ರಷ್ಯಾ ಸಂಸತ್ ಚುನಾವಣೆಯ ಕಡೆಯ ದಿನದಂದೇ ಉಕ್ರೇನ್ ಪಡೆಗಳು 1,600ಕ್ಕೂ ಹೆಚ್ಚು ಡ್ರೋನ್‌ಗಳನ್ನು ಬಳಸಿ ರಷ್ಯಾದ ಮೇಲೆ ಭೀಕರ ದಾಳಿ ನಡೆಸಿವೆ. ಈ ದಾಳಿಯಿಂದಾಗಿ ಇಬ್ಬರು ಸಾವನ್ನಪ್ಪಿದ್ದು, ತೈಲ ಸಂಸ್ಕರಣಾ ಘಟಕಗಳು ಮತ್ತು ವಸತಿ ಸಮುಚ್ಛಯಗಳು ಬೆಂಕಿಗೆ ಆಹುತಿಯಾಗಿವೆ. ರಷ್ಯಾದ ವಾಯು ರಕ್ಷಣಾ ಪಡೆಗಳು ಹಲವು ಡ್ರೋನ್‌ಗಳನ್ನು ಹೊಡೆದುರುಳಿಸಿವೆ.
ಮಾಸ್ಕೋ: ಕಳೆದ ನಾಲ್ಕು ವರ್ಷಗಳಿಂದ ಮುಂದುವರಿದಿರುವ ರಷ್ಯಾ-ಉಕ್ರೇನ್ ನಡುವಿನ ಕದನ ಭಾನುವಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ರಷ್ಯಾ ಸಂಸತ್ ಚುನಾವಣೆಯ ಕಡೆಯ ದಿನದಂದೇ ಉಕ್ರೇನ್ ಪಡೆಗಳು ರಷ್ಯಾದ ವಿವಿಧ ನಗರಗಳ ಮೇಲೆ ಮುಗಿಬಿದ್ದು ಭೀಕರ ದಾಳಿ ನಡೆಸಿವೆ. ಒಂದೇ ದಿನ ಬರೋಬ್ಬರಿ 1,600ಕ್ಕೂ ಹೆಚ್ಚು ಡ್ರೋನ್‌ಗಳನ್ನು ಬಳಸಿ ಈ ದಾಳಿ ನಡೆಸಲಾಗಿದ್ದು, ಇದು ರಷ್ಯಾದ ಮೇಲೆ ನಡೆದ ಅತಿ ದೊಡ್ಡ ಹಾಗೂ ಭೀಕರ ದಾಳಿ ಎಂದು ಬಣ್ಣಿಸಲಾಗಿದೆ.
ಈ ದಿಢೀರ್ ದಾಳಿಯಿಂದಾಗಿ ಇಬ್ಬರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದಾಳಿಯ ತೀವ್ರತೆಗೆ ರಷ್ಯಾದ ಪ್ರಮುಖ ತೈಲ ಸಂಸ್ಕರಣಾ ಘಟಕಗಳು ಹಾಗೂ ವಸತಿ ಸಮುಚ್ಛಯಗಳು ಬೆಂಕಿಗೆ ಆಹುತಿಯಾಗಿವೆ. ಮೂಲಸೌಕರ್ಯ ಘಟಕಗಳು ಧಗಧಗ ಉರಿಯುತ್ತಿರುವ ದೃಶ್ಯಗಳು ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ರಷ್ಯಾ ಪ್ರತಿಕ್ರಿಯೆ:
ರಾಜಧಾನಿ ಮಾಸ್ಕೋದ ಮೇಯರ್ ಸೆರ್ಗೆಯ್ ಸೊಬ್ಯಾನಿನ್ ಮಾತನಾಡಿ, 'ನಮ್ಮ ವಾಯು ರಕ್ಷಣಾ ಪಡೆಗಳು ಉಕ್ರೇನ್‌ನ ದುಸ್ಸಾಹಸವನ್ನು ಮೆಟ್ಟಿನಿಲ್ಲುವಲ್ಲಿ ಯಶಸ್ವಿಯಾಗಿವೆ. ಒಟ್ಟು 1,600ಕ್ಕೂ ಹೆಚ್ಚು ಡ್ರೋನ್‌ಗಳನ್ನು ಮಾರ್ಗಮಧ್ಯೆ ತಡೆದು ಹೊಡೆದುರುಳಿಸಲಾಗಿದೆ. ಅದರಲ್ಲಿ ಕೇವಲ ಮಾಸ್ಕೋ ನಗರವೊಂದನ್ನೇ ಗುರಿಯಾಗಿಸಿಕೊಂಡು 450ಕ್ಕೂ ಹೆಚ್ಚು ಡ್ರೋನ್‌ಗಳನ್ನು ಹಾರಿಸಲಾಗಿತ್ತು' ಎಂದು ತಿಳಿಸಿದ್ದಾರೆ. ರಷ್ಯಾ ಸೇನೆಯು ಹೆಚ್ಚಿನ ತಡೆಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿದೆ ಎಂದು ಸ್ಪಷ್ಟಪಡಿಸಿದೆ.
ಸಂಸತ್ ಚುನಾವಣೆಯ ಮತದಾನದ ಅಂತಿಮ ದಿನವೇ ರಷ್ಯಾ ಮೇಲೆ ಈ ಮಟ್ಟದ ಆಕ್ರಮಣ ನಡೆದಿರುವುದು ಜಾಗತಿಕ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಆದರೆ, ಈ ಭೀಕರ ಡ್ರೋನ್ ದಾಳಿಯ ಕುರಿತು ಉಕ್ರೇನ್ ಕಡೆಯಿಂದ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಹೊರಬಂದಿಲ್ಲ.


