ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರನ ವಿವಾಹದ ಸಂಭ್ರಮಾಚರಣೆಗೆ ರಷ್ಯಾ ಅಧ್ಯಕ್ಷ ಪುಟಿನ್ ಆಪ್ತ ಉದ್ಯಮಿ ಉಮರ್ ಕ್ರೆಮ್ಲೆವ್ ಧನಸಹಾಯ ಮಾಡಿದ್ದಾರೆ. ಈ ವಿಚಾರವನ್ನು ಟ್ರಂಪ್ ಜೂನಿಯರ್ ಪತ್ನಿ ಬೆಟ್ಟಿನಾ ಇನ್‌ಸ್ಟಾಗ್ರಾಮ್‌ನಲ್ಲಿ ಬಹಿರಂಗಪಡಿಸಿದ್ದಾರೆ.

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ ವಿವಾಹದ ಸಂಭ್ರಮಾಚರಣೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಆಪ್ತ ಉದ್ಯಮಿಯೊಬ್ಬರು ಧನಸಹಾಯ ನೀಡಿರುವ ವಿಷಯ ಈಗ ಬೆಳಕಿಗೆ ಬಂದಿದೆ. ಈ ವಿಚಾರವನ್ನು ಟ್ರಂಪ್ ಜೂನಿಯರ್ ಅವರ ಪತ್ನಿ ಬೆಟ್ಟಿನಾ ಬಹಿರಂಗಪಡಿಸಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಮ್ ಪೋಸ್ಟ್‌ ಹಂಚಿಕೊಂಡಿರುವ ದಂಪತಿ, ‘ ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯ ಮುಖ್ಯಸ್ಥ ಹಾಗೂ ರಷ್ಯಾದ ಪ್ರಭಾವಿ ಉದ್ಯಮಿ ಉಮರ್ ಕ್ರೆಮ್ಲೆವ್ ತಮ್ಮ ಆಪ್ತ ಸ್ನೇಹಿತ. ನಮ್ಮ ವಿವಾಹದ ನಂತರ ಎರಡು ದಿನಗಳ ಕಾಲ ನಡೆದ ಅದ್ಧೂರಿ ಸಂಭ್ರಮಾಚರಣೆಯನ್ನು ಕ್ರೆಮ್ಲೆವ್ ಅತ್ಯಂತ ಉದಾರವಾಗಿ ಆಯೋಜಿಸಿದ್ದರು. ಅದಕ್ಕಾಗಿ ನಾವು ಸದಾ ಕೃತಜ್ಞರಾಗಿರುತ್ತೇವೆ’ ಎಂದು ಪೋಸ್ಟ್ ಹಾಕಿದ್ದಾರೆ.

ಬಹಾಮಾಸ್‌ನಲ್ಲಿ ನಡೆದ ಡೊನಾಲ್ಡ್ ಟ್ರಂಪ್ ಜೂನಿಯರ್ ಹಾಗೂ ಬೆಟ್ಟಿನಾ ವಿವಾಹ ಸಂಭ್ರಮಾಚರಣೆಗೆ ಕ್ರೆಮ್ಲೆವ್ ಲಕ್ಷಾಂತರ ಡಾಲರ್ ವೆಚ್ಚ ಭರಿಸಿದ್ದರು ಎಂದು ತನಿಖಾ ವೆಬ್‌ಸೈಟ್ ‘ಪ್ರೊಪಬ್ಲಿಕಾ’ನ ಸೋಮವಾರ ವರದಿ ಮಾಡಿತ್ತು. ಭಾರತ ಸೇರಿದಂತೆ ಹಲವು ದೇಶಗಳು ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವುದೇ ಉಕ್ರೇನ್‌ ಯುದ್ಧ ಮುಂದುವರೆಯಲು ಕಾರಣ ಎಂದು ಪದೇ ಪದೇ ಆರೋಪಿಸುತ್ತಲೇ ಇದ್ದ ಟ್ರಂಪ್‌, ಇದಕ್ಕಾಗಿಯೇ ಭಾರತದ ಮೇಲೆ ತೆರಿಗೆ ಹೇರಿದ್ದರು.

ಡೊನಾಲ್ಡ್ ಟ್ರಂಪ್ ಜೂನಿಯರ್ ಮತ್ತು ಬೆಟ್ಟಿನಾ ಆಂಡರ್ಸನ್ ಅವರು ಮೇ 21, 2026 ರಂದು ಗುರುವಾರ ಫ್ಲೋರಿಡಾದಲ್ಲಿ ಕಾನೂನುಬದ್ಧವಾಗಿ ವಿವಾಹವಾದರು. ನಂತರ ಮೇ 22 ಮತ್ತು 23 ಬಹಾಮಾಸ್‌ನಲ್ಲಿ ವಿವಾಹ ಸಂಭ್ರಮಾಚರಣೆ ಆಯೋಜಿಸಲಾಗಿತ್ತು. ಆಪ್ತ ಕುಟುಂಬ ಮತ್ತು ಸ್ನೇಹಿತರೊಂದಿಗೆ ಖಾಸಗಿ ದ್ವೀಪದಲ್ಲಿ ನಡೆದಿತ್ತು.

ಎಐ ಅಪಾಯ ಕಟ್ಟುಕಥೆ, ಟೆಕ್‌ ವಿರುದ್ಧ ಕುತಂತ್ರ: ಟ್ರಂಪ್ ಕಿಡಿ

ವಾಷಿಂಗ್ಟನ್: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದಿಂದ ಎದುರಾಗಬಹುದಾದ ಅಪಾಯಗಳ ಕುರಿತ ಕಳವಳಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಳ್ಳಿಹಾಕಿದ್ದಾರೆ. ಎಐ ಮತ್ತು ಡೇಟಾ ಸೆಂಟರ್‌ಗಳ ಬೆಳವಣಿಗೆಯನ್ನು ನಿಯಂತ್ರಿಸುವ ಯಾವುದೇ ಪ್ರಯತ್ನವು ಒಂದು ‘ವಿಕೃತ ಪಿತೂರಿ’ ಎಂದು ಅವರು ಕಿಡಿಕಾರಿದ್ದಾರೆ.

ಈ ಕುರಿತು ಟ್ರುತ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್‌, ‘ಎಐ ಇಡೀ ಜಗತ್ತನ್ನೇ ಆವರಿಸಿಕೊಳ್ಳುತ್ತದೆ, ಮಾನವಕುಲವನ್ನೇ ನಾಶಪಡಿಸುತ್ತದೆ ಎಂಬುದೆಲ್ಲ ಶುದ್ಧ ಸುಳ್ಳು ಮತ್ತು ಕಟ್ಟುಕಥೆ. ಎಐ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ನಿಯಮ ರೂಪಿಸಲು ಒತ್ತಾಯಿಸುತ್ತಿರುವವರು ಈ ಹಿಂದೆ ಹವಾಮಾನ ಬದಲಾವಣೆ ಬಗ್ಗೆಯೂ ಇದೇ ರೀತಿ ಸುಳ್ಳು ಎಚ್ಚರಿಕೆ ನೀಡಿದ್ದರು ಎಂದು ಆರೋಪಿಸಿದ್ದಾರೆ.

ಜೊತೆಗೆ, ‘ಎಐಗೆ ಯಾವುದೇ ಕಠಿಣ ನಿಯಮ ಅಥವಾ ನಿಯಂತ್ರಣಗಳ ಅಗತ್ಯವಿಲ್ಲ. ಅದಕ್ಕೆ ಬೇಕಿರುವುದು ಒಬ್ಬ ಬಲಿಷ್ಠ ಮತ್ತು ಚಾಣಾಕ್ಷ ಅಧ್ಯಕ್ಷ ಮಾತ್ರ. ಆ ಸಾಮರ್ಥ್ಯ ಅಮೆರಿಕಕ್ಕೆ ಈಗಾಗಲೇ ಸಂಪೂರ್ಣವಾಗಿದೆ, ಎಂದು ಟ್ರಂಪ್ ಹೇಳಿದ್ದಾರೆ. ಜತೆಗೆ, ತನ್ನ ಉದ್ಯಮಕ್ಕೆ ತಾನೇ ನಿಯಂತ್ರಣಗಳನ್ನು ಹೇರಿಕೊಂಡು ದಿವಾಳಿಯಾಗಲು ಬಯಸುವ ಉದ್ಯಮ ಮುಖ್ಯಸ್ಥರನ್ನು ಇತಿಹಾಸದಲ್ಲೇ ನೋಡಿಲ್ಲ ಎಂದು ಟೆಕ್ ಸಿಇಒಗಳ ವ್ಯಾಪಾರ ಜ್ಞಾನವನ್ನೂ ಅವರು ಲೇವಡಿ ಮಾಡಿದ್ದಾರೆ.

ಚೀನಾಗೆ ಲಾಭ:

ಎಐ ಮೇಲೆ ನಿಯಂತ್ರಣ ಹೇರಿದರೆ ಅದು ಚೀನಾಗೆ ಮುನ್ನಡೆ ಸಾಧಿಸಲು ನೆರವಾಗುತ್ತದೆ ಎಂಬುದು ಟ್ರಂಪ್ ಅವರ ಪ್ರಮುಖ ವಾದ. "ಎಐ ಮತ್ತು ಡೇಟಾ ಸೆಂಟರ್‌ಗಳ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಇದರಿಂದ ಚೀನಾಗೆ ಮಾತ್ರ ಸಂತೋಷವಾಗಲಿದೆ," ಎಂದು ಅವರು ಹೇಳಿದ್ದಾರೆ.

ಆಂಥ್ರೊಪಿಕ್ ಸಿಇಒ ಡಾರಿಯೊ ಅಮೋಡೆ, ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್‌ಮನ್ ಮತ್ತು ಸ್ಪೇಸ್‌ಎಕ್ಸ್‌ನ ಎಲಾನ್ ಮಸ್ಕ್ ಸೇರಿದಂತೆ ಪ್ರಮುಖ ಟೆಕ್ ದಿಗ್ಗಜರು ಎಐ ಮೇಲೆ ಸರ್ಕಾರದ ಹೆಚ್ಚಿನ ಮೇಲ್ವಿಚಾರಣೆ ಇರಬೇಕು ಎಂದು ಪ್ರತಿಪಾದಿಸುತ್ತಿರುವ ಹೊತ್ತಿನಲ್ಲೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.