ಜಸ್ಟೀಸ್‌ ಫಾರ್‌ ಸೌಜನ್ಯಾ ಕೇಸಿಗೆ ಮಣಿಯುತ್ತಾ ಸರ್ಕಾರ.! ನಾಲ್ವರ ವಿರುದ್ಧ ಮರು ತನಿಖೆ ನಡೆಯುತ್ತಾ.?

ಕರ್ನಾಟಕ ಕರಾಳ ಘಟೆಯಾದ ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು ನಾಲ್ವರ ವಿರುದ್ಧ ಮರು ತನಿಖೆ ಮಾಡುವಂತೆ ಜನರು ಹೋರಾಟ ಆರಂಭಿಸಿದ್ದಾರೆ. ಇದಕ್ಕೆ ಸರ್ಕಾರ ಮಣಿಯುತ್ತಾ ನೋಡಬೇಕಿದೆ. 

First Published Aug 7, 2023, 4:37 PM IST | Last Updated Aug 7, 2023, 4:37 PM IST

ಬೆಂಗಳೂರು (ಆ.07): ಕಳೆದ 11 ವರ್ಷಗಳ ಹಿಂದೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ರಾಜ್ಯದಲ್ಲಿ ಮತ್ತೆ ಹೋರಾಟದ ಕಿಚ್ಚು ಹೊತ್ತಿಸಿದೆ. ಆರೋಪಿಯಾಗಿದ್ದ ಸಂತೋಷ್‌ರಾವ್‌ ಅವರನ್ನು ಸಿಬಿಐ ಕೋರ್ಟ್‌ ನಿರ್ದೋಷಿ ಎಂದು ಬಿಡುಗಡೆ ಮಾಡಿದೆ. ಹಾಗಾದರೆ ಸೌಜನ್ಯಾಳನ್ನು ಕೊಂದವರು ಯಾರು ಎಂಬ ಪ್ರಶ್ನೆಗೆ ಈವರೆಗೂ ಉತ್ತರ ಸಿಕ್ಕಿಲ್ಲ. ಮಗಳನ್ನು ಕಳೆದುಕೊಂಡ ಕುಟುಂಬಕ್ಕೆ ಈವರೆಗೂ ನ್ಯಾಯ ಸಿಕ್ಕಿಲ್ಲ. ಮಾನಸಿಕ ಅಸ್ವಸ್ಥರನ್ನು ಈ ಕೇಸ್‌ನಲ್ಲಿ ಸಿಕ್ಕಿಸಲಾಗಿತ್ತು ಎನ್ನುವ ಆರೋಪ ಮಾಡುತ್ತಿರುವ ಜನ ಬೊಟ್ಟು ಮಾಡುತ್ತಿರುವುದು ಶ್ರೀ ಕ್ಷೇತ್ರ ಧರ್ಮಸ್ಥಳದತ್ತ ಎನ್ನುವುದು ಈಗಿನ ವಿಚಾರವಾಗಿದೆ. 

ಜನರು ಬೊಟ್ಟು ಮಾಡುತ್ತಿರುವ ವ್ಯಕ್ತಿಗಳು ಯಾರು?:  ಧರ್ಮಸ್ಥಳ ದೇವಸ್ಥಾನದ ಕಚೇರಿ ಸಿಬ್ಬಂದಿ ಮಲ್ಲಿಕ್‌ ಜೈನ್, ಧರ್ಮಸ್ಥಳದ ಆವರಣದಲ್ಲಿನ ಅಂಗಡಿ ಮಾಲೀಕ ಧೀರಜ್‌ ಜೈನ್‌, ಧರ್ಮಸ್ಥಳದಲ್ಲಿ ಆಟೋ ಡ್ರೈವರ್‌ ಆಗಿದ್ದ ಉದಯ್‌ ಜೈನ್‌ ಹಾಗೂ ವೀರೇಂದ್ರ ಹೆಗ್ಗಡೆ ಅವರ ತಮ್ಮನ ಮಗ ನಿಶ್ಚಲ್‌ ಜೈನ್‌ ವಿರುದ್ಧ ಮರುತನಿಖೆಗೆ ಆಗ್ರಹ ವ್ಯಕ್ತವಾಗುತ್ತಿದೆ. ಆದರೆ, ಈ ನಾಲ್ವರ ವಿರುದ್ಧ ಸಿಬಿಐ ಮತ್ತು ಸಿಐಡಿ ತನಿಖೆಯಲ್ಲಿಯೂ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಆದರೆ, ಜನರು ಈ ನಾಲ್ವರ ವಿರುದ್ಧ ಬೊಟ್ಟು ಮಾಡಿ ಮರು ತನಿಖೆ ಮಾಡುವಂತೆ ಸರ್ಕಾರದ ವಿರುದ್ಧ ಒತ್ತಡ ಹೇರುತ್ತಿದ್ದಾರೆ. ಮತ್ತೊಂದೆಡೆ, ಸೌಜನ್ಯ ಪ್ರಕರಣದಲ್ಲಿ ಸ್ಥಳೀಯ ಪೊಲೀಸರ ಎಡವಟ್ಟುಗಳಿಂದ ಪ್ರಕರಣದ ಹಾದಿ ತಪ್ಪಿದೆ ಎಂದು ಆಗ್ರಹಿಸುತ್ತಿದ್ದಾರೆ. ಈಗ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತಿದೆ ಎಂಬುದನ್ನು ಕಾದು ನೋಡಬೇಕಿದೆ.