ನೀನು ಸತ್ಯವಂತ, ರಾಮಚಂದ್ರನ 2ನೇ ಅವತಾರ, ಧರ್ಮಸ್ಥಳಕ್ಕೆ ಬಾ, ಮಂಜುನಾಥನ ಮೇಲೆ ಆಣೆ ಮಾಡು

ವಿಧಾನಪರಿಷತ್‌ನಲ್ಲಿ ನನ್ನ ವಿರುದ್ಧ ಆಕ್ಷೇಪಾರ್ಹ ಪದ ಬಳಸಿಲ್ಲ ಎಂದಾದರೆ ಧರ್ಮಸ್ಥಳ ಮಂಜುನಾಥೇಶ್ವರನ ಸನ್ನಿಧಾನಕ್ಕೆ ಬನ್ನಿ. ನಾನೂ ಕುಟುಂಬ ಸಮೇತ ಬರುವೆ. ಆಣೆ- ಪ್ರಮಾಣ ಮಾಡೋಣ ಎಂದು ಬಿಜೆಪಿ ಶಾಸಕ ಸಿ.ಟಿ. ರವಿ ಅವರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ನೇರವಾಗಿ ಸವಾಲು ಹಾಕಿದ್ದಾರೆ. 

First Published Dec 25, 2024, 9:03 AM IST | Last Updated Dec 25, 2024, 9:03 AM IST

ಬೆಳಗಾವಿ (ಡಿ.25): ವಿಧಾನಪರಿಷತ್‌ನಲ್ಲಿ ನನ್ನ ವಿರುದ್ಧ ಆಕ್ಷೇಪಾರ್ಹ ಪದ ಬಳಸಿಲ್ಲ ಎಂದಾದರೆ ಧರ್ಮಸ್ಥಳ ಮಂಜುನಾಥೇಶ್ವರನ ಸನ್ನಿಧಾನಕ್ಕೆ ಬನ್ನಿ. ನಾನೂ ಕುಟುಂಬ ಸಮೇತ ಬರುವೆ. ಆಣೆ- ಪ್ರಮಾಣ ಮಾಡೋಣ ಎಂದು ಬಿಜೆಪಿ ಶಾಸಕ ಸಿ.ಟಿ. ರವಿ ಅವರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ನೇರವಾಗಿ ಸವಾಲು ಹಾಕಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಯಾರಿಗೂ ಸವಾಲು ಹಾಕಲ್ಲ, ಜವಾಬ್ ಕೇಳುತ್ತಿಲ್ಲ. ಈ ಪ್ರಕರಣದಲ್ಲಿ ರಾಜಕೀಯ ಸ್ಟಂಟ್ ಬೇಕಿಲ್ಲ. ಮಾಡಬಾರದ್ದನ್ನು ಮಾಡಿ ಬಿಜೆಪಿ ನಾಯಕರು ವಿಜೃಂಭಿಸುತ್ತಿದ್ದಾರೆ. 

ಆಡಬಾರದ್ದನ್ನು ಆಡಿರುವ ಸಿ.ಟಿ. ರವಿ ಹೂವು, ಹಾರ, ತುರಾಯಿ ಹಾಕಿಸಿಕೊಳ್ತಿದ್ದಾರೆ, ಪಟಾಕಿ ಹೊಡಿಸಿಕೊಳ್ತಿದ್ದಾರೆ. ಹಾಗಾಗಿ ಧರ್ಮಸ್ಥಳಕ್ಕೆ ಆಹ್ವಾನಿಸುತ್ತಿದ್ದೇನೆ ಎಂದರು. ಧರ್ಮಸ್ಥಳ ಕ್ಷೇತ್ರದ ಮಂಜುನಾಥನನ್ನು ನಾನು ನಂಬುತ್ತೇನೆ. ದೇವಾನು ದೇವತೆಗಳನ್ನೂ ನಾನು ನಂಬುತ್ತೇನೆ. ಸಿ‌.ಟಿ. ರವಿ ಅವರ ಚಿಕ್ಕಮಗಳೂರಿಗೆ ಧರ್ಮಸ್ಥಳ ತುಂಬಾ ಹತ್ತಿರವಿದೆ. ಅವರೂ ದೇವರನ್ನು ನಂಬುತ್ತಾರೆ. ದತ್ತಮಾಲೆ ಹಾಕುತ್ತಾರೆ. ದತ್ತ ಪೀಠಕ್ಕೆ ಹೋಗುತ್ತಾರೆ. ಆ ಪದ ಬಳಸಿಲ್ಲ ಎಂದರೆ ಕುಟುಂಬ ಸಮೇತ ಧರ್ಮಸ್ಥಳಕ್ಕೆ ಬನ್ನಿ, ನಾನೂ ಬರುತ್ತೇನೆ ಎಂದು ಹೆಬ್ಬಾಳಕರ ಹೇಳಿದರು.