Russia Ukraine War: ಉಕ್ರೇನ್‌ನ ಕರಾವಳಿ ಪ್ರದೇಶಕ್ಕೆ ನುಗ್ಗಿದ ರಷ್ಯಾ ಸೇನೆ: ಮರಿಯಾಪೌಲ್ ವಶಕ್ಕೆ
*ಬಂದರು ನಗರಿ ಮರಿಯುಪೋಲ್, ಒಡೆಸ್ಸಾ ವಶಕ್ಕೆ ನೌಕಾಪಡೆ ದೊಡ್ಡ ದಂಡು
*ಕರಾವಳಿ ನಗರಿ ಖೇರ್ಸನ್ ರಷ್ಯಾ ವಶಕ್ಕೆ, ಕೀವ್, ಖಾರ್ಕಿವ್‌ನಲ್ಲಿ ಭಾರೀ ದಾಳಿ
*ಉಕ್ರೇನ್‌ನ ದೊಡ್ಡ ನಗರಗಳ ವಶಕ್ಕೆ ಮುಂದುವರೆದ ರಷ್ಯಾ ಸೇನೆ ಹರಸಾಹಸ
ಕೀವ್/ಮಾಸ್ಕೋ (ಮಾ.4): ಉಕ್ರೇನ್‌ನ ಮಹಾನಗರಗಳನ್ನು ವಶಪಡಿಸಿಕೊಳ್ಳುವ ರಷ್ಯಾದ ಹರಸಾಹಸ ಯುದ್ಧ ಮುಂದುವರೆದಿದ್ದು, ಇದೀಗ ಪ್ರಮುಖ ಕರಾವಳಿ ನಗರುಗಳಿಗೆ ರಷ್ಯಾ ಸೇನೆ ಲಗ್ಗೆ ಇಟ್ಟಿದೆ. ಈ ದಿಸೆಯಲ್ಲಿ ರಷ್ಯಾ ಪಡೆಗಳು ಕಡಲ ನಗರಿ ಖಾರ್ಸನ್ ವಶಪಡಿಸಿಕೊಂಡಿವೆ. ಜೊತೆಗೆ ಇನ್ನೊಂದು ಕರಾವಳಿ ನಗರಿ ಮರಿಯುಪೋಲ್ ಅನ್ನು ವಶಪಡಿಸಿಕೊಂಡಿದ್ದು, ಒಡೆಸ್ಸಾ ನಗರದ ವಶಕ್ಕೆ ಯುದ್ಧ ನೌಕೆ ಮತ್ತು ರಾಕೆಟ್ ಬೋಟ್‌ಗಳೊಂದಿಗೆ ದಾಂಗುಡಿ ಇಟ್ಟಿದೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: ಉಕ್ರೇನ್‌ನ ರಾಜಧಾನಿ ಕೀವ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ಗುಂಡೇಟು: ಕೇಂದ್ರ ಸಚಿವ ವಿಕೆ ಸಿಂಗ್
ಉಳಿದಂತೆ ರಾಜಧಾನಿ ಕೀವ್, ಖಾರ್ಕಿವ್ ಸೇರಿದಂತೆ ಇತರೆ ನಗರಗಳ ಮೇಲೂ ದಾಳಿ ಮುಂದುವರೆದಿದೆಯಾದರೂ ಉಕ್ರೇನ್‌ನ ಸೇನಾ ಪಡೆಗಳು ತೀವ್ರ ಪ್ರತಿರೋಧ ಒಡ್ಡುತ್ತಿರುವ ಕಾರಣ ಭಾರೀ ಬೀದಿ ಕಾಳಗ ಮುಂದುವರೆದಿದೆ. ಈ ನಡುವೆ ರಷ್ಯಾ ತನ್ನ ದಾಳಿಗೆ ಸೂಕ್ತ ಬೆಲೆ ತೆರಬೇಕಾಗಿ ಬರಲಿದೆ ಎಂದು ಉಕ್ರೇನ್ ಅಧ್ಯಕ್ಷ ಜೆಲೆನ್‌ಸ್ಕಿ ಎಚ್ಚರಿಸಿದ್ದಾರೆ. ಮತ್ತೊಂದೆಡೆ ನಮ್ಮ ತಲೆಯಲ್ಲಿ ಪರಮಾಣು ದಾಳಿಯ ಯೋಚನೆ ಇಲ್ಲ, ಅದು ಪಾಶ್ಚಾತ್ಯ ದೇಶಗಳದ್ದು ಎಂದು ರಷ್ಯಾ ವಿದೇಶಾಂಗ ಸಚಿವ ಸೆರ್ಗೇಯ್ ಲಾವ್ರೋವ್ ಹೇಳಿದ್ದಾರೆ.