'ಕರಿ ಹೈದ ಕೊರಗಜ್ಜ' ಚಿತ್ರೀಕರಣ ವೇಳೆ ನಡೆಯಿತು ಪವಾಡ: ಚಿತ್ರತಂಡದಿಂದ ಕೊರಗಜ್ಜ ದೇವಾಲಯ ನಿರ್ಮಾಣ !
'ಕರಿ ಹೈದ ಕೊರಗಜ್ಜ' ಚಿತ್ರೀಕರಣದ ವೇಳೆ ನಡೆದ ಪವಾಡ
ಚಿತ್ರೀಕರಣಕ್ಕೆ ಉಂಟಾಯ್ತು ಸತತ ಅಡ್ಡಿ ಆತಂಕಗಳು
ಚಿತ್ರತಂಡದಿಂದ ಕೊರಗಜ್ಜ ದೇವಾಲಯ ನಿರ್ಮಾಣ
ಇತ್ತೀಚೆಗೆ 'ಕರಿ ಹೈದ ಕೊರಗಜ್ಜ' ಹೆಸರಿನ ಸಿನಿಮಾ ಸೆಟ್ಟೇರಿದೆ. ಆದರೆ ಈ ಸಿನಿಮಾದ ಚಿತ್ರೀಕರಣಕ್ಕೆ ಹಲವು ಬಗೆಯ ಅಡೆ-ತಡೆಗಳಾದ್ದರಿಂದ ಚಿತ್ರತಂಡವು ಗುಳಿಗನ ಮೊರೆ ಹೋಗಿದೆ. ಇನ್ನೂ ಚಿತ್ರೀಕರಣದ ವೇಳೆ ಅನೇಕ ಪವಾಡಗಳು ಗೋಚರಕ್ಕೆ ಬಂದ ವಿಷಯ ಕಲಾವಿದರಾದ ಕಬೀರ್ ಬೇಡಿ, ಶ್ರುತಿ, ಭವ್ಯ ಮೊದಲಾದವರನ್ನೊಳಗೊಂಡ ಚಿತ್ರ ತಂಡ ಈಗಾಗಲೇ ತಮ್ಮ ಅನುಭವವನ್ನು ಹಂಚಿಕೊಂಡಿತ್ತು. ಆದರೆ ಮತ್ತೊಂದು ಕುತೂಹಲ ದ ವಿಚಾರವು ಇದುವರೆಗೂ ನಿಗೂಢವಾಗಿತ್ತು. ಇದು ಘಟಿಸಿದ್ದು ಚಿತ್ರೀಕರಣದ ಆರಂಭಕ್ಕೂ ಮೊದಲು ಪುತ್ತೂರಿನಲ್ಲಿ ಸೆಟ್ ವಿರ್ಮಾಣದ ವೇಳೆ. ಕೆಲಸಗಾರರು ಸೆಟ್ ನಿರ್ಮಾಣದ ವೇಳೆ ಯಾವುದೋ ಆವೇಶ ಬಂದಂತವರಾಗಿ ಅಲ್ಲಲ್ಲೇ ಮೂರ್ಛೆ ಹೋಗತೊಡಗಿದರು. ಸ್ಥಳೀಯರು ಅರಶಿನ ನೀರನ್ನು ಪ್ರೋಕ್ಷಿಸಿ , ಕೆಲವರನ್ನು ಅಲ್ಲಿನ ಆಸ್ಪತ್ರೆಗೂ ಸೇರಿಸಲಾಯಿತು. ನಂತರ ಆ ಪ್ರದೇಶದಲ್ಲಿ ಯಾರೂ ಸೆಟ್ ಕೆಲಸ ಮಾಡಲು ಮುಂದೆ ಬರಲಿಲ್ಲ. ಸೆಟ್ ಹಾಕಲಿದ್ದ ಆ ಜಾಗವು ಕರಾವಳಿಯ ಉಗ್ರ ರೂಪದ ದೈವ "ಗುಳಿಗ"ನ ಸ್ಥಳ ವೆಂದು ಸ್ಥಳೀಯರು ತಿಳಿಸಿದರು. ಕೂಡಲೇ ನಿರ್ದೇಶಕರು ದೈವಕ್ಕೆ ಗುಡಿ ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾಗಿ, ಚಿತ್ರದ ಎಡಿಟಿಂಗ್ ಕೆಲಸ ಮುಗಿದ ಕೂಡಲೇ, ದೈವಸ್ಥಾನದ ಪ್ರತಿಷ್ಟಾ ಕಾರ್ಯ ಮುಗಿಸಿದರು. ಅಲ್ಲದೇ ಗುಳಿಗ ಹಾಗೂ ಕಲ್ಲುರ್ಟಿ ದೈವಗಳಿಗೆ ಅದ್ದೂರಿಯ ಕೋಲ ಸೇವೆಯನ್ನು ನಿರ್ದೇಶಕರು ನಡೆಸಿದರು.