ಬಿಜೆಪಿ ಸೋಲಿನ ಹೊಣೆಹೊತ್ತು ರಾಜ್ಯಾಧ್ಯಕ್ಷ ಕಟೀಲ್ ರಾಜಿನಾಮೆ ಕೊಡಲಿ: ರೇಣುಕಾಚಾರ್ಯ ಆಗ್ರಹ
ರಾಜ್ಯದಲ್ಲಿ ಬಿಜೆಪಿ ಸೋಲಿನ ನೈತಿಕ ಹೊಣೆ ಹೊತ್ತು ರಾಜ್ಯಾಧ್ಯಕ್ಷರು (ನಳೀನ್ ಕುಮಾರ್ ಕಟೀಲ್) ರಾಜೀನಾಮೆ ನೀಡಬೇಕು ಎಂದು ಮಾಜಿ ಶಾಸಕ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.
ದಾವಣಗೆರೆ (ಜೂ.28): ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಆದ್ದರಿಂದ ಬಿಜೆಪಿ ರಾಜ್ಯಾಧ್ಯಕ್ಷರು (ನಳೀನ್ ಕುಮಾರ್ ಕಟೀಲ್) ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಮಾಜಿ ಶಾಸಕ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.
ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಸೋತಿರುವ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸೋಲಿನ ಬೆನ್ನಲ್ಲೇ ಸ್ವಪಕ್ಷೀಯರ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಬುಧವಾರ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರು ಯಾರ ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತಾರೆ. ಯಡಿಯೂರಪ್ಪನವರ ಪರವಾಗಿ ಮಾತನಾಡಿದರೆ ಅದು ಪಕ್ಷ ವಿರೋಧಿಯಾ? ಯಡಿಯೂರಪ್ಪ ನವರ ವಿರುದ್ಧವಾಗಿ ಮಾತನಾಡಿದರೆ ಅದು ಪಕ್ಷದ ಚಟುವಟಿಕೆಯಾ? ಎಂದು ಹೇಳಿದ್ದಾರೆ.
ಯಡಿಯೂರಪ್ಪ ಒಬ್ಬ ಹುಟ್ಟು ಹೋರಾಟಗಾರ. ನೂರಾರು ಹೋರಾಟಗಳನ್ನು ಮಾಡಿ ಜೈಲಿಗೆ ಹೋಗಿಬಂದವರು. ಅನೇಕ ಬಾರಿ ದೆಹಲಿಯಲ್ಲಿ ಹೇಳಿಬಂದೆ. ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪ್ರಸ್ತುತ ವಿದ್ಯಮಾನಗಳ ಹತ್ತಾರು ಬಾರಿ ಹೇಳಿದ್ದೆನೆ. ಬಸವರಾಜ್ ಬೊಮ್ಮಾಯಿ ಕೈಗಳನ್ನು ಕಟ್ಟಿ ಹಾಕಿ ಅಧಿಕಾರ ಮಾಡಿಸಿದ್ದೀರಿ. ರೇಣುಕಾಚಾರ್ಯ ಸೋತರು ಎಂಬ ಹತಾಶೆಯಿಂದ ಮಾತನಾಡುತ್ತಿಲ್ಲ. ನಾನು ಸೋತಿಲ್ಲ, ಜನ 75 ಸಾವಿರ ಮತಗಳನ್ನು ಹಾಕಿದ್ದಾರೆ. ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಮೋದಿಯವರು ಪ್ರಧಾನಿಯಾಗಬೇಕು. ಮತ್ತೊಮ್ಮೆ ಆತ್ಮವಲೋಕನ ನಡೆದು ಬಿಜೆಪಿ ಹೊಸ ಹುಟ್ಟು ಪಡೆಯಬೇಕು ಎಂದು ಹೇಳಿದರು.