ಆರ್.ಆರ್. ನಗರದಲ್ಲಿ ಕಳ್ಳರು, ಕನಕಪುರದಲ್ಲಿ ಸತ್ಯ ಹರಿಶ್ಚಂದ್ರರು ಇದ್ದಾರಾ? ಡಿಕೆಶಿಗೆ ಶಾಸಕ ಮುನಿರತ್ನ ತಿರುಗೇಟು
ಬೆಂಗಳೂರಿನ ಆರ್.ಆರ್. ನಗರದಲ್ಲಿ ಮಾತ್ರವೇ ಕಳ್ಳರಿದ್ದಾರಾ? ಕನಕಪುರದಲ್ಲಿ ಸತ್ಯ ಹರಿಶ್ಚಂದ್ರರು ಇದ್ದಾರಾ? ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವ ಕುಮಾರ್ ಅವರ ವಿರುದ್ಧ ಶಾಸಕ ಮುನಿರತ್ನ ತಿರುಗೇಟು ನೀಡಿದ್ದಾರೆ.
ಬೆಂಗಳೂರು (ಆ.16): ಬೆಂಗಳೂರಿನ ಆರ್.ಆರ್. ನಗರದಲ್ಲಿ ಮಾತ್ರವೇ ಕಳ್ಳರಿದ್ದಾರಾ? ಕನಕಪುರದಲ್ಲಿ ಸತ್ಯ ಹರಿಶ್ಚಂದ್ರರು ಇದ್ದಾರಾ? ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವ ಕುಮಾರ್ ಅವರ ವಿರುದ್ಧ ಶಾಸಕ ಮುನಿರತ್ನ ತಿರುಗೇಟು ನೀಡಿದ್ದಾರೆ.
ವೈಯಕ್ತಿಕವಾಗಿ ಡಿ.ಕೆ. ಸುರೇಶ್, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಜೊತೆ ಯಾವುದೇ ದ್ವೇಷ ಇಲ್ಲ ಅಧಿಕಾರಕ್ಕೋಸ್ಕರ ನಾನು ಪಕ್ಷ ಬಿಟ್ಟು ಹೋಗಲ್ಲ. ನಾನು ವಿಪಕ್ಷದಲ್ಲಿಯೇ ಇರುತ್ತೇನೆ. ಬಿಜೆಪಿಯಲ್ಲಿ ಬಹಳ ಗೌರವಯುತವಾಗಿ ನೋಡಿಕೊಳ್ಳುತ್ತಿದ್ದಾರೆ. ನಳೀನ್ ಕುಮಾರ್ ಕಟೀಲ್ ಗೌರವದಿಂದ ಮಾತಾಡಿಸುತ್ತಾರೆ, ಎಂದೂ ಏಕವಚನದಿಂದ ಮಾತಾಡಿಸಿಲ್ಲ. ನನ್ನ ಜೀವನದ ಗುರು, ರಾಜಕೀಯ ಗುರು ಬಿ.ಕೆ. ಹರಿಪ್ರಸಾದ್ ಅವರು. ಅದು ರಾಜಕೀಯ ಕಾರಣ ಅಲ್ಲ, ಅದು ನಮ್ಮ ಊರಿನ ಸಂಬಂಧವಾಗಿದೆ. ನನ್ನ ಮುಂದಿನ ಜೀವನದ ಆಧಾರ ಬಿಜೆಪಿ ಚಿಹ್ನೆಯಾಗಿದೆ. ಬಿಜೆಪಿ ಬಗ್ಗೆ ನಂಬಿಕೆ, ಗೌರವ ಇದೆ.
ಬಿಜೆಪಿ ಶಾಸಕರ ಎಲ್ಲ ಕಾಮಗಾರಿಗಳನ್ನೂ ತನಿಖೆಗಳನ್ನು, ಆರೋಪಗಳನ್ನು ಮಾಡಲಿ. ಒಂದು ವೇಲೆ ನನ್ನ ಶಾಸಕ ಸ್ಥಾನದಿಂದ ತೆಗಿಯಬೇಕು ಎಂಬ ಆಲೋಚನೆ ಇದ್ದರೆ ಅದನ್ನೂ ಮಾಡಲಿ. ಒಂದು ವೇಳೆ ಯಾವುದಾದರೂ ತನಿಖೆಯಲ್ಲಿ ತಪ್ಪಿತಸ್ಥನಾಗಿ ಮಾಡಿ ಜೈಲಿಗೆ ಕಳಿಸಿದರೂ ಕಳಿಸಲಿ. ಅವರ ಕೈಯಲ್ಲಿ ಅಧಿಕಾರ ಇದೆ, ಯಾವುದನ್ನಾದರೂ ಮಾಡಲಿ. ಬೆಂಗಳೂರಿನಲ್ಲಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳಿವೆ. ಎಲ್ಲ ಕ್ಷೇತ್ರಗಳಲ್ಲಿ ಆಗಿದ್ದು, ನನ್ನ ಕ್ಷೇತ್ರದಲ್ಲಿಯೂ ಆಗುತ್ತದೆ. 28 ಕ್ಷೇತ್ರಗಳಲ್ಲಿ ಏನಾಗುತ್ತದೆಯೋ ರಾಜರಾಜೇಶ್ವರಿ ನಗರದಲ್ಲಿಯೂ ಆಗುತ್ತದೆ. ಒಂದು ವೇಳೆ ಆರ್.ಆರ್. ನಗರದಲ್ಲಿ ಮಾತ್ರ ಕಳ್ಳರಿದ್ದಾರೆ ಎಂಬ ತನಿಖೆ ಮಾಡಿದರೆ ಮುಂದಿನ ದಿನಗಳಲ್ಲಿ ಯಾವ ತನಿಖೆಗೆ ಕೊಡಬೇಕೋ ಅದು ನನಗೂ ಗೊತ್ತಿದೆ.