
ಡೆತ್‌ನೋಟ್ ವೆಬ್ ಸೀರೀಸ್ ನೋಡಿದ ಗಾಯಕಿ ಮಗ; ಗುಡ್‌ಬೈ ಅಮ್ಮಾ ಎಂದು ಪತ್ರ ಬರೆದಿಟ್ಟು ಜೀವಬಿಟ್ಟ!
ಜಪಾನೀಸ್ ಸರಣಿ 'ಡೆತ್ ನೋಟ್'ನಿಂದ ಪ್ರೇರಿತನಾಗಿ, 14 ವರ್ಷದ ಬಾಲಕನೊಬ್ಬ 'ಗುಡ್ ಬೈ ಅಮ್ಮ' ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಬೆಂಗಳೂರಿನ ಕುಂಬಾರಹಳ್ಳಿಯಲ್ಲಿ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು (ಆ.08): 'ಡೆತ್ ನೋಟ್' ಎಂಬ ಜಪಾನೀಸ್ ಸರಣಿಯಿಂದ ಪ್ರೇರಿತನಾಗಿ, 'ಗುಡ್ ಬೈ ಅಮ್ಮ' ಎಂದು ಡೆತ್ ನೋಟ್ ಬರೆದಿಟ್ಟು 14 ವರ್ಷದ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ವರದಿಯಾಗಿದೆ. ಈ ಘಟನೆಯು ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಬಾರಹಳ್ಳಿಯ ವಿನಾಯಕ ಲೇಔಟ್‌ನಲ್ಲಿ ನಡೆದಿದೆ.
ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡ ಬಾಲಕ ಅಮೋಘ ಕೀರ್ತಿ (14). ಇತ್ತೀಚೆಗೆ ಈತ ಜಪಾನೀಸ್ ಸರಣಿ 'ಡೆತ್ ನೋಟ್'ಗೆ ಆಕರ್ಷಿತನಾಗಿದ್ದನು ಎಂದು ತಿಳಿದುಬಂದಿದೆ. ಆ ಸರಣಿಯಲ್ಲಿ, ಡೆತ್ ನೋಟ್ ಎಂಬ ಪುಸ್ತಕದಲ್ಲಿ ಯಾರ ಹೆಸರನ್ನು ಬರೆದರೂ ಅವರು ಸಾಯುತ್ತಾರೆ. ಈ ಪುಸ್ತಕದ ಮಾಲೀಕನಿಗೆ ಮಾತ್ರ ಅದರ ಮೇಲೆ ನಿಯಂತ್ರಣವಿರುತ್ತದೆ ಮತ್ತು ಅಪರಾಧಿಗಳನ್ನು ಶಿಕ್ಷಿಸಲು ಇದನ್ನು ಬಳಸಲಾಗುತ್ತದೆ ಎಂಬ ಕಥಾವಸ್ತು ಇದೆ. ಸರಣಿಯ ಪ್ರಭಾವದಿಂದಲೇ ಅಮೋಘ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಆತ ಬರೆದಿಟ್ಟಿರುವ ಪತ್ರದಲ್ಲಿ, 'ಗುಡ್ ಬೈ ಅಮ್ಮ, ಯಾರೆಲ್ಲಾ ಈ ಪತ್ರ ಓದುತ್ತಿದ್ದೀರಾ ಅಳಬೇಡಿ. ನಾನು ಈಗಾಗಲೇ ಸ್ವರ್ಗದಲ್ಲಿದ್ದೇನೆ. ನನ್ನಿಂದ ನೀವು ನೊಂದಿದ್ದೀರಿ. ನಾನು ನಿಮಗೆ ತೊಂದರೆ ನೀಡಿದ್ದೇನೆ. ನನ್ನ ಮೇಲೆ ಕೋಪ ಇದ್ದರೆ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ನನ್ನ ತಪ್ಪುಗಳನ್ನ ದಯವಿಟ್ಟು ಕ್ಷಮಿಸಿ. ನಾನು ಬದುಕಿದ್ದ 14 ವರ್ಷವನ್ನ ಖುಷಿಯಲ್ಲಿ ಕಳೆದಿದ್ದೇನೆ. ನನ್ನ ಶಾಲಾ ಸ್ನೇಹಿತರನ್ನು ಪ್ರೀತಿಸುತ್ತಿದ್ದೆ. ಅವರಿಗೆ ಈ ವಿಷಯ ತಿಳಿಸಿ. ಐ ಮಿಸ್ ಯೂ ಆಲ್, ಗುಡ್ ಬೈ ಅಮ್ಮ...' ಎಂದು ಬರೆದಿದ್ದಾನೆ.
ಈ ಘಟನೆಯು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಮಕ್ಕಳು ನೋಡುವ ಸರಣಿಗಳು ಮತ್ತು ಆನ್‌ಲೈನ್ ವಿಷಯಗಳ ಬಗ್ಗೆ ಪೋಷಕರು ಹೆಚ್ಚಿನ ಗಮನ ಹರಿಸುವ ಅವಶ್ಯಕತೆಯನ್ನು ಈ ಘಟನೆ ಒತ್ತಿಹೇಳುತ್ತದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.