ಸಿಎಂ ಸಿದ್ದರಾಮಯ್ಯ ರಾಜಕೀಯ ಉತ್ತರಾಧಿಕಾರಿ: ಮೊಮ್ಮಗ ಧವನ್‌ಗೆ ಪಟ್ಟ ಕಟ್ಟಲು ನಡೆದಿದೆ ತೆರೆಮರೆಯ ರಹಸ್ಯ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಉತ್ತರಾಧಿಕಾರಿ ಯಾರು ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಕುರುಬ ಸಮಾವೇಶದಲ್ಲಿ ಮೊಮ್ಮಗ ಧವನ್ ರಾಕೇಶ್ ಅವರ ಸಕ್ರಿಯ ಪಾಲ್ಗೊಳ್ಳುವಿಕೆ, ಅವರ ರಾಜಕೀಯ ಪ್ರವೇಶದ ಸುಳಿವು ನೀಡಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಸೆ.22): ರಾಜ್ಯ ರಾಜಕಾರಣದಲ್ಲಿ ಸಿಡಿಲ ಸಿದ್ದು ಎಂದೇ ಖ್ಯಾತಿ ಪಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಉತ್ತರಾಧಿಕಾರಿ ಯಾರು ಎಂಬ ಚರ್ಚೆ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಮುಖ್ಯಮಂತ್ರಿಗಳ ಮೊಮ್ಮಗ ಧವನ್ ರಾಕೇಶ್ ಒಂದೊಂದೇ ಹೆಜ್ಜೆಗಳು ರಾಜಕೀಯ ಪ್ರವೇಶದ ಸುಳಿವು ನೀಡುತ್ತಿವೆ. ಅದರಲ್ಲೂ ಇತ್ತೀಚೆಗೆ ನಡೆದ ಕುರುಬ ಸಮಾವೇಶದಲ್ಲಿ ಅವರು ಡೊಳ್ಳು ಬಾರಿಸುವ ಮೂಲಕ ಗಮನ ಸೆಳೆದಿರುವುದು ಈ ಚರ್ಚೆಗೆ ಮತ್ತಷ್ಟು ಇಂಬು ನೀಡಿದೆ.

ಧವನ್‌ಗೆ ಸಿದ್ದರಾಮಯ್ಯ ರಾಜಕೀಯ ಪಾಠ?

ಮೈಸೂರಿನಲ್ಲಿ ನಡೆದ ಕುರುಬ ಸಮಾವೇಶದಲ್ಲಿ ತಾತ ಮತ್ತು ಮೊಮ್ಮಗನ ಬಲ ಪ್ರದರ್ಶನವನ್ನು ರಾಜಕೀಯ ವಲಯ ಸೂಕ್ಷ್ಮವಾಗಿ ಗಮನಿಸಿದೆ. ಸಿದ್ದರಾಮಯ್ಯ ಅವರು ತಮ್ಮ ಮೊಮ್ಮಗನಿಗೆ ರಾಜನೀತಿಯ ಪಾಠ, ಜಾತಿ ಶಕ್ತಿಯ ಮಂತ್ರವನ್ನು ಬೋಧಿಸುತ್ತಿದ್ದಾರಾ ಎಂಬ ಪ್ರಶ್ನೆಗಳು ಎದ್ದಿವೆ. ಮಾಸ್ ಲೀಡರ್ ಆಗಿ ತಮ್ಮದೇ ಕೋಟೆ ಕಟ್ಟಿಕೊಂಡಿರುವ ಸಿದ್ದರಾಮಯ್ಯ ಅವರ ರಾಜಕೀಯ ಉತ್ತರಾಧಿಕಾರಿಯಾಗಿ ಧವನ್ ಹೊರಹೊಮ್ಮುವ ಸಾಧ್ಯತೆಗಳು ಹೆಚ್ಚಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪುತ್ರ ರಾಕೇಶ್ ಕನಸು ಈಡೇರಿಸುತ್ತಾರಾ ಧವನ್?

ಸಿದ್ದರಾಮಯ್ಯ ಅವರ ಹಿರಿಯ ಪುತ್ರ ರಾಕೇಶ್ ಸಿದ್ದರಾಮಯ್ಯ ಬದುಕಿದ್ದಾಗ ಅವರು ಸಿದ್ದು ಅವರ ರಾಜಕೀಯ ಶಕ್ತಿಯಾಗಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಲು ರಾಕೇಶ್ ಅವರ ಅಕಾಲಿಕ ಮರಣವೂ ಒಂದು ಕಾರಣವಾಗಿರಬಹುದೆಂಬ ಮಾತುಗಳು ಇವೆ. ಅಪ್ಪನ ರಾಜಕೀಯ ಅಖಾಡದಲ್ಲಿ ರಾಕೇಶ್‌ಗಿದ್ದ ಹಿಡಿತ ಪ್ರಬಲವಾಗಿತ್ತು. ಈಗ ಸಿದ್ದರಾಮಯ್ಯ ಅವರು ತಮ್ಮ ಮೊಮ್ಮಗ ಧವನ್‌ನಲ್ಲಿ ಮಗ ರಾಕೇಶ್‌ನ್ನು ಕಾಣುತ್ತಿದ್ದಾರೆ. ವರುಣ ಯುದ್ಧದಲ್ಲಿಯೇ ಧವನ್ ರಾಜಕೀಯದ ಆಸೆಯನ್ನು ಹೊರಹಾಕಿದ್ದರು. ಈಗ ವಾರಸ್ದಾರನ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಿದ್ಧವಾಗುತ್ತಿದೆ ಎಂಬ ಚರ್ಚೆಗಳು ನಡೆಯುತ್ತಿವೆ.

ಯತೀಂದ್ರ ಇದ್ದರೂ ಧವನ್ ಹೆಸರು ಮುನ್ನಲೆಗೆ ಬಂದಿದ್ದೇಕೆ?

ಸಿದ್ದರಾಮಯ್ಯ ಅವರ ಇನ್ನೊಬ್ಬ ಪುತ್ರ ಯತೀಂದ್ರ ಸಿದ್ದರಾಮಯ್ಯ ಈಗಾಗಲೇ ರಾಜಕೀಯದಲ್ಲಿದ್ದಾರೆ. ವರುಣ ಶಾಸಕರಾಗಿಯೂ ಆಯ್ಕೆಯಾಗಿದ್ದರು. ಹೀಗಿದ್ದರೂ ಧವನ್ ರಾಕೇಶ್ ಅವರ ಹೆಸರು ಸಿದ್ದರಾಮಯ್ಯ ಉತ್ತರಾಧಿಕಾರಿಯಾಗಿ ಯಾಕೆ ಕೇಳಿಬರುತ್ತಿದೆ ಎಂಬ ಪ್ರಶ್ನೆ ಸಹಜ. ಯತೀಂದ್ರ ರಾಜಕೀಯದಲ್ಲಿದ್ದರೂ, ಯುವ ಸಮುದಾಯದಲ್ಲಿ ಮತ್ತು ಪಕ್ಷದ ವಲಯದಲ್ಲಿ ಧವನ್ ಅವರ ರಾಜಕೀಯ ಪ್ರವೇಶದ ಬಗ್ಗೆ ಹೆಚ್ಚಿನ ಕುತೂಹಲವಿದೆ. ಧವನ್ ಅವರ ಚಟುವಟಿಕೆಗಳು ಯುವಕರ ನಡುವೆ ಹೆಚ್ಚು ಪ್ರಭಾವ ಬೀರುವ ಸಾಧ್ಯತೆಗಳಿದ್ದು, ಇದು ಅವರಿಗೆ ಭವಿಷ್ಯದಲ್ಲಿ ದೊಡ್ಡ ಪಾತ್ರ ನೀಡಲಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. ಒಟ್ಟಿನಲ್ಲಿ, ಸಿದ್ದರಾಮಯ್ಯ ಅವರ ರಾಜಕೀಯ ಸಾಮ್ರಾಜ್ಯದ ಮುಂದಿನ ಉತ್ತರಾಧಿಕಾರಿ ಯಾರು ಎಂಬ ಚರ್ಚೆ ಇನ್ನು ಮುಂದೆಯೂ ಗಂಭೀರವಾಗಿ ಮುಂದುವರಿಯಲಿದೆ.

Related Video