Asianet Suvarna News Asianet Suvarna News

ರಾಜ್ಯ ರಾಜಕೀಯದಲ್ಲಿ Bitcoin ಬಿರುಗಾಳಿ, ಶ್ರೀಕಿ ಜೊತೆ ಕೈ ನಾಯಕರ ಮಕ್ಕಳು!

Nov 11, 2021, 10:14 AM IST
  • facebook-logo
  • twitter-logo
  • whatsapp-logo

ಬೆಂಗಳೂರು(ನ.11): ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡಿದ್ದ ಬಿಟ್‌ಕಾಯಿನ್ ಹಗರಣ ಸದ್ಯ ಬಿರುಗಾಳಿಯನ್ನೇ ಎಬ್ಬಿಸಿದೆ. ಹೌದು ಈ ಹಗರಣ ರಾಜಕಾರಣಗಳಲ್ಲಿ ನಡುಕ ಸೃಷ್ಟಿಸಿದೆ. ಈ ಸಂಬಂಧ ತನಿಖೆ ಮುಂದುವರೆದಿದ್ದು, ಅಂತಾರಾ‍ಷ್ಟ್ರೀಯ ಹ್ಯಾಕರ್ ಶ್ರೀಕಿ ಜೊತೆ ಯಾರಿಗೆಲ್ಲ ಸಂಪರ್ಕವಿತ್ತೆಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. 

ಹೌದು ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿಗೆ ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎನ್‌.ಎ.ಹ್ಯಾರಿಸ್‌ ಪುತ್ರ ಹಾಗೂ ಹಾವೇರಿಯ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರನ ಜತೆ ಆಪ್ತ ಸ್ನೇಹವಿತ್ತು ಎಂಬ ಸಂಗತಿ ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಎರಡು ಪ್ರತ್ಯೇಕ ಆರೋಪಪಟ್ಟಿಗಳಲ್ಲಿ ಈ ಅಂಶ ಉಲ್ಲೇಖವಾಗಿದೆ.

ಹ್ಯಾರಿಸ್‌ ಪುತ್ರ ಉಮರ್‌ ನಲಪಾಡ್‌ ಹಾಗೂ ರುದ್ರಪ್ಪ ಲಮಾಣಿ ಪುತ್ರ ದರ್ಶನ್‌ ಲಮಾಣಿ ಜತೆ ಆತ್ಮೀಯ ಒಡನಾಟ ಹೊಂದಿದ್ದ ಶ್ರೀಕಿ, ಈ ನಾಯಕರ ಮಕ್ಕಳ ಜತೆ ಹಣಕಾಸು ವ್ಯವಹಾರ ಸಹ ಹೊಂದಿದ್ದ. ಅಲ್ಲದೆ, 2018ರಲ್ಲಿ ಉಮರ್‌ನ ಸೋದರ ಮೊಹಮ್ಮದ್‌ ನಲಪಾಡ್‌ ವಿರುದ್ಧ ದಾಖಲಾಗಿದ್ದ ಯುಬಿ ಸಿಟಿ ಪಬ್‌ ಗಲಾಟೆ ಪ್ರಕರಣದಲ್ಲಿ ಶ್ರೀಕಿ ಆರೋಪಿಯಾಗಿದ್ದ. ಹಾಗೆಯೇ 2020ರಲ್ಲಿ ರುದ್ರಪ್ಪ ಲಮಾಣಿ ಪುತ್ರ ದರ್ಶನ್‌ ಲಮಾಣಿ ಬಂಧಿತನಾಗಿದ್ದ ಡ್ರಗ್ಸ್‌ ಕೇಸ್‌ನಲ್ಲಿ ಶ್ರೀಕಿಯನ್ನು ಸಿಸಿಬಿ ಬಂಧಿಸಿತ್ತು. ಈ ಬಗ್ಗೆ ನ್ಯಾಯಾಲಯಕ್ಕೆ ಸಿಸಿಬಿ ಸಲ್ಲಿಸಿರುವ ಆರೋಪ ಪಟ್ಟಿಗಳಲ್ಲಿ ಕೂಡ ಉಲ್ಲೇಖವಾಗಿದೆ. ಈ ಮೂಲಕ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ರಾಜಕೀಯ ವಾಗ್ದಾಳಿ ಮತ್ತೊಂದು ಮಜಲು ಪಡೆಯುವ ಸಾಧ್ಯತೆಗಳಿವೆ.