ಇಂದಿನಿಂದ 3 ದಿನ ಬೆಂಗಳೂರು ಟೆಕ್‌ಶೃಂಗ ಸಭೆ, 300ಕ್ಕೂ ಹೆಚ್ಚು ಕಂಪನಿಗಳು, 5000 ನವೋದ್ಯಮ ಭಾಗಿ
- ಇಂದಿನಿಂದ ಬೆಂಗಳೂರು ಟೆಕ್ ಶೃಂಗ
- 3 ದಿನಗಳ ಹೈಬ್ರಿಡ್ ಶೃಂಗಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಚಾಲನೆ
- ಜಾಗತಿಕ ಮಟ್ಟದ 300ಕ್ಕೂ ಹೆಚ್ಚು ಕಂಪನಿಗಳು, 5000 ನವೋದ್ಯಮ ಭಾಗಿ
ಬೆಂಗಳೂರು (ನ. 17): ಬಹು ನಿರೀಕ್ಷಿತ ಬೆಂಗಳೂರು ತಂತ್ರಜ್ಞಾನ ಶೃಂಗ (ಬಿಟಿಎಸ್)ದ 24ನೇ ವರ್ಷದ ಸಮಾವೇಶ ಇಂದಿನಿಂದ ಆರಂಭವಾಗಲಿದೆ. ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಹೈಬ್ರಿಡ್ ಮಾದರಿಯಲ್ಲಿ ಮುಂದಿನ ಮೂರು ದಿನಗಳ ಕಾಲ ನಡೆಯಲಿರುವ ಈ ಸಮಾವೇಶಕ್ಕೆ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಚಾಲನೆ ನೀಡಲಿದ್ದಾರೆ.
‘ಡ್ರೈವಿಂಗ್ ದಿ ನೆಕ್ಸ್ಟ್’ ಘೋಷವಾಕ್ಯದಡಿ ನಡೆಯಲಿರುವ ಬಿಟಿಎಸ್-2021ರಲ್ಲಿ 30ಕ್ಕೂ ಹೆಚ್ಚು ದೇಶಗಳು ಭಾಗವಹಿಸುತ್ತಿವೆ. ಜಾಗತಿಕ ಮಟ್ಟದ 300 ಕ್ಕೂ ಹೆಚ್ಚು ಕಂಪನಿಗಳು ಮತ್ತು 5 ಸಾವಿರಕ್ಕೂ ಹೆಚ್ಚು ನವೋದ್ಯಮಗಳು, ವಾಣಿಜ್ಯ ವಲಯದ 20 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ವರ್ಚುವಲ್ ರೂಪದಲ್ಲಿ 5 ಲಕ್ಷಕ್ಕೂ ಹೆಚ್ಚು ಆಸಕ್ತರು ಈ ಶೃಂಗದಲ್ಲಿ ಭಾಗವಹಿಸಲಿದ್ದಾರೆ ಎಂದು ಐಟಿ-ಬಿಟಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.