
ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಇಡಿ ಬಿಸಿ
ಮುಡಾ ಭೂ ಹಗರಣ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಹಾಗೂ ಸಚಿವ ಬೈರತಿ ಸುರೇಶ್‌ಗೆ ಇಡಿ ನೋಟಿಸ್ ಜಾರಿ. ಇಡಿ ತನಿಖೆಗೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಭೂತ ಬಿಟ್ಟೂ ಬಿಡದಂತೆ ಕಾಡುತ್ತಿದೆ. ಈಗಾಗಲೇ ಲೋಕಾಯುಕ್ತ ಇಲಾಖೆಯಿಂದ ತನಿಖೆಯನ್ನು ಮುಗಿಸಿ ವರದಿಯನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಿದೆ. ಆದರೆ, ಕೇಂದ್ರ ಸರ್ಕಾರದ ಅಧೀನದ ಜಾರಿ ನಿರ್ದೇಶನಾಲಯ (ಇ.ಡಿ) ತನ್ನ ತನಿಖೆಯನ್ನು ಇನ್ನಷ್ಟು ತೀವ್ರ ಗೊಳಿಸಿದೆ.
ಈ ಮೂಲಕ ಒಂದೊಂದೇ ಹೆಜ್ಜೆಯನ್ನಿಡುತ್ತಾ ತನಿಖೆ ಆರಂಭಿಸಿದ್ದ ಇ.ಡಿ ಇದೀಗ ಸಿಎಂ ಸಿದ್ದರಾಮಯ್ಯ ಅವರ ಬುಡಕ್ಕೆ ಬಂದಿದೆ. ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಇಡಿ ನೋಟೀಸ್ ನೀಡಿತ್ತು. ಆದರೆ, ಇ.ಡಿ ನೋಟೀಸ್ ನೀಡಿದ ಬೆನ್ನಲ್ಲಿಯೇ ಇಬ್ಬರೂ ಎದ್ನೋ ಬಿದ್ನೋ ಅಂತಾ ಇ.ಡಿ ತನಿಖೆಗೆ ತಡೆ ನೀಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯ ಇದೀಗ ಫೆ.10ರವರೆಗೆ ಜಾರಿ ನಿರ್ದೇಶನಾಲಯದ ತನಿಖೆಗೆ ತಾತ್ಕಾಲಿಕ ತಡೆಯನ್ನು ನೀಡಿದೆ. ಈ ಮೂಲಕ ಪಾರ್ವತಿ ಸಿದ್ದರಾಮಯ್ಯ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.