BIG3: ಚಿನ್ನದ ಪದಕ ಗೆಲ್ಲೋ ಸ್ಫೂರ್ತಿ ಚಿವುಟಿದ ಕತ್ತಲೆಯ ಜಿಲ್ಲಾ ಕ್ರೀಡಾಂಗಣ: ಟಾರ್ಚ್‌ ಹಿಡಿದು ರನ್ನಿಂಗ್‌ ಅಭ್ಯಾಸ

ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಆಸೆಯಿಂದ ಅಭ್ಯಾಸ ಮಾಡುವ ಕ್ರೀಡಾಪಟುಗಳಿಗೆ ವಿಜಯಪುರ ಜಿಲ್ಲಾಡಳಿತ ಮೈದಾನಕ್ಕೆ ಬೆಳಕಿನ ವ್ಯವಸ್ಥೆಯನ್ನೇ ಮಾಡಿಲ್ಲ.

First Published Aug 3, 2023, 6:38 PM IST | Last Updated Aug 3, 2023, 6:38 PM IST

ವಿಜಯಪುರ (ಆ.03): ನಮ್ಮ ದೇಶದಲ್ಲಿ 135 ಕೋಟಿ ಜನಸಂಖ್ಯೆಯಿದೆ ಕ್ರೀಡೆಯಲ್ಲಿ ಬೆರಳೆಣಿಕೆಯಷ್ಟೂ ಪದಕ ಗೆಲ್ಲೋರಿಲ್ಲ ಎಂದು ನಾವು ಮನಸ್ಸಿನಲ್ಲಿಯೇ ಕೊರಗುತ್ತೇವೆ. ಆದರೆ, ಕ್ರೀಡೆಗೆ ಪ್ರೋತ್ಸಾಹ ಕೊಡಬೇಕಾದ ಸರ್ಕಾರ ಮತ್ತು ಸರ್ಕಾರದ ಪ್ರತಿನಿಧಿಗಳು ಕ್ರೀಡೆಗೆ ಮೀಸಲಿಟ್ಟ ಹಣದಲ್ಲಿಯೂ ಭ್ರಷ್ಟಾಚಾರ ಮಾಡಿ ಕ್ರೀಡಾಪಟುಗಳ ಸ್ಫೂರ್ತಿಯನ್ನೇ ಚಿವುಟಿ ಹಾಕುತ್ತಿದ್ದಾರೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಚಿನ್ನದ ಪದಕವನ್ನು ಗೆಲ್ಲಬೇಕೆಂದರೆ ನಿದ್ದೆ, ಊಟ, ಐಷಾರಾಮಿ ಜೀವನ ಸೇರಿ ಎಲ್ಲವನ್ನೂ ತ್ಯಾಗ ಮಾಡಬೇಕಾಗುತ್ತದೆ. ಇಷ್ಟೆಲ್ಲಾ ತ್ಯಾಗ ಮಾಡಿದ ನಂತರವೂ ದಿನಕ್ಕೆ ಏಳೆಂಟು ಗಂಟೆಗಳ ಕಾಲ ಅಭ್ಯಾಸ ಮಾಡಬೇಕಾಗುತ್ತದೆ. ಆದ್ದರಿಂದ, ಬಿಸಿಲ ನಾಡು ವಿಜಯಪುರದಲ್ಲಿ ಮಧ್ಯಾಹ್ನದ ಅವಧಿ ಅಭ್ಯಾಸ ಮಾಡಲು ಸಾಧ್ಯವಿಲ್ಲವೆಂದು ಬೆಳಗ್ಗೆ 4 ಗಂಟೆ ಹಾಗೂ ರಾತ್ರಿ 8 ಗಂಟೆ ನಂತರ ಅಭ್ಯಾಸ ಮಾಡುವುದಕ್ಕೆ ಜಿಲ್ಲಾ ಕ್ರೀಡಾಂಗಣಕ್ಕೆ ಬಂದರೆ ಇಲ್ಲಿ ಪ್ರಾಣಕ್ಕೇ ಕುತ್ತು ಬರುವ ಸ್ಥಿತಿಯಿದೆ. ಕ್ರೀಡಾಂಗಣಕ್ಕೆ ಫ್ಲಡ್‌ ಲೈಟ್‌ ಹಾಕುವುದಾಗಿ ಹಣ ಬಿಲ್‌ ಮಾಡಿಸಿಕೊಳ್ಳುವ ಅಧಿಕಾರಿಗಳು ಈವರೆಗೂ ಲೈಟ್‌ ಹಾಕಿಲ್ಲ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಕ್ರೀಡಾ ಅಧಿಕಾರಿಗಳು ಮಾತ್ರ ಒಂದಿನಿತೂ ತಲೆ ಕೆಡಿಸಿಕೊಳ್ಳದೇ ನಿರ್ಲಕ್ಷ್ಯ  ಮಾಡುತ್ತಿದ್ದಾರೆ.