ಜಾಗತಿಕ ರಾಜಕೀಯ ಬೆಳವಣಿಗೆಗಳು ಮೂರನೇ ಮಹಾಯುದ್ಧದ ಸಾಧ್ಯತೆಯನ್ನು ಹೆಚ್ಚಿಸುತ್ತಿವೆ. ಬ್ರಿಟನ್, ಸ್ವೀಡನ್ ಮತ್ತು ಫಿನ್‌ಲ್ಯಾಂಡ್‌ನಂತಹ ದೇಶಗಳು ರಷ್ಯಾದಿಂದ ಎದುರಾಗಬಹುದಾದ ಸೈಬರ್ ದಾಳಿ ಮತ್ತು ಯುದ್ಧದ ಭೀತಿಯನ್ನು ಎದುರಿಸಲು ತಮ್ಮ ನಾಗರಿಕರನ್ನು ಮಾನಸಿಕವಾಗಿ ಸೇನಾ ದೃಷ್ಟಿಯಿಂದ ಸಜ್ಜುಗೊಳಿಸುತ್ತಿವೆ.
ಮೂರನೇ ಮಹಾಯುದ್ಧ ಖಂಡಿತವಾಗಿ ನಡೆಯಲಿದೆಯೇ? ಜಾಗತಿಕ ರಾಜಕೀಯ ಬೆಳವಣಿಗೆಗಳು ಗಮನಿಸಿದರೆ ಆ ಸಾಧ್ಯತೆ ನಿಜವೆನ್ನುತ್ತಿವೆ ವರದಿಗಳು. ಒಂದು ವೇಳೆ ಮೂರನೇ ಮಹಾಯುದ್ಧ ಸಂಭವಿಸಿದರೆ ಪರಿಸ್ಥಿತಿ ಏನಾಗಬಹುದು? ಅದನ್ನು ಎದುರಿಸಲು ನಾವು ಮಾನಸಿಕವಾಗಿ ಸಿದ್ಧರಾಗಿದ್ದೇವೆಯೇ? ಇದೇ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಬಿಬಿಸಿ ವಿಶೇಷ ವರದಿಯೊಂದನ್ನು ಪ್ರಕಟಿಸಿದೆ. ಆ ವರದಿಯಲ್ಲಿ ಯುದ್ಧದ ಅಪಾಯ, ಸೈಬರ್ ದಾಳಿ, ನಾಗರಿಕರ ಮಾನಸಿಕ ಸಿದ್ಧತೆ, ಹಿಂದಿನ ಎರಡು ಮಹಾಯುದ್ಧದ ಪರಿಣಾಮಗಳು, ವಿವಿಧ ದೇಶಗಳು ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಕೆಲವು ಅಚ್ಚರಿಯ ಮಾಹಿತಿಗಳನ್ನು ನೀಡಿದೆ.
ಒಂದು ಮೂರನೇ ಮಹಾಯುದ್ಧ ನಡೆದರೆ? ಏನು ಮಾಡಬೇಕು?
ಯುದ್ಧವೆಂದರೆನೇ ನಾಶ. ಇದು ಸಾಮಾನ್ಯ ಜನರ ಜೀವನವನ್ನೇ ಬುಡಮೇಲು ಮಾಡುತ್ತದೆ. ಈ ಸಾಧ್ಯತೆ ಇರುವುದರಿಂದ ಈಗಲೇ ಸಿದ್ಧತೆ ಮಾಡಿಕೊಳ್ಳುವಂತೆ ಬ್ರಿಟನ್ ಸರ್ಕಾರ ತನ್ನ ನಾಗಿಕರಿಗೆ ಸೂಚಿಸಿದೆ. ಸುಮಾರು ಮೂರು ತಿಂಗಳಿಗಾಗುವಷ್ಟು ಆಹಾರ ಸಂಗ್ರಹ, ಕುಡಿಯುವ ನೀರನ್ನು ಇಟ್ಟುಕೊಳ್ಳುವುದು, ನಾಗರಿಕರ ತುರ್ತು ಪರಿಸ್ಥಿತಿ ಎದುರಿಸುವ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ಯುದ್ಧದ ಸಾಧ್ಯತೆ ಹಿನ್ನೆಲೆ ಸಿದ್ಧತೆಗಾಗಿ ಯೋಜನೆ ರೂಪಿಸುವಂತೆ ಹೇಳಿದೆ.
ದಶಕಗಳಿಂದ ಅಪ್ಡೇಟ್ ಆಗದೇ ಇದ್ದ ಸರ್ಕಾರದ ‘ವಾರ್ ಬುಕ್’ ಎಂದು ಕರೆಯಲಾಗುವ ಯುದ್ಧ ಸಿದ್ಧತಾ ಪುಸ್ತಕ ಈಗ ಅಪ್ಡೇಟ್ ಮಾಡಲು ಆರಂಭಿಸಿದೆ. ಬ್ರಿಟನ್‌ನ ಅತ್ಯುನ್ನತ ಸೇನಾ ಅಧಿಕಾರಿ ಮೂರನೇ ಮಹಾಯುದ್ಧದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಬ್ರಿಟನ್‌ನ ರಕ್ಷಣಾ ಪಡೆಗಳ ಮುಖ್ಯಸ್ಥ ಸರ್ ರಿಚರ್ಡ್ ನೈಟನ್, ರಷ್ಯಾದಿಂದ ಎದುರಾಗಲಿರುವ ಅಪಾಯದಿಂದಾಗಿ ತಮ್ಮ 35 ವರ್ಷಗಳ ಸೇನಾ ವೃತ್ತಿಜೀವನದಲ್ಲೇ ಇದು ಅತ್ಯಂತ ಅಪಾಯಕಾರಿ ಕಾಲ ಎಂದು ಈ ವಾರ ಹೇಳಿದ್ದಾರೆ.
ಆದರೆ ನಿಜವಾದ ಅಪಾಯ ಏನು? 1940ರಲ್ಲಿ ಜರ್ಮನಿ ಬ್ರಿಟನ್ ಮೇಲೆ ದಾಳಿ ಮಾಡುವ ಸಾಧ್ಯತೆ ನಿಜವಾಗಿಯೂ ಇತ್ತು. ಆದರೆ ರಷ್ಯಾದ ಟ್ಯಾಂಕ್‌ಗಳು ವೈಟ್‌ಹಾಲ್‌ವರೆಗೆ ಬಂದು ನಿಲ್ಲುವ ಸಾಧ್ಯತೆ ಬಹಳ ಕಡಿಮೆ ಎಂದು ಹೇಳಬಹುದು. 'ನೀವು ಚಿಂತಿಸಬೇಕಾಗಿರುವುದು ಟ್ಯಾಂಕ್‌ಗಳ ಬಗ್ಗೆ ಅಲ್ಲ' ಎಂದು ‘War: How Conflict Shaped Us’ ಪುಸ್ತಕದ ಲೇಖಕಿ ಮತ್ತು ಇತಿಹಾಸಕಾರ್ತಿ ಮಾರ್ಗರೇಟ್ ಮ್ಯಾಕ್‌ಮಿಲನ್ ಹೇಳುತ್ತಾರೆ.
ಸಮುದ್ರದ ತಳದಲ್ಲಿರುವ ಕೇಬಲ್‌ಗಳನ್ನು ಕತ್ತರಿಸುವುದು, ಅನೇಕ ವಿಷಯಗಳು ಅವಲಂಬಿಸಿರುವ ವ್ಯವಸ್ಥೆಗಳಿಗೆ ಹ್ಯಾಕ್ ಮಾಡುವುದು ಇವುಗಳ ಬಗ್ಗೆ ಚಿಂತಿಸಬೇಕು. ಸೈಬರ್ ಯುದ್ಧದ ಸಾಧ್ಯತೆ ವೇಗವಾಗಿ ಹೆಚ್ಚುತ್ತಿದೆ' ಎಂದು ಅವರು ಹೇಳಿದ್ದಾರೆ.
ಆದರೆ ಇದಕ್ಕೆ ನಾವು ಸಿದ್ಧರಿದ್ದೇವೆಯೇ? ನಮ್ಮ ನೆಲದಲ್ಲಿ ಯುದ್ಧ ನಡೆದು 80 ವರ್ಷಗಳಾಗಿವೆ. ಹೀಗಿರುವಾಗ ಒಂದು ವೇಳೆ ಯುದ್ಧ ಎದುರಾದರೆ ಒಂದು ಸಮಾಜವಾಗಿ ನಾವು ಮಾನಸಿಕವಾಗಿ ಸಿದ್ಧರಿದ್ದೇವೆಯೇ? ರಕ್ಷಣಾ ವೆಚ್ಚವನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲು ಮತ್ತು ಅದರಿಂದ ದೇಶದ ಇತರ ಕ್ಷೇತ್ರಗಳಲ್ಲಿ ಉಂಟಾಗಬಹುದಾದ ತ್ಯಾಗಗಳನ್ನು ಒಪ್ಪಿಕೊಳ್ಳಲು ನಾವು ಸಿದ್ಧರಿದ್ದೇವೆಯೇ? ಅಥವಾ ಯುದ್ಧದ ಅಪಾಯ ನಮಗೆ ನಿಜವೆನಿಸದಷ್ಟು ದೂರದ ಸಂಗತಿಯಂತೆ ಕಾಣುತ್ತಿದೆಯೇ?
ಮಹಾಯುದ್ಧದ ಇತಿಹಾಸ
'ಶಾಂತಿ ಎಂಬುದು ಸಹಜ ಸ್ಥಿತಿ, ಅದು ಮುಂದುವರಿಯುತ್ತಲೇ ಇರುತ್ತದೆ ಎಂಬ ಭಾವನೆಗೆ ನಾವು ಒಗ್ಗಿಕೊಂಡಿದ್ದೇವೆ ಎಂದು ನನಗನಿಸುತ್ತದೆ. ಹೀಗಾಗಿ ನಾವು ಮಾನಸಿಕವಾಗಿ ಸಿದ್ಧರಾಗಿದ್ದೇವೆಂದು ನನಗೆ ಅನಿಸುತ್ತಿಲ್ಲ. ಆದರೆ ಯುದ್ಧ ನಾವು ಅಂದುಕೊಂಡಿದ್ದಕ್ಕಿಂತ ತುಂಬಾ ಹತ್ತಿರದಲ್ಲಿದೆ ಎಂಬುದನ್ನು ನಾವು ನಿಧಾನವಾಗಿ ಅರಿತುಕೊಳ್ಳಲು ಆರಂಭಿಸಿದ್ದೇವೆ' ' ಎಂದು ಮ್ಯಾಕ್‌ಮಿಲನ್ ಹೇಳುತ್ತಾರೆ.
1913ರಲ್ಲಿ ಬ್ರಿಟನ್‌ನ ಜನರು ಹಾರ್ಸ್ ರೇಸ್ ನೋಡುತ್ತಾ, ಕ್ರಿಕೆಟ್ ಪಂದ್ಯಗಳನ್ನು ನೋಡುತ್ತಾ ಸಂತೋಷದಿಂದ ಕಾಲ ಕಳೆಯುತ್ತಿದ್ದ ದೃಶ್ಯಗಳನ್ನು ತೋರಿಸುವ ಹಳೆಯ ಚಿತ್ರಗಳು, ನಂತರ ನಡೆದ ಮೊದಲ ವಿಶ್ವಯುದ್ಧದ ಭೀಕರ ಘಟನೆಗಳಿಗೆ ಸಂಪೂರ್ಣ ವ್ಯತಿರಿಕ್ತವಾಗಿವೆ.
'1914ಕ್ಕೂ ಮುನ್ನದ ಎಡ್ವರ್ಡಿಯನ್ ಕಾಲದ ಬೇಸಿಗೆಯ ದಿನಗಳಂತೆಯೇ ಈಗಲೂ ಪರಿಸ್ಥಿತಿ ಇದೆ. ಆಗ ಯುದ್ಧದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿತ್ತು. ಆದರೆ ನಿಜವಾಗಿಯೂ ಯುದ್ಧ ನಡೆಯುತ್ತದೆ ಎಂಬ ಕಲ್ಪನೆ ನಂಬಲಾಗದಷ್ಟು ದೂರದ ಸಂಗತಿಯಾಗಿತ್ತು. ಈಗಲೂ ನಮ್ಮ ಪರಿಸ್ಥಿತಿ ಹಾಗೆಯೇ ಇದೆ' ಎಂದು ನಿವೃತ್ತ ಬ್ರಿಟಿಷ್ ಜನರಲ್ ಸರ್ ರಿಚರ್ಡ್ ಶಿರೆಫ್ ಹೇಳಿದ್ದಾರೆ. ಅವರು ಯುರೋಪ್‌ನ ಮಾಜಿ ಉಪ ಸರ್ವೋಚ್ಚ ಮಿತ್ರಪಡೆಗಳ ಕಮಾಂಡರ್ ಆಗಿದ್ದರು.
ಯುರೋಪ್ ಯಾವಾಗಲೂ ಯುದ್ಧದಿಂದ ದೂರವಿರಲಿಲ್ಲ. 1914ರಲ್ಲಿ ತಮ್ಮ ದೇಶಕ್ಕಾಗಿ ಸೇವೆ ಸಲ್ಲಿಸಲು ಬಯಸಿದ ಸ್ವಯಂಸೇವಕರಿಂದ ನೇಮಕಾತಿ ಕೇಂದ್ರಗಳು ತುಂಬಿಹೋಗಿದ್ದವು. ಬ್ರಿಟನ್‌ನಲ್ಲಿ ಬೆಳೆದ ಆ ತಲೆಮಾರು ಸಾಮ್ರಾಜ್ಯ ನಿರ್ಮಾಣದ ವೀರಗಾಥೆಗಳನ್ನು ಕೇಳುತ್ತಾ ಬೆಳೆದಿತ್ತು. ಅವರ ಕಲ್ಪನೆಯಲ್ಲಿ ಯುದ್ಧ ಎಂದರೆ ಒಂದು ಅದ್ಭುತ ಕುದುರೆಪಡೆ ದಾಳಿ, ಶೀಘ್ರ ಗೆಲುವು ಮತ್ತು ಕ್ರಿಸ್‌ಮಸ್ ವೇಳೆಗೆ ಎಲ್ಲರೂ ಮನೆಗೆ ಮರಳುವುದು ಎಂಬಂತಿತ್ತು. ಆದರೆ ನಂತರ ‘ಮಹಾಯುದ್ಧ’ ಎಂದು ಕರೆಯಲಾದ ಮೊದಲ ವಿಶ್ವಯುದ್ಧದ ಅನುಭವ ಜನರ ಮನಸ್ಸಿನಲ್ಲಿ ಆಳವಾದ ಗಾಯವನ್ನು ಮಾಡಿತು. ಅದರ ನೆನಪು ಇಂದಿಗೂ ಸಾಮೂಹಿಕ ಕಲ್ಪನೆಯಲ್ಲಿ ಉಳಿದಿದೆ.
ಬ್ರಿಟನ್‌ನಲ್ಲಿ ಸೇನೆಗೆ ಸೇರ್ಪಡೆಯಾದ ಪ್ರತಿ ಎಂಟು ಪುರುಷರಲ್ಲಿ ಒಬ್ಬರು ಫ್ಲಾಂಡರ್ಸ್ ಮತ್ತು ಫ್ರಾನ್ಸ್, ಮೆಸೊಪೊಟೇಮಿಯಾ ಹಾಗೂ ಗ್ಯಾಲಿಪೊಲಿಯ ಯುದ್ಧಭೂಮಿಗಳಲ್ಲಿ ಸಾವನ್ನಪ್ಪಿದರು. ಬದುಕುಳಿದವರು ತಮ್ಮ ಹೇಳಲಾಗದ ದುಃಖವನ್ನು ಸಾವಿರಾರು ಯುದ್ಧ ಸ್ಮಾರಕಗಳನ್ನು ನಿರ್ಮಿಸುವ ಮೂಲಕ ದಾಖಲಿಸಿದರು. ಆ ನೋವು ದೇಶದ ಪ್ರತಿಯೊಂದು ಸಮುದಾಯಕ್ಕೂ ತಟ್ಟಿತು. ಆ ಸಂಘರ್ಷದ ನಂತರ ಯುರೋಪ್ ಯುದ್ಧವನ್ನು ನೋಡುವ ರೀತಿಯನ್ನೇ ಬದಲಿಸಿಬಿಟ್ಟಿತು ಎಂದು ಮಾರ್ಗರೇಟ್ ಮ್ಯಾಕ್‌ಮಿಲನ್ ಹೇಳುತ್ತಾರೆ.
'ಮೊದಲ ವಿಶ್ವಯುದ್ಧದ ಅನುಭವ ಆಧುನಿಕ ಯುದ್ಧ ಎಷ್ಟು ಭೀಕರವಾಗಿರುತ್ತದೆ ಎಂಬುದನ್ನು ತೋರಿಸಿತು. ಯುದ್ಧವೆಂದರೆ ಸಾಹಸ, ಆಕರ್ಷಕವೆ ಎಂಬ ಮೊದಲ ಯುದ್ಧದ ಬಳಿಕ ಮತ್ತೆ ಬರಲಿಲ್ಲ.
ಪರಸ್ಪರ ನಂಬಿಕೆ ಕೊರತೆ
.ಬ್ರಿಟನ್ ಸೇರಿದಂತೆ ಹಲವು ಯುರೋಪಿಯನ್ ದೇಶಗಳಲ್ಲಿ ಯುದ್ಧದ ಅಪಾಯ ಎದುರಿಸಲು ಮಾನಸಿಕ ಸಿದ್ಧತೆ ಬಹಳ ಕಡಿಮೆ ಇದೆ. ಅಲ್ಲದೆ, ಎದುರಾಗಬಹುದಾದ ಅಪಾಯಗಳ ಬಗ್ಗೆ ಅಧಿಕಾರಿಗಳು ಜನರಿಗೆ ಸಂಪೂರ್ಣವಾಗಿ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ ಎಂದು ಹ್ಯಾಮಿಲ್ಟನ್ ಸ್ಕೂಲ್, ಯೂನಿವರ್ಸಿಟಿ ಆಫ್ ಫ್ಲೋರಿಡಾದ ಕಾರ್ಯತಂತ್ರ ಅಧ್ಯಯನಗಳ ಪ್ರಾಧ್ಯಾಪಕ ಆಂಡ್ರ್ಯೂ ಮಿಚ್ಟಾ ವಾದಿಸಿದ್ದಾರೆ
ಕಳೆದ 30 ವರ್ಷಗಳಲ್ಲಿ ಜರ್ಮನಿ ತನ್ನ ಸೇನಾ ಸಾಮರ್ಥ್ಯವನ್ನು ಸಂಪೂರ್ಣವಾಗಿ ಕಡಿಮೆ ಮಾಡಿಕೊಂಡಿದೆ. ಬ್ರಿಟನ್ ಕೂಡ ಬಹುತೇಕ ತನ್ನ ಸೇನಾ ಸಾಮರ್ಥ್ಯವನ್ನು ಕಡಿಮೆ ಮಾಡಿಕೊಂಡಿದೆ. ಮುಖ್ಯವಾಗಿ ಮಾನಸಿಕವಾಗಿಯೂ ಸಿದ್ಧವಾಗಿಲ್ಲ. ಪರಿಸ್ಥಿತಿಯ ಗಂಭೀರತೆಯನ್ನು ಜನರಿಗೆ ಪ್ರಾಮಾಣಿಕವಾಗಿ ವಿವರಿಸುವ ರೀತಿಯಲ್ಲಿ ನೀತಿ ರೂಪಿಸುವ ನಾಯಕರು ಮಾತನಾಡುತ್ತಿಲ್ಲ. ಹೀಗಾಗಿ ಏನಾಗುತ್ತಿದೆ ಎಂಬುದನ್ನು ಎದುರಿಸಲು ಸಿದ್ಧತೆ ಇಲ್ಲ' ಎಂದು ಮಿಚ್ಟಾ ಹೇಳಿದ್ದಾರೆ.
1990ರ ದಶಕದ ಆರಂಭದಲ್ಲಿ ಸೋವಿಯತ್ ಒಕ್ಕೂಟ ಕುಸಿದ ನಂತರ, ಅನೇಕ ಯುರೋಪಿಯನ್ ದೇಶಗಳು ದಶಕಗಳ ಕಾಲ ತಮ್ಮ ಸೇನಾ ಸಿದ್ಧತೆಯನ್ನು ಕಡಿಮೆ ಮಾಡತೊಡಗಿದವು. ರಷ್ಯಾದಿಂದ ಎದುರಾಗಿದ್ದ ಅಪಾಯ ಇಲ್ಲವಾಗಿದೆ ಎಂಬ ನಂಬಿಕೆಯಿಂದ ರಕ್ಷಣಾ ವೆಚ್ಚವನ್ನು ಕೂಡ ದೊಡ್ಡ ಪ್ರಮಾಣದಲ್ಲಿ ಕಡಿತಗೊಳಿಸಲಾಯಿತು. ಬಾಲ್ಟಿಕ್ ಸಮುದ್ರದ ಅಡಿಯಲ್ಲಿ ರಷ್ಯಾದಿಂದ ಜರ್ಮನಿಗೆ ಅಪಾರ ಪ್ರಮಾಣದ ಅನಿಲ ಸಾಗಿಸುತ್ತಿದ್ದ ನಾರ್ಡ್ ಸ್ಟ್ರೀಮ್ ಪೈಪ್‌ಲೈನ್‌ಗಳ ಮೇಲಿನ ಜರ್ಮನಿಯ ಅವಲಂಬನೆಯನ್ನು ಮಿಚ್ಟಾ ಉದಾಹರಣೆಯಾಗಿ ನೀಡಿದ್ದಾರೆ. ರಾಜಕೀಯ ಮತ್ತು ಆರ್ಥಿಕ ಮಾರ್ಗಗಳ ಮೂಲಕ ಮಾಸ್ಕೋ ಜೊತೆಗಿನ ಸಂಬಂಧವನ್ನು ನಿರ್ವಹಿಸಬಹುದು ಎಂಬ ಬರ್ಲಿನ್‌ನ ನಂಬಿಕೆ ತಪ್ಪಾಗಿತ್ತು ಎಂದು ಅವರು ಹೇಳಿದ್ದಾರೆ.
ಹೀಗಾಗಿ ಯುರೋಪ್‌ನಲ್ಲಿ 20 ವರ್ಷಗಳ ಕಾಲ ಸಮಾಧಾನಪಡಿಸುವ ನೀತಿ ಮುಂದುವರಿಯಿತು. ಪರಿಸ್ಥಿತಿ ಹೇಗೆ ಮತ್ತು ಎಷ್ಟು ವೇಗವಾಗಿ ಬದಲಾಗುತ್ತಿದೆ ಎಂಬುದನ್ನು ಜನರಿಗೆ ವಿವರಿಸಲು ನಾಯಕತ್ವ ವಲಯದಲ್ಲಿ ಇಚ್ಛೆ ಅಥವಾ ಧೈರ್ಯದ ಕೊರತೆ ಇತ್ತು' ಎಂದು ಅವರು ಹೇಳಿದ್ದಾರೆ.
2014ರಲ್ಲಿ ರಷ್ಯಾ ಉಕ್ರೇನ್ ಮೇಲೆ ನಡೆಸಿದ ಆರಂಭಿಕ ದಾಳಿಯೇ ನಿಜವಾದ ಟ್ವಿಸ್ಟ್. ಆ ಸಮಯದಲ್ಲಿ ರಷ್ಯಾ ಪಶ್ಚಿಮದ ಭದ್ರತೆಗೆ ಗಂಭೀರ ಮತ್ತು ನಿರಂತರ ಅಪಾಯ ಎಂಬುದನ್ನು ಬಹಿರಂಗಪಡಿಸಿತು ಎಂದು ಜನರಲ್ ಸರ್ ರಿಚರ್ಡ್ ಶಿರೆಫ್ ಹೇಳಿದ್ದಾರೆ. 2014ರಿಂದಲೇ ರಷ್ಯಾ ತನ್ನನ್ನು ನ್ಯಾಟೋ ಜೊತೆ ಯುದ್ಧದಲ್ಲಿದೆ ಎಂದು ಭಾವಿಸುತ್ತಿದೆ ಎಂಬುದು ವಾಸ್ತವ. ಇದು ಸಾಂಪ್ರದಾಯಿಕ ಯುದ್ಧವಲ್ಲ. ಬದಲಾಗಿ ಗುರಿಯಾಗಿರುವ ದೇಶಗಳು ಅಥವಾ ಮೈತ್ರಿಕೂಟಗಳ ಸಮಗ್ರತೆಯನ್ನು ದುರ್ಬಲಗೊಳಿಸುವ ಉದ್ದೇಶದ ಯುದ್ಧ ಎಂದು ಅವರು ಹೇಳಿದ್ದಾರೆ.
ರಷ್ಯಾವನ್ನು ನಾನು ಎಂದಿಗೂ ಲಘುವಾಗಿ ಪರಿಗಣಿಸುವುದಿಲ್ಲ. ಉದಾಹರಣೆಗೆ, ನಾರ್ವೆಯ ಸ್ವಾಲ್ಬಾರ್ಡ್ ದ್ವೀಪಸಮೂಹದಲ್ಲಿರುವ ಸ್ಪಿಟ್ಸ್‌ಬರ್ಗೆನ್ ಅನ್ನು ವಶಪಡಿಸಿಕೊಳ್ಳಲು ಅಥವಾ ಇದೇ ರೀತಿಯ ಪರೋಕ್ಷ ಕ್ರಮದ ಮೂಲಕ ನ್ಯಾಟೋವನ್ನು ಅಸ್ಥಿರಗೊಳಿಸಲು ರಷ್ಯಾ ಪ್ರಯತ್ನಿಸುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ. ಹೀಗಾಗಿ ನಾವು ಇಂತಹ ಪರಿಸ್ಥಿತಿಗೆ ಸಿದ್ಧರಾಗಿರಬೇಕು ಎಂದು ಅವರು ಹೇಳಿದ್ದಾರೆ.
ಯುದ್ಧದ ಸಿದ್ಧತೆ, ನಾಗರಿಕರ ಪಾತ್ರವೇನು?
ರಕ್ಷಣಾ ವೆಚ್ಚ ಹೆಚ್ಚಿಸಬೇಕು ಎಂಬ ಒತ್ತಾಯದ ಹಿಂದೆ ಯುದ್ಧವನ್ನು ತಡೆಯಲು ಉತ್ತಮ ಮಾರ್ಗವೆಂದರೆ ಅದನ್ನು ಎದುರಿಸಲು ಮಾನಸಿಕವಾಗಿ ಮತ್ತು ಸೇನಾ ದೃಷ್ಟಿಯಿಂದ ಸಿದ್ಧರಾಗಿರುವುದು ಎಂಬ ನಂಬಿಕೆ ಇದೆ. ಆದರೆ ಇದನ್ನು ಎಲ್ಲರೂ ಒಪ್ಪುವುದಿಲ್ಲ. ನಾವು ಅಪಾಯದಲ್ಲಿದ್ದೇವೆ ಎಂಬ ನಂಬಿಕೆಯೇ ಪ್ರಮುಖ ಸಮಸ್ಯೆ ಎಂದು ಬರ್ಮಿಂಗ್‌ಹ್ಯಾಮ್ ವಿಶ್ವವಿದ್ಯಾಲಯದ ಕ್ಲಿನಿಕಲ್ ಮತ್ತು ಕಮ್ಯುನಿಟಿ ಸೈಕಾಲಜಿ ವಿಭಾಗದ ಗೌರವ ಪ್ರಾಧ್ಯಾಪಕ ಜಿಮ್ ಆರ್ಫರ್ಡ್ ಹೇಳಿದ್ದಾರೆ.
'ಇದನ್ನು ನಾನು ಸರಳೀಕೃತ ಚಿಂತನೆ ಎಂದು ಕರೆಯುತ್ತೇನೆ. ಯುದ್ಧದ ಸಾಧ್ಯತೆಯನ್ನು ಪರಿಗಣಿಸಲು ನಾವು ಶತ್ರುಗಳು ಮತ್ತು ವೀರರು ಎಂಬ ಸರಳ ಕಲ್ಪನೆಗಳಲ್ಲಿ ಯೋಚಿಸಬೇಕಾಗುತ್ತದೆ. ರಷ್ಯಾವನ್ನು ಶತ್ರು ಎಂದು ನೋಡಬೇಕು. ಇಡೀ ಕಥನವನ್ನು ಸರಳಗೊಳಿಸಲಾಗುತ್ತದೆ' ಎಂದು ಅವರು ಹೇಳಿದ್ದಾರೆ.
ಯುದ್ಧಕ್ಕೆ ಮಾನಸಿಕವಾಗಿ ಸಿದ್ಧರಾಗುವುದು ಮೊದಲ ಹಂತ. ಯುದ್ಧದ ಬಗ್ಗೆ ಗಂಭೀರವಾಗಿ ಯೋಚಿಸುವುದು ಎರಡನೇ ಹಂತ. ನಂತರ ನಿಜವಾಗಿಯೂ ಯುದ್ಧದಲ್ಲಿ ತೊಡಗುವುದು ಮೂರನೇ ಹಂತ. ನಾವು ಈಗಾಗಲೇ ‘ಯುದ್ಧದ ಬಗ್ಗೆ ಯೋಚಿಸುವ’ ಹಂತಕ್ಕೆ ಸಾಕಷ್ಟು ಮುಂದುವರಿದಿದ್ದೇವೆ ಎಂದು ನನಗನಿಸುತ್ತದೆ' ಎಂದು ಅವರು ಹೇಳಿದ್ದಾರೆ.
ಯುದ್ಧದಲ್ಲಿ ನಾಗರಿಕರ ಪಾತ್ರವೇನು?
ಮಿಚ್ಟಾ ಹೇಳುವಂತೆ, ‘ನಂಬಿಕೆಯ ಕೊರತೆ’ ಎಲ್ಲೆಡೆ ಒಂದೇ ರೀತಿಯಲ್ಲಿ ಕಾಣಿಸುವುದಿಲ್ಲ. ಪೂರ್ವ ಯುರೋಪ್‌ನತ್ತ, ಅಂದರೆ ರಷ್ಯಾದ ಗಡಿಗೆ ಹತ್ತಿರ ಹೋದಂತೆ, ಜನರಲ್ಲಿ ಅಪಾಯದ ಬಗ್ಗೆ ಹೆಚ್ಚು ಎಚ್ಚರಿಕೆ ಕಂಡುಬರುತ್ತದೆ. ಅಲ್ಲಿನ ಜನರು ಮಾನಸಿಕವಾಗಿ ಹೆಚ್ಚು ಸಿದ್ಧರಾಗಿದ್ದಾರೆ. ಅದೇ ಸ್ವೀಡನ್ ಕಳೆದ 200 ವರ್ಷಗಳಿಂದ ಯಾವುದೇ ಯುದ್ಧವನ್ನು ಎದುರಿಸಿಲ್ಲ. ಹಲವು ಶತಮಾನಗಳಿಂದ ಅದು ತಟಸ್ಥ ನೀತಿಯನ್ನು ಅನುಸರಿಸಿತ್ತು. ಆದರೆ 2022ರಲ್ಲಿ ರಷ್ಯಾ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ದಾಳಿ ನಡೆಸಿದ ನಂತರ ಸ್ವೀಡನ್ ತನ್ನ ಹಿಂದಿನ ನೀತಿಯನ್ನು ಕೈಬಿಟ್ಟು, ಅಲ್ಪಾವಧಿಯಲ್ಲೇ ಯುರೋಪ್‌ನ ಮಾನಸಿಕವಾಗಿ ಹೆಚ್ಚು ಸಿದ್ಧವಾಗಿರುವ ದೇಶಗಳಲ್ಲಿ ಒಂದಾಗಿದೆ. ಈಗ ರಷ್ಯಾ ಎಷ್ಟು ಅಪಾಯಕಾರಿ ಎಂಬುದು ಸ್ಪಷ್ಟವಾಗಿದೆ ಎಂದು ಸ್ವೀಡನ್‌ನ ನಿರ್ಗಮಿತ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಕಳೆದ ತಿಂಗಳು ‘ದಿ ಎಕನಾಮಿಸ್ಟ್’ ನಿಯತಕಾಲಿಕೆಗೆ ಹೇಳಿದ್ದಾರೆ.
ಉಕ್ರೇನ್‌ನಲ್ಲಿನ ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂಬುದು ನಮಗೆ ತಿಳಿದಿಲ್ಲ. ಆದರೆ ಅದು ಹೇಗೆ ಕೊನೆಗೊಳ್ಳುತ್ತದೆ ಎಂಬುದು ಕನಿಷ್ಠ ಒಂದು ತಲೆಮಾರಿನ ಕಾಲ ನಮ್ಮ ಭಾಗದ ಭದ್ರತಾ ಪರಿಸ್ಥಿತಿಯನ್ನು ನಿರ್ಧರಿಸಲಿದೆ ಎಂದು ಅವರು ಹೇಳಿದ್ದಾರೆ.
ಸ್ವೀಡನ್‌ನಲ್ಲಿ ಭಾಗಶಃ ಕಡ್ಡಾಯ ಸೇನಾ ಸೇವೆಯ ವ್ಯವಸ್ಥೆ ಇದೆ. ಶಾಲೆ ಮುಗಿಸುವ ಪ್ರತಿಯೊಬ್ಬರೂ ಸೇನಾ ಸೇವೆಗಾಗಿ ನೋಂದಾಯಿಸಿಕೊಳ್ಳಬೇಕು. ಸೇನೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಡ್ಡಾಯ ಸೇವೆಗೆ ಸೇರಿಸುತ್ತದೆ. ಬಳಿಕ ಅವರು 15 ತಿಂಗಳವರೆಗೆ ಕಡ್ಡಾಯ ತರಬೇತಿ ಪಡೆಯುತ್ತಾರೆ. ತರಬೇತಿ ಮುಗಿದ ನಂತರ ಉದ್ಯೋಗ ಅಥವಾ ಉನ್ನತ ಶಿಕ್ಷಣಕ್ಕಾಗಿ ನಾಗರಿಕ ಜೀವನಕ್ಕೆ ಮರಳುತ್ತಾರೆ. ಇದೇ ವೇಳೆ ಅವರು ದೇಶದ ದೊಡ್ಡ ಮೀಸಲು ಪಡೆಯ ಭಾಗವಾಗುತ್ತಾರೆ.
'ನಾಗರಿಕರ ಪಾಲ್ಗೊಳ್ಳುವಿಕೆ ಸಾಕಷ್ಟಿದೆ. 2022 ಮತ್ತು 2023ರಲ್ಲಿ ಎಲ್ಲರೂ ಸೇನಾ ಸೇವೆಗೆ ಕರೆ ಬರಲಿ ಎಂದು ಬಯಸುತ್ತಿದ್ದರು ಎಂಬುದು ಇಂಟರ್ನೆಟ್‌ನಲ್ಲಿ ಒಂದು ರೀತಿಯ ಹಾಸ್ಯವಾಗಿತ್ತು. ಕೆಲವರಿಗೆ ದೀರ್ಘಕಾಲ ಕರೆ ಬರದಿದ್ದರೆ ಬೇಸರವೂ ಆಗುತ್ತಿತ್ತು. ಸೇನಾ ಸೇವೆಗೆ ಕರೆ ಬರುವುದು ಒಂದು ನಿರೀಕ್ಷೆಯಾಗಿದೆ' ಎಂದು ಸ್ಟಾಕ್‌ಹೋಮ್ ಸೆಂಟರ್ ಫಾರ್ ಈಸ್ಟರ್ನ್ ಯುರೋಪಿಯನ್ ಸ್ಟಡೀಸ್‌ನ ವಿಶ್ಲೇಷಕಿ ಮಿನ್ನಾ ಅಲಾಂಡರ್ ಹೇಳಿದ್ದಾರೆ.
ಉದಾಹರಣೆಗೆ ವಿದ್ಯುತ್ ಪೂರೈಕೆಯಂತಹ ಕ್ಷೇತ್ರಗಳಲ್ಲಿ ಅಗತ್ಯ ಕೌಶಲ್ಯ ಹೊಂದಿರುವ ಸಿವಿಲ್ ಎಂಜಿನಿಯರ್‌ಗಳನ್ನು ಸ್ವೀಡನ್ ಗುರುತಿಸಿದೆ. ತುರ್ತು ಪರಿಸ್ಥಿತಿಯಲ್ಲಿ ಅಗತ್ಯವಾದಾಗ ಈ ಎಂಜಿನಿಯರ್‌ಗಳ ಸೇವೆಯನ್ನು ಬಳಸಿಕೊಳ್ಳಬಹುದು. ಉಕ್ರೇನ್ ಯುದ್ಧ ಮುಗಿದ ನಂತರವೂ ರಷ್ಯಾವನ್ನು ಸಂಭವನೀಯ ಆಕ್ರಮಣಕಾರ ಎಂದು ನೋಡಬೇಕೇ ಎಂದು ಕ್ರಿಸ್ಟರ್ಸನ್ ಅವರನ್ನು ಕೇಳಿದಾಗ, 'ಹೌದು. ಈ ವಿಷಯದಲ್ಲಿ ನಮಗೆ ನೂರಾರು ವರ್ಷಗಳ ಅನುಭವವಿದೆ. ನಮಗೆ ರಷ್ಯಾದ ಬಗ್ಗೆ ಸಾಕಷ್ಟು ತಿಳಿದಿದೆ' ಎಂದು ಉತ್ತರಿಸಿದ್ದಾರೆ.
ಮೂರು ಬಾಲ್ಟಿಕ್ ಗಣರಾಜ್ಯಗಳಾದ ಲಿಥುವೇನಿಯಾ, ಎಸ್ಟೋನಿಯಾ ಮತ್ತು ಲಾಟ್ವಿಯಾಗಳಿಗೂ ರಷ್ಯಾದ ಬಗ್ಗೆ ಸಾಕಷ್ಟು ಅನುಭವವಿದೆ. 1990ರ ದಶಕದಲ್ಲಿ ಅವು ಮಾಸ್ಕೋದಿಂದ ಸ್ವಾತಂತ್ರ್ಯವನ್ನು ಮರಳಿ ಪಡೆದವು. 1940ರ ದಶಕದಲ್ಲಿ ಜರ್ಮನ್ ಪಡೆಗಳು ಲಿಥುವೇನಿಯಾವನ್ನು ಆಕ್ರಮಿಸಿದ್ದವು. ಈಗ ಅದೇ ದೇಶದಲ್ಲಿ ಜರ್ಮನ್ ಪಡೆಗಳು ಮತ್ತೆ ನೆಲೆಸಿವೆ. ಆದರೆ ಈ ಬಾರಿ ಆ ದೇಶದ ರಕ್ಷಣೆಯನ್ನು ಬಲಪಡಿಸಲು ಆಹ್ವಾನದ ಮೇರೆಗೆ ಬಂದಿವೆ. ಪೂರ್ವದಿಂದ ಎದುರಾಗುವ ಅಪಾಯದ ಹಿನ್ನೆಲೆಯಲ್ಲಿ ಎಸ್ಟೋನಿಯಾದಲ್ಲಿ ಸುಮಾರು 1,000 ಬ್ರಿಟಿಷ್ ಸೈನಿಕರು ಬಹುರಾಷ್ಟ್ರೀಯ ಪಡೆಯ ನೇತೃತ್ವ ವಹಿಸಿದ್ದಾರೆ. ಆದರೆ ಸಾಮೂಹಿಕ ಮಾನಸಿಕ ಸಿದ್ಧತೆ ಮತ್ತು ನಾಗರಿಕರ ತುರ್ತು ಪರಿಸ್ಥಿತಿ ಎದುರಿಸುವ ಸಾಮರ್ಥ್ಯದ ಬಗ್ಗೆ ಕಲಿಯಲು ಈಗ ಯುರೋಪ್‌ನ ಹಲವು ದೇಶಗಳು ಫಿನ್‌ಲ್ಯಾಂಡ್‌ನತ್ತ ನೋಡುತ್ತಿವೆ.
ಫಿನ್‌ಲ್ಯಾಂಡ್‌ನ ಸಿದ್ಧತೆ ಹೇಗಿದೆ?
ಫಿನ್‌ಲ್ಯಾಂಡ್‌ನ ರಕ್ಷಣಾ ಮತ್ತು ಭದ್ರತಾ ನೀತಿಯೂ ಅದರ ಇತಿಹಾಸದ ಅನುಭವದ ಮೇಲೆ ಆಧಾರಿತವಾಗಿದೆ. ಎರಡನೇ ವಿಶ್ವಯುದ್ಧದಲ್ಲಿ ಸಾವನ್ನಪ್ಪಿದ 1 ಲಕ್ಷ ನಾರ್ಡಿಕ್ ನಾಗರಿಕರಲ್ಲಿ ಶೇ.90ರಷ್ಟು ಜನ ಫಿನ್‌ಲ್ಯಾಂಡ್‌ನವರಾಗಿದ್ದರು. 1939-40ರ ಸೋವಿಯತ್ ಒಕ್ಕೂಟದ ವಿರುದ್ಧದ ‘ವಿಂಟರ್ ವಾರ್’ ಮತ್ತು ನಂತರ 1941-44ರ ‘ಕಂಟಿನ್ಯುಯೇಶನ್ ವಾರ್’ನಲ್ಲಿ ಅವರು ಸಾವನ್ನಪ್ಪಿದರು.
ಇಂದು ಫಿನ್‌ಲ್ಯಾಂಡ್ ರಷ್ಯಾದೊಂದಿಗೆ 800 ಮೈಲಿ ಅಂದರೆ ಸುಮಾರು 1,287 ಕಿಲೋಮೀಟರ್ ಉದ್ದದ ಗಡಿಯನ್ನು ಹಂಚಿಕೊಂಡಿದೆ. 2022ರಲ್ಲಿ ಉಕ್ರೇನ್ ಮೇಲೆ ರಷ್ಯಾ ಪೂರ್ಣ ಪ್ರಮಾಣದ ದಾಳಿ ನಡೆಸಿದ ನಂತರ ಫಿನ್‌ಲ್ಯಾಂಡ್ ಕೂಡ ತನ್ನ ಐತಿಹಾಸಿಕ ತಟಸ್ಥ ನೀತಿಯನ್ನು ಶೀಘ್ರವಾಗಿ ಕೈಬಿಟ್ಟು ನೆರೆಯ ಸ್ವೀಡನ್‌ನೊಂದಿಗೆ ನ್ಯಾಟೋಗೆ ಸೇರ್ಪಡೆಯಾಯಿತು.
ಫಿನ್‌ಲ್ಯಾಂಡ್‌ನಲ್ಲಿ ಪುರುಷರಿಗೆ ಸಾರ್ವತ್ರಿಕ ಕಡ್ಡಾಯ ಸೇನಾ ಸೇವೆ ಇದೆ. ಕೆಲವು ಮಹಿಳೆಯರೂ ಸ್ವಯಂಪ್ರೇರಣೆಯಿಂದ ಸೇನೆಗೆ ಸೇರುತ್ತಾರೆ. ಸೇನಾ ಸೇವೆ ಮುಗಿದ ನಂತರ ಅವರು ಫಿನ್‌ಲ್ಯಾಂಡ್‌ನ ಮೀಸಲು ಪಡೆಯ ಭಾಗವಾಗುತ್ತಾರೆ. ಇದರಿಂದ ವೃತ್ತಿಪರ ಸೇನೆ ಮತ್ತು ನಾಗರಿಕರ ನಡುವಿನ ಅಂತರ ಕಡಿಮೆಯಾಗುತ್ತದೆ. ಕಡ್ಡಾಯ ಸೇನಾ ಸೇವೆಯನ್ನು ಸರಿಯಾಗಿ ನಿರ್ವಹಿಸಿದರೆ, ಅದು ಪ್ರತಿಯೊಂದು ಕುಟುಂಬವನ್ನೂ ರಾಷ್ಟ್ರೀಯ ಭದ್ರತೆಯ ಚಿಂತನೆಯೊಂದಿಗೆ ಸಂಪರ್ಕಿಸುತ್ತದೆ. ನಿಮ್ಮ ಅಜ್ಜ, ಮುತ್ತಜ್ಜ ಮತ್ತು ನಿಮ್ಮ ಮಕ್ಕಳು ಎಲ್ಲರೂ ಒಂದೇ ರೀತಿಯ ಸೇನಾ ಸೇವೆಗೆ ಹೋಗುತ್ತಾರೆ ಎಂದು ಫಿನ್‌ಲ್ಯಾಂಡ್‌ನ ರಕ್ಷಣಾ ಸಚಿವಾಲಯದ ಮಾಜಿ ಖಾಯಂ ಕಾರ್ಯದರ್ಶಿ ಹಾಗೂ ನಿವೃತ್ತ ತ್ರೀ-ಸ್ಟಾರ್ ಜನರಲ್ ಆರ್ಟೋ ರಾಟಿ ಹೇಳಿದ್ದಾರೆ.
ಇಡೀ ಸಮಾಜವನ್ನು ಸೇನೆಯನ್ನು ಬೆಂಬಲಿಸುವ ವ್ಯವಸ್ಥೆಯೊಂದಿಗೆ ನಾವು ಜೋಡಿಸುತ್ತೇವೆ. ಪ್ರತಿಯೊಂದು ಆಸ್ಪತ್ರೆಗೂ ತುರ್ತು ಪರಿಸ್ಥಿತಿಯಲ್ಲಿ ನಿರ್ವಹಿಸಬೇಕಾದ ಜವಾಬ್ದಾರಿ ಇದೆ. ಪ್ರತಿಯೊಂದು ನೀರು ಪೂರೈಕೆ ಸಂಸ್ಥೆಗೂ ಇದೇ ರೀತಿಯ ಜವಾಬ್ದಾರಿ ಇದೆ. ಆಸಕ್ತಿದಾಯಕ ಸಂಗತಿಯೆಂದರೆ, ಇಂದು ಫಿನ್‌ಲ್ಯಾಂಡ್‌ನಲ್ಲಿ ಜನರು ಹೆಚ್ಚು ನಂಬಿಕೆ ಇಡುವ ಸಂಸ್ಥೆಗಳೆಂದರೆ ಸೇನೆ, ರಕ್ಷಣಾ ಪಡೆಗಳು ಮತ್ತು ಪೊಲೀಸರು. ಹೆಚ್ಚಿನ ದೇಶಗಳಲ್ಲಿ ಇದು ಹಾಗಿಲ್ಲ ಎಂದು ಅವರು ಹೇಳಿದ್ದಾರೆ.
ಫಿನ್‌ಲ್ಯಾಂಡ್‌ನ ಸೇನೆ ಪ್ರತಿವರ್ಷ ಸಮಾಜದ ವಿವಿಧ ಕ್ಷೇತ್ರಗಳ ನಾಯಕರಿಗಾಗಿ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತದೆ. ಸಂಸದರು, ಸರ್ಕಾರದ ಸಚಿವರು, ಖಾಸಗಿ ಕಂಪನಿಗಳು ಮತ್ತು ಸಾರ್ವಜನಿಕ ಸೇವಾ ಸಂಸ್ಥೆಗಳ ಸಿಇಒಗಳು, ಆರೋಗ್ಯ ಸೇವಾ ಕ್ಷೇತ್ರದ ನಾಯಕರು, ಸ್ವಯಂಸೇವಾ ಸಂಸ್ಥೆಗಳು ಮತ್ತು ಚರ್ಚ್‌ಗಳ ಪ್ರತಿನಿಧಿಗಳು ಈ ತರಬೇತಿಯಲ್ಲಿ ಭಾಗವಹಿಸುತ್ತಾರೆ. ಅವರಿಗೆ ತುರ್ತು ಪರಿಸ್ಥಿತಿ ನಿರ್ವಹಣೆ ಕುರಿತು ತರಬೇತಿ ನೀಡುತ್ತೇವೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಸಮಾಜ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು. 1960ರಿಂದ ಪ್ರತಿವರ್ಷ ಈ ತರಬೇತಿ ನಡೆಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
5.5 ಮಿಲಿಯನ್ ಜನಸಂಖ್ಯೆ ಹೊಂದಿರುವ ಫಿನ್‌ಲ್ಯಾಂಡ್‌ನಲ್ಲಿ 23,000 ವೃತ್ತಿಪರ ಸೇನಾ ಸಿಬ್ಬಂದಿ ಇದ್ದಾರೆ. 6.6 ಕೋಟಿ ಜನಸಂಖ್ಯೆ ಹೊಂದಿರುವ ಬ್ರಿಟನ್‌ನಲ್ಲಿ ಈ ಸಂಖ್ಯೆ 70,000. ಆದರೆ ಫಿನ್‌ಲ್ಯಾಂಡ್‌ನಲ್ಲಿ ಸುಮಾರು 10 ಲಕ್ಷ ತರಬೇತಿ ಪಡೆದ ಮೀಸಲು ಪಡೆ ಇದೆ. ಅಲ್ಲದೆ, ತುರ್ತು ಸಂದರ್ಭದಲ್ಲಿ ಕಡಿಮೆ ಅವಧಿಯಲ್ಲೇ 2.8 ಲಕ್ಷ ಮೀಸಲು ಸೈನಿಕರನ್ನು ಸಜ್ಜುಗೊಳಿಸಬಹುದು. 2025ರಲ್ಲಿ ಫಿನ್‌ಲ್ಯಾಂಡ್ ತನ್ನ ಒಟ್ಟು ದೇಶೀಯ ಉತ್ಪನ್ನದ ಶೇ.2.5ರಷ್ಟು ಹಣವನ್ನು ರಕ್ಷಣಾ ಕ್ಷೇತ್ರಕ್ಕೆ ಖರ್ಚು ಮಾಡಿತ್ತು. ಅದೇ ವರ್ಷ ಬ್ರಿಟನ್ ಶೇ.2.3ರಷ್ಟು ಖರ್ಚು ಮಾಡಿತ್ತು.
ರಷ್ಯಾದೊಂದಿಗೆ ಸಾಂಪ್ರದಾಯಿಕ ಯುದ್ಧ ನಡೆಯುವ ಸಾಧ್ಯತೆ ಅತ್ಯಂತ ಕಡಿಮೆ ಎಂದು ಕಾಣುತ್ತಿರುವಾಗ, ಯುರೋಪ್‌ನ ಇತರ ದೇಶಗಳು ಫಿನ್‌ಲ್ಯಾಂಡ್‌ನ ಮಾದರಿಯನ್ನು ಅನುಸರಿಸಲು ಇಷ್ಟೊಂದು ವೆಚ್ಚ ಮಾಡಬೇಕೇ? ನಾವು ಎದುರಿಸಬೇಕಾಗಬಹುದಾದ ರೀತಿಯ ಯುದ್ಧಕ್ಕೆ 70,000 ಸೈನಿಕರ ಸೇನೆ ಏನೇನು ಸಾಕಾಗುವುದಿಲ್ಲ. ಆದ್ದರಿಂದ ಅಗತ್ಯವಾದ ಸೇನಾ ಸಾಮರ್ಥ್ಯವನ್ನು ಸೃಷ್ಟಿಸಲು ಕೆಲವು ರೀತಿಯ ಕಡ್ಡಾಯ ಸೇನಾ ಸೇವೆ ಬೇಕಾಗುತ್ತದೆ ಎಂದು ಜನರಲ್ ಸರ್ ರಿಚರ್ಡ್ ಶಿರೆಫ್ ಹೇಳಿದ್ದಾರೆ.
ಯುದ್ಧದ ಬಗ್ಗೆ ಬ್ರಿಟನ್‌ನ ಜನರ ಮನಸ್ಥಿತಿಯನ್ನು ಬದಲಾಯಿಸಲು ನಾರ್ವೆಯ ಮಾದರಿ ಸಹಾಯ ಮಾಡಬಹುದು ಎಂದು ಅವರು ಹೇಳಿದ್ದಾರೆ. ಅಲ್ಲಿ ಶಾಲೆ ಮುಗಿಸುವ ಪ್ರತಿಯೊಬ್ಬರೂ ಕಡ್ಡಾಯ ಸೇನಾ ಸೇವೆಗಾಗಿ ನೋಂದಾಯಿಸಿಕೊಳ್ಳುತ್ತಾರೆ. ಅವರು ಒಂದು ವರ್ಷದ ತರಬೇತಿ ಪಡೆಯುತ್ತಾರೆ. ನಂತರ ವಿಶ್ವವಿದ್ಯಾಲಯಕ್ಕೆ ಹೋಗುತ್ತಾರೆ. ಮುಂದೆ ಉದ್ಯೋಗಕ್ಕಾಗಿ ಸ್ಪರ್ಧಿಸುವಾಗ ಅವರ ರೆಸ್ಯೂಮೆಯಲ್ಲಿ ರಾಷ್ಟ್ರೀಯ ಸೇವೆಯ ಅನುಭವವಿದ್ದರೆ, ಅವರನ್ನು ಉತ್ತಮ ಅಭ್ಯರ್ಥಿಗಳಾಗಿ ಪರಿಗಣಿಸಲಾಗುತ್ತದೆ. ನಾವು ಕೂಡ ಇಂತಹ ವ್ಯವಸ್ಥೆಯನ್ನು ಪರಿಶೀಲಿಸಬೇಕು. ಭದ್ರತೆಗಾಗಿ ಇದನ್ನು ಮಾಡಲೇಬೇಕು ಎಂಬುದನ್ನು ರಾಜಕೀಯ ನಾಯಕರು ಪ್ರಾಮಾಣಿಕವಾಗಿ ಜನರಿಗೆ ವಿವರಿಸಬೇಕು. ಅವರು ಜನರನ್ನು ನೇರವಾಗಿ ಎದುರು ನೋಡಿ, ‘ನಾವು ಸುರಕ್ಷಿತವಾಗಿರಲು ಇದು ಅಗತ್ಯ’ ಎಂದು ಹೇಳಬೇಕು ಎಂದಿದ್ದಾರೆ.


