
Russia Ukraine War: 13ನೇ ದಿನಕ್ಕೆ ಕಾಲಿಟ್ಟ ಯುದ್ಧ: ಬಂದರು ನಗರಗಳಿಗೆ ನುಗ್ಗಿದ ರಷ್ಯಾ ನೌಕಾಪಡೆ!
*ಭೂಮಿ, ಆಗಸ, ಸಮುದ್ರ ಮೂರೂ ಕಡೆಯಿಂದ ದಾಳಿ
*ಯಾವುದೇ ಕ್ಷಣದಲ್ಲಿ ಉಕ್ರೇನ್ ರಾಜಧಾನಿ ಕೀವ್ ವಶ
*13ನೇ ದಿನವೂ ಬಾಂಬ್, ಕ್ಷಿಪಣಿ, ಶೆಲ್‌ಗಳ ಸುರಿಮಳೆ
ಕೀವ್ (ಮಾ. 08): ಕಳೆದ ಹದಿಮೂರು ದಿನಗಳಿಂದ ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ ಮಂಗಳವಾರ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಸಮುದ್ರ, ನೆಲ ಹಾಗೂ ವಾಯು- ಹೀಗೆ ಮೂರೂ ಮಾರ್ಗಗಳಿಂದ ದಾಳಿ ನಡೆಸುತ್ತಿದ್ದು, ಪಶ್ಚಿಮ ಉಕ್ರೇನ್ ಹೊರತುಪಡಿಸಿ ಮಿಕ್ಕೆಲ್ಲ ಭಾಗಗಳಲ್ಲಿ ಸೇನಾ ಪ್ರದೇಶ ಮತ್ತು ಜನವಸತಿ ಪ್ರದೇಶಗಳ ಮೇಲೆ ಬಾಂಬ್, ಕ್ಷಿಪಣಿ ಹಾಗೂ ಶೆಲ್‌ಗಳ ಮಳೆಗರೆಯತೊಡಗಿದೆ. ಅಂತಿಮ ಹಾಗೂ ನಿರ್ಣಾಯಕ ದಾಳಿಗೆ ಸಿದ್ಧವಾಗುತ್ತಿದ್ದು, ಯಾವುದೇ ಕ್ಷಣದಲ್ಲಿ ಉಕ್ರೇನ್‌ನ ರಾಜಧಾನಿ ಕೀವ್ ನಗರವನ್ನು ವಶಪಡಿಸಿಕೊಳ್ಳಲು ಸನ್ನದ್ಧವಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ರಷ್ಯಾಗೆ ಮತ್ತೊಂದು ಶಾಕ್ ಕೊಡಲು ಮುಂದಾದ ಅಮೆರಿಕ, ಇಯು!
ಈ ನಡುವೆ ರಷ್ಯಾ ಸೈನಿಕರ ವಿರುದ್ಧ ಬೀದಿಗಿಳಿಯಿರಿ ಎಂದು ಉಕ್ರೇನ್ ಸರ್ಕಾರ ಕರೆ ನೀಡಿದೆ. ಆದರೆ ಪ್ರತೀಕಾರ ನಿಲ್ಲಿಸಿದರೆ ಮಾತ್ರ ಯುದ್ಧ ನಿಲ್ಲಿಸುತ್ತೇವೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎಚ್ಚರಿಸಿದ್ದಾರೆ. ರಾಜಧಾನಿ ಕೀವ್, ಉತ್ತರದ ಚೆರ್ನಿವ್, ದಕ್ಷಿಣದ ಮೈಕೋಲೈವ್, ಬಂದರು ನಗರಿ ಮರಿಯುಪೋಲ್ ಹಾಗೂ ದೇಶದ 2ನೇ ಅತಿದೊಡ್ಡ ನಗರ ಖಾರ್ಕೀವ್ ಸೇರಿದಂತೆ ಉಕ್ರೇನ್‌ನ ಬಹುತೇಕ ಎಲ್ಲಾ ನಗರಗಳ ಮೇಲೂ ಸೋಮವಾರ ರಷ್ಯಾದ ದಾಳಿ ತೀವ್ರಗೊಂಡಿದೆ.