
ದರ್ಶನ್ ಫ್ಯಾನ್ಸ್ ಬೆದರಿಕೆ: 'ನಾನ್ ಯಾವ ನನ್ ಮಗನಿಗೂ ಹೆದರಲ್ಲ' ನಟಿ ರಮ್ಯಾ!
ದರ್ಶನ್ ಪ್ರಕರಣದ ಬೆನ್ನಲ್ಲೇ ನಟಿ ರಮ್ಯಾ ಮತ್ತು ಪ್ರಥಮ್‌ಗೆ ಬೆದರಿಕೆಗಳು ಬಂದಿವೆ. ರಮ್ಯಾ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಪ್ರಥಮ್‌ಗೆ ಡ್ರಗರ್ ತೋರಿಸಿ ಬೆದರಿಕೆ ಹಾಕಿರುವ ಆಡಿಯೋ ಕ್ಲಿಪ್ ವೈರಲ್ ಆಗಿದೆ.
ಬೆಂಗಳೂರು (ಜು.29): ಕನ್ನಡ ಚಿತ್ರರಂಗದಲ್ಲಿ ನಟ ದರ್ಶನ್ ಪ್ರಕರಣ ಸುಪ್ರೀಂ ಕೋರ್ಟ್ ಹಂತ ತಲುಪಿರುವ ಈ ಸಂದರ್ಭದಲ್ಲಿ, ನಟಿ ರಮ್ಯಾ ಮತ್ತು ‘ಒಳ್ಳೆ ಹುಡುಗ’ ಪ್ರಥಮ್ ಇದೀಗ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಜಾಮೀನಿನ ಮೇಲೆ ಹೊರಬಂದಿರುವ ದರ್ಶನ್ ಅಭಿಮಾನಿಗಳ ಕೆಲವರಿಂದ ನಟಿ ರಮ್ಯಾ ಅವರಿಗೆ ಮೆಸೇಜ್, ಕಮೆಂಟ್, ಮತ್ತು ಭಯದ ಧಮ್ಕಿಗಳು ಬಂದಿದ್ದು, ಈ ಹಿನ್ನೆಲೆಯಲ್ಲಿ ರಮ್ಯಾ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಈ ನಡುವೆ, ಇನ್ನೊಬ್ಬ ನಟ ಪ್ರಥಮ್ ಮೇಲೂ ದರ್ಶನ್ ಫ್ಯಾನ್ಸ್ ಡ್ರಾಗರ್ ತೋರಿಸಿ ಬೆದರಿಕೆ ಹಾಕಿರುವ ಸುದ್ದಿ ವೈರಲ್ ಆಗಿದೆ!
ರಮ್ಯಾ – 'ನಾನ್ ಯಾವ ನನ್ನಮಗನಿಗೂ ಹೆದರಲ್ಲ!
ದರ್ಶನ್ ವಿರುದ್ಧದ ಕೊಲೆ ಪ್ರಕರಣದಲ್ಲಿ ನ್ಯಾಯ ಸಿಗಬೇಕು ಎಂದು ನಟಿ ರಮ್ಯಾ ಹಂಚಿಕೊಂಡಿದ್ದ ಪೋಸ್ಟ್‌ಗಳ ಬಳಿಕ, ಅವರ ಮೆಸೆಜ್ ಬಾಕ್ಸ್ ಭಯಾನಕವಾಗಿ ಬದಲಾಗಿದೆ. ನೂರಾರು ಅಶ್ಲೀಲ ಮೆಸೇಜ್‌ಗಳು, ಕಿಡಿಗೇಡಿ ಕಮೆಂಟ್‌ಗಳು, ಬೆದರಿಕೆಗಳೊಂದಿಗೆ ಒತ್ತಡ ಹೇರುತ್ತಿರುವ ಅಭಿಮಾನಿಗಳ ವಿರುದ್ಧ, ರಮ್ಯಾ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. 'ನಾನು ಯಾವ ನನ್ನಮಗನಿಗೂ ಹೆದರಲ್ಲ' ಎಂಬ ಮಾತಿನ ಮೂಲಕ ತಾನು ಹೆದರದ ಹೆಣ್ಣೆಂದು ರಮ್ಯಾ ಘೋಷಿಸಿದ್ದಾರೆ. ರಮ್ಯಾ ಇದೀಗ ಸ್ಯಾಂಡಲ್‌ವುಡ್‌ನಲ್ಲಿ 'ಬೋಲ್ಡ್ ಕ್ವೀನ್' ಎಂಬ ಹೆಸರನ್ನು ಸಂಪಾದಿಸಿದ್ದಾರೆ.
ಡ್ರಾಗರ್ ತೋರಿಸಿದ ಕಿಡಿಗೇಡಿಗಳು:
ಇನ್ನೊಂದೆಡೆ, ದರ್ಶನ್ ಬಂಧನದ ಬಳಿಕ ಬಹಿರಂಗವಾಗಿ ಆತನ ವಿರೋಧವಾಗಿ ಮಾತನಾಡಿದ್ದ 'ಒಳ್ಳೆ ಹುಡುಗ ಖ್ಯಾತಿಯ ನಟ ಪ್ರಥಮ್'ಗೂ ಬೆದರಿಕೆ ಎದುರಾಗಿದೆ. ದೇವಸ್ಥಾನ ಕಾರ್ಯಕ್ರಮವೊಂದಕ್ಕೆ ಹಾಜರಾಗಿದ್ದಾಗ ದರ್ಶನ್ ಅಭಿಮಾನಿ 'ಬೇಕರಿ ರಘು' ಗ್ಯಾಂಗ್‌ನವರು ಪ್ರಥಮ್‌ಗೆ ಡ್ರಾಗರ್ ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಪ್ರಥಮ್ ಈ ವಿಚಾರವನ್ನು ಬಹಿರಂಗಪಡಿಸದಿದ್ದರೂ, ಆಡಿಯೋ ಕ್ಲಿಪ್ ಒಂದು ಲೀಕ್ ಆಗಿದ್ದು, ಇದೀಗ ಪೊಲೀಸರಿಗೆ ದೂರು ದಾಖಲಾಗುವಂತೆ ಮಾಡಿದೆ. ಈ ಕೇಸ್‌ನಲ್ಲಿ ಈಗ ಮತ್ತೊಬ್ಬ ವ್ಯಕ್ತಿ, ಬಿಗ್ ಬಾಸ್ ಖ್ಯಾತಿಯ 'ರಕ್ಷಕ್ ಬುಲೆಟ್' ಹೆಸರು ಕೂಡ ಕೇಳಿಬರುತ್ತಿದೆ.
ದರ್ಶನ್ ಫ್ಯಾನ್ಸ್ ಮಿತಿ ಮೀರುತ್ತಿದ್ದಾರಾ?
ನಟರ ಮೇಲಿನ ಅಭಿಮಾನ ಅತಿಯಾದಾ ಅದು ಅಪಾಯಕಾರಿಯೂ ಆಗಬಲ್ಲದು ಎಂಬುದಕ್ಕೆ ಈ ಘಟನೆಗಳು ಸಾಕ್ಷಿ. ನಟಿ ಪವಿತ್ರಾ ಗೌಡಗೆ ಮೆಸೇಜ್ ಮಾಡಿದ್ದ ರೇಣುಕಾಸ್ವಾಮಿ ಕೊಲೆಯಾದ ಪ್ರಕರಣದಿಂದ ಆರಂಭವಾದ ಸ್ಯಾಂಡಲ್‌ವುಡ್ ಭೀಕರ ಸಂಚಲನ ಇದೀಗ ಮತ್ತಷ್ಟು ಗಂಭೀರ ಸ್ವರೂಪ ಪಡೆದಿದೆ. ಈ ಮಧ್ಯೆ ರಮ್ಯಾ ಪರವಾಗಿ ನಟ ಶಿವರಾಜ್ ಕುಮಾರ್, ಯುವರಾಜ್ ಕುಮಾರ್, ನಟ ಅಹಿಂಸಾ ಚೇತನ್ ಮತ್ತು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಸೇರಿದಂತೆ ಅನೇಕರು ಬೆಂಬಲ ನೀಡಿದ್ದಾರೆ.