಇಬ್ಬರ ನಡುವೆ ದೀರ್ಘಕಾಲದ ಆರ್ಥಿಕ ವ್ಯವಹಾರ ಅಥವಾ ಸಂಬಂಧವಿದ್ದಿರಬಹುದು ಎಂಬ ನಿರ್ಧಾರಕ್ಕೆ ಬರಬಹುದು ಎಂದು ಸುನಿಲ್ ಹೇಳಿದ್ದಾರೆ.
ದಾಖಲೆಗಳ ಮೂಲವೇ ಐತಿಹಾಸಿಕ ವಸ್ತುವಿನ ಮೌಲ್ಯ ಹೆಚ್ಚಿಸುತ್ತದೆ
ಒಂದು ಐತಿಹಾಸಿಕ ವಸ್ತುವಿನ ದಾಖಲಿತ ಮೂಲ ಅಥವಾ Provenance ಅದರ ಸತ್ಯಾಸತ್ಯತೆಯನ್ನು ದೃಢಪಡಿಸುವುದಷ್ಟೇ ಅಲ್ಲದೆ, ಅದರ ಐತಿಹಾಸಿಕ ಹಿನ್ನೆಲೆ ಮತ್ತು ಸಂಗ್ರಹಣಾ ಮೌಲ್ಯವನ್ನೂ ಹೆಚ್ಚಿಸುತ್ತದೆ ಎಂದು ಸುನಿಲ್ ಅಭಿಪ್ರಾಯಪಟ್ಟಿದ್ದಾರೆ. ಅವರ ಸಂಗ್ರಹದಲ್ಲಿರುವ ಐತಿಹಾಸಿಕ ನಕ್ಷೆಗಳನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಅವುಗಳ ಮೂಲವನ್ನು ಗುರುತಿಸಲು ವಾಟರ್‌ಮಾರ್ಕ್‌ಗಳು ಪ್ರಮುಖ ಸುಳಿವಾಗುತ್ತವೆ. 1790ರಿಂದ 1850ರ ಅವಧಿಯಲ್ಲಿ ಮುದ್ರಿಸಲಾದ ಅನೇಕ ನಕ್ಷೆಗಳಲ್ಲಿ ಜೆ. ವಾಟ್‌ಮ್ಯಾನ್ (J. Whatman) ಕಾಗದದ ವಾಟರ್‌ಮಾರ್ಕ್ ಇರುತ್ತಿತ್ತು. ಹೀಗಾಗಿ ಆ ವಾಟರ್‌ಮಾರ್ಕ್ ಕಂಡುಬಂದರೆ, ನಕ್ಷೆ ಯಾವ ಕಾಲಘಟ್ಟಕ್ಕೆ ಸೇರಿದೆ ಎಂಬುದನ್ನು ಅಂದಾಜಿಸಲು ಸಾಧ್ಯವಾಗುತ್ತದೆ.
ಸುನಿಲ್ ಅವರ ಅಪರೂಪದ ಸಂಗ್ರಹದಲ್ಲಿ ಟಿಪ್ಪು ಸುಲ್ತಾನ್, ಮೌಂಟ್‌ಬ್ಯಾಟನ್‌ಗೆ ಸಂಬಂಧಿಸಿದ ವಸ್ತುಗಳು
ಐತಿಹಾಸಿಕ ವಸ್ತುಗಳ ಸಂಗ್ರಹದಲ್ಲಿ ಆಸಕ್ತಿ ಹೊಂದಿರುವ ಸುನಿಲ್ ಬಾಬೂ ಅವರ ಬಳಿ ಹಲವು ಅಪರೂಪದ ಕಲಾಕೃತಿಗಳು ಮತ್ತು ದಾಖಲೆಗಳಿವೆ. ಲಾರ್ಡ್ ಮೌಂಟ್‌ಬ್ಯಾಟನ್ ಅವರಿಗೆ ಸಂಬಂಧಿಸಿದ ಕಲಾಕೃತಿಗಳು, ದಾಖಲೆಗಳು ಹಾಗೂ ಆರ್ಕೈವ್‌ಗಳ ಜೊತೆಗೆ ಟಿಪ್ಪು ಸುಲ್ತಾನ್ ಸೇರಿದಂತೆ ಐತಿಹಾಸಿಕ ರಾಜಮನೆತನದ ವ್ಯಕ್ತಿಗಳಿಗೆ ಸಂಬಂಧಿಸಿದ ವಸ್ತುಗಳೂ ಅವರ ಸಂಗ್ರಹದಲ್ಲಿವೆ. ಬೆಂಗಳೂರು ಮತ್ತು ಯುನೈಟೆಡ್ ಕಿಂಗ್‌ಡಮ್ ನಡುವೆ ತಮ್ಮ ಸಮಯವನ್ನು ಹಂಚಿಕೊಳ್ಳುವ ಸುನಿಲ್, ವಸ್ತುಸಂಗ್ರಹಾಲಯಗಳು ಮತ್ತು ಗ್ಯಾಲರಿಗಳಿಗಾಗಿ ಐತಿಹಾಸಿಕ ಕಲಾಕೃತಿಗಳನ್ನು ಸಂಗ್ರಹಿಸಿ ಸಂರಕ್ಷಿಸುವ ಕೆಲಸದಲ್ಲೂ ತೊಡಗಿಸಿಕೊಂಡಿದ್ದಾರೆ.
