Karnataka Politics: ಪ್ರಮುಖ ನಾಯಕರ ಜೊತೆ ದೆಹಲಿಗೆ ಹೋಗ್ತೀವಿ: ಡಿಕೆಶಿ
ಮೇಲ್ನೋಟಕ್ಕೆ ಎಲ್ಲ ಸರಿ ಇದ್ದಂತೆ ಕಂಡರೂ ರಾಜ್ಯ ಕಾಂಗ್ರೆಸ್‌ನಲ್ಲಿ ಒಳಬೇಗುದಿ ಇದೆ
- ಕೆಪಿಸಿಸಿ ಅಧ್ಯಕ್ಷರು, ವಿಪಕ್ಷ ನಾಯಕರ ಬೆಂಬಲಿಗರ ಮಧ್ಯೆ ಬಹಿರಂಗ ಭಿನ್ನಾಭಿಪ್ರಾಯವಿದೆ
- ಕಾಂಗ್ರೆಸ್ ಒಳಬೇಗುದಿ ಶಮನಕ್ಕೆ ಹೈಕಮಾಂಡ್ ಈಗ ನೇರ ಪ್ರವೇಶ
ಬೆಂಗಳೂರು (ಫೆ. 20): ಮೇಲ್ನೋಟಕ್ಕೆ ಎಲ್ಲ ಸರಿಯಿದ್ದಂತೆ ಕಂಡರೂ ಹೊಗೆಯಾಡುತ್ತಲೇ ಇರುವ ಕಾಂಗ್ರೆಸ್ ನಾಯಕರ ಒಳಬೇಗುದಿ ಪರಿಹಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ನೇರ ಪ್ರವೇಶ ಮಾಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಐದು ಮಂದಿ ಕಾರ್ಯಾಧ್ಯಕ್ಷರು ಸೇರಿದಂತೆ 15 ಮಂದಿ ರಾಜ್ಯ ನಾಯಕರಿಗೆ ದೆಹಲಿಗೆ ಬುಲಾವ್ ನೀಡಿದೆ ಎಂದು ತಿಳಿದುಬಂದಿದೆ.
'ದೆಹಲಿಗೆ 10-15 ನಾಯಕರು ಹೋಗುತ್ತಿದ್ದೇವೆ. ಕೆಪಿಸಿಸಿ ಅಧ್ಯಕ್ಷ ಆದಾಗಲೇ ಎಲ್ಲರನ್ನೂ ಕರೆದುಕೊಂಡು ಹೋಗಬೇಕಿತ್ತು. ಈಗ ಹೋಗುತ್ತಿದ್ದೇವೆ. ಹೈಕಮಾಂಡ್ ಜೊತೆ ಚರ್ಚೆ ನಡೆಸಲಿದ್ದೇವೆ' ಎಂದು ಡಿಕೆಶಿ ಹೇಳಿದ್ದಾರೆ. ಫೆ. 25ಕ್ಕೆ ದೆಹಲಿಗೆ ಆಗಮಿಸುವಂತೆ ರಾಜ್ಯ ನಾಯಕರಿಗೂ ಸೂಚನೆ ನೀಡಲಾಗಿದ್ದು, 25 ಅಥವಾ 26ಕ್ಕೆ ರಾಹುಲ್ ಗಾಂಧಿ ನೇರವಾಗಿ ಸಭೆ ನಡೆಸಬಹುದು.