ರಾಘವೇಂದ್ರ ಸ್ವಾಮಿ 352ನೇ ಆರಾಧನೆ ಮಹೋತ್ಸವ: ಮಂತ್ರಾಲಯದಲ್ಲಿ ರಾಯರ ಭಕ್ತರ ಸಂಭ್ರಮವೋ ಸಂಭ್ರಮ
ಮಂತ್ರಾಲಯದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವ ಸಂಭ್ರಮ ಮನೆ ಮಾಡಿದೆ. ಸಪ್ತರಾತ್ರೋತ್ಸವದ ಸಂಭ್ರಮದ ನಿಮಿತ್ಯವಾಗಿ ಪೂರ್ವಾರಾಧನೆ ಆಚರಣೆ ಆರಂಭವಾಗಿದೆ. ನಾನಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ರಾಯರ ಆರಾಧನೆ ಕಳೆಕಟ್ಟುತ್ತಿದೆ.
ಮಂತ್ರಾಲಯದಲ್ಲಿ ಈಗ ಸಂಭ್ರಮವೋ ಸಂಭ್ರಮ.. ತುಂಗಾ ತಟದಲ್ಲಿ ರಾಯರ ಆರಾಧನಾ ಮಹೋತ್ಸವ(Aradhana Mahotsava) ಕಳೆಗಟ್ಟಿದೆ. ಗುರು ರಾಘವೇಂದ್ರ ಸ್ವಾಮಿ 352ನೇ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಇಂದು ಪೂರ್ವಾರಾಧನೆಯ ಸಡಗರವಿದ್ದು, ಬೆಳಗ್ಗೆಯಿಂದಲೇ ನಾನಾ ಪೂಜಾ ಕೈಂಕರ್ಯಗಳು ಆರಂಭಗೊಂಡಿವೆ. ಗುರುವಾರ ವಿಶೇಷವಾಗಿ ನಿರ್ಮಾಲ್ಯ ವಿಸರ್ಜನ, ಉತ್ಸವ ರಾಯರ ಪಾದಪೂಜೆ, ಪಂಚಾಮೃತ ಅಭಿಷೇಕ, ಅಲಂಕಾರ ಸಂತರ್ಪಣೆ, ಹಸ್ತೋದಕ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ನಡೆಯಿತು. ಇದೇ ಮೊದಲ ಬಾರಿಗೆ ತಮಿಳುನಾಡಿನ ಶ್ರೀರಂಗಂನ ಶ್ರೀ ರಂಗನಾಥ ದೇವಸ್ಥಾನದಿಂದ ಮತ್ತು ಆಂಧ್ರಪ್ರದೇಶದ ಅಹೋಬಲ ಕ್ಷೇತ್ರದಿಂದ ಬಂದ ಶೇಷವಸ್ತ್ರವನ್ನ ರಾಯರಿಗೆ ಅರ್ಪಿಸಲಾಯ್ತು. ಪೂರ್ವಾರಾಧನೆ ಆಗಮಿಸಿದ ಆಂಧ್ರಪ್ರದೇಶದ ರಾಜ್ಯಪಾಲರಾದ ನ್ಯಾ. ಅಬ್ದುಲ್ ನಜೀರ್ ಶ್ರೀಮಠದ ಸಂಪ್ರದಾಯದಂತೆ ವೇಷಧರಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ(Raghavendra Swamy) ದರ್ಶನ ಪಡೆದರು.ಆ ಬಳಿಕ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ವಾನ್ ರಾಮವಿಠಲಾಚಾರ್ಯ, ವಿದ್ವಾನ್ ಡಾ.ಗರಿಕಿಪಾಟಿ ನರಸಿಂಹರಾವ್ , ಎನ್. ಚಂದ್ರಶೇಖರನ್, ವಿಶ್ವನಾಥ ಕರಾಡ್ ಅವರಿಗೆ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ನೀಡಿ ಸನ್ಮಾನಿಸಲಾಯ್ತು.
ಇದನ್ನೂ ವೀಕ್ಷಿಸಿ: Today Horoscope: ಇಂದು ರಾಯರ 352ನೇ ಆರಾಧನಾ ಮಹೋತ್ಸವ..ಈ ರೀತಿಯಾಗಿ ಮನೆಯಲ್ಲೇ ಪೂಜಿಸಿ