Russia Ukraine War: ಖಾರ್ಕೀವ್ ತೊರೆಯುವಂತೆ ಸೂಚನೆ: ಕಾಲ್ನಡಿಗೆಯಲ್ಲೇ ಗಡಿಯತ್ತ ಸಾಗಿದ ವಿದ್ಯಾರ್ಥಿಗಳು !
*ಉಕ್ರೇನ್ ಮೇಲೆ ದಾಳಿ ತೀವ್ರಗೊಳ್ಳುತ್ತಿದ್ದಂತೆ ರಕ್ಷಣಾ ಕಾರ್ಯ ಚುರುಕು
*ತಾತ್ಕಾಲಿಕವಾಗಿ ಉಕ್ರೇನ್ ತೊರೆಯುವಂತೆ ಭಾರತೀಯರಿಗೆ ಸೂಚನೆ
*ಕಾಲ್ನಡಿಗೆಯಲ್ಲೇ ಗಡಿಯತ್ತ ಸಾಗಿದ ವಿದ್ಯಾರ್ಥಿಗಳು
ಕೀವ್ (ಮಾ. 03): ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ‘ಆಪರೇಷನ್ ಗಂಗಾ’ ಕಾರ್ಯಾಚರಣೆ ನಡೆಸುತ್ತಿರುವ ಭಾರತ ಸರ್ಕಾರ, ತನ್ನ ಅವಿಶ್ರಾಂತ ಕಾಯಕ ಮುಂದುವರಿಸಿದೆ. ಈವರೆಗೆ 15 ವಿಮಾನಗಳಲ್ಲಿ 3389 ಜನರನ್ನು ಕರೆತರಲಾಗಿದೆ. ಇನ್ನು ರಷ್ಯಾ ದಾಳಿ ಭೀತಿಯ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಉಕ್ರೇನ್ ತೊರೆಯುವಂತೆ ಭಾರತೀಯ ನಾಗರಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉಕ್ರೇನ್‌ನ ಭಾರತೀಯ ರಾಯಭಾರಿ ಕಚೇರಿ ಸೂಚಿಸಿದೆ. ಸದ್ಯಕ್ಕೆ ಲಭ್ಯವಿರುವ ವಾಣಿಜ್ಯ ವಿಮಾನಗಳು ಅಥವಾ ಚಾರ್ಟರ್ ವಿಮಾನಗಳಲ್ಲಿ ಸ್ವದೇಶಕ್ಕೆ ಮರಳಲು ಸೂಚಿಸಲಾಗಿದೆ. ಹೀಗಾಗಿ ಕಾಲ್ನಡಿಗೆಯಲ್ಲೇ ವಿದ್ಯಾರ್ಥಿಗಳು ಗಡಿಯತ್ತ ಸಾಗಿದ್ದಾರೆ.
ಇದನ್ನೂ ಓದಿ: Operation Ganga: ದಾಳಿ ತೀವ್ರಗೊಳ್ಳುತ್ತಿದ್ದಂತೆ ರಕ್ಷಣಾ ಕಾರ್ಯ ಚುರುಕು: ಈವರೆಗೆ 3389 ಭಾರತೀಯರ ಏರ್‌ಲಿಫ್ಟ್!
‘ಉಕ್ರೇನ್‌ನಲ್ಲಿ ಅನಿಶ್ಚಿತ ಯುದ್ಧದ ವಾತಾವರಣ ಇರುವುದರಿಂದ ಅನಿವಾರ್ಯತೆ ಇಲ್ಲದವರು ತಾತ್ಕಾಲಿಕವಾಗಿ ಉಕ್ರೇನ್‌ನಿಂದ ಹಿಂದಿರುಗಿ. ಹೆಚ್ಚಿನ ಮಾಹಿತಿಗಾಗಿ ರಾಯಭಾರಿ ಕಚೇರಿಯ ಸಂಪರ್ಕದಲ್ಲಿರಿ. ರಾಯಭಾರಿ ಕಚೇರಿಯ ಫೇಸ್ಬುಕ್ ಮತ್ತು ಟ್ವೀಟರ್ ಖಾತೆಗಳನ್ನು ಫಾಲೋ ಮಾಡಿ’ ಎಂದು ರಾಯಭಾರ ಕಚೇರಿ ಟ್ವೀಟ್ ಮಾಡಿದೆ. ವಿಮಾನ ಟಿಕೆಟ್ ಸಿಗುತ್ತಿಲ್ಲ ಎಂದು ಹಲವರು ದೂರು ನೀಡಿದ್ದರಿಂದ ಭಾರತೀಯರ ಸಹಾಯಕ್ಕಾಗಿ ಕಂಟ್ರೋಲ್ ರೂಮ್ ಸ್ಥಾಪಿಸಲಾಗಿದೆ. 24 ಗಂಟೆ ಮಾಹಿತಿ ನೀಡುವಂತಹ ಸಹಾಯವಾಣಿಯನ್ನು ಸಹ ಸ್ಥಾಪಿಸಲಾಗಿದೆ.