Karnataka Congress Politics: ಸಿದ್ದರಾಮಯ್ಯ ಆಪ್ತ ಆಶೋಕ ಪಟ್ಟಣ್‌ಗೆ ಕೆಪಿಸಿಸಿ ಶಿಸ್ತು ಸಮಿತಿ ನೋಟಿಸ್!
*'ಕೈ' ಪಾಳಯದಲ್ಲಿ ಸಿದ್ದು Vs ಡಿಕೆಶಿ ಅಂತರ್ಯುದ್ಧ
*ಡಿಕೆಶಿ ಬಗ್ಗೆ ಗುಸು ಗುಸು: ಸಿದ್ದು ಆಪ್ತ ಪಟ್ಟಣ್‌ಗೆ ಕೆಪಿಸಿಸಿ ನೋಟಿಸ್
*ಕಾರಣ ಕೇಳಿದ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ಡಾ.ಕೆ.ರೆಹಮಾನ್
ಬೆಂಗಳೂರು (ಫೆ. 02): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D K Shivakumar) ಅವರ ವಿರುದ್ಧ ಮಾತನಾಡಿರುವ ವಿಡಿಯೋಗೆ ಸಂಬಂಧಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (siddaramaiah) ಅವರ ಆಪ್ತ, ಮಾಜಿ ಶಾಸಕ ಅಶೋಕ್ ಪಟ್ಟಣ್ ( Ashok Pattanshetti) ಅವರಿಗೆ ಸಮುಜಾಯಿಷಿ ಕೇಳಿ ಕಾಂಗ್ರೆಸ್ ಪಕ್ಷ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ಡಾ.ಕೆ.ರೆಹಮಾನ್ ಖಾನ್ ಅವರು, ಅಶೋಕ್ ಪಟ್ಟಣ್ ಅವರಿಗೆ ಅಶಿಸ್ತಿನ ನಡವಳಿಕೆಗಾಗಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಇದನ್ನೂ ಓದಿ: Karnataka Politcs: ನನ್ನ ಹುದ್ದೆಗೂ, ಇಬ್ರಾಹಿಂ ವಿಚಾರಕ್ಕೂ ಸಂಬಂಧ ಇಲ್ಲ: ಖಾದರ್
ಪಕ್ಷದ ನಾಯಕರೂ, ಅನುಭವಿ ಶಾಸಕರೂ ಆಗಿ ತಿಳಿದಿರುವವರೂ ಆದ ತಾವು ಖಾಸಗಿಯಾಗಿ ಮಾತನಾಡುವಾಗ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಘನತೆ-ಗೌರವಗಳಿಗೆ ಕುಂದುಂಟಾಗುವಂತೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಅಪಾರ ಹಾನಿಯಾಗುವಂಥ ವಿಚಾರಗಳನ್ನು ಮಾತನಾಡಿರುವುದು ದೃಶ್ಯ ಮಾಧ್ಯಮಗಳಲ್ಲಿ ಹಾಗೂ ಪತ್ರಿಕಾ ಮಾಧ್ಯಮಗಳಲ್ಲಿ ವರದಿಯಾಗಿದೆ. ತಾವು ಈ ಸಂದರ್ಭದಲ್ಲಿ ಮಾತನಾಡಿಕೊಂಡಿರುವ ವಿಚಾರಗಳು ಆಧಾರರಹಿತವಾಗಿದ್ದು, ಕಾಂಗ್ರೆಸ್ ಪಕ್ಷವು ಇದನ್ನು ಸಂಪೂರ್ಣವಾಗಿ ಖಂಡಿಸುತ್ತದೆ ಮತ್ತು ನಿರಾಕರಿಸುತ್ತದೆ. ತಮ್ಮ ಈ ವರ್ತನೆಯಿಂದ ಪಕ್ಷದ ಘನತೆ ಗೌರವಗಳಿಗೆ ಕುಂದುಂಟಾಗಿದೆ. ಜತೆಗೆ ಅದು ಪಕ್ಷ ವಿರೋಧಿ ಚಟುವಟಿಕೆಯೂ ಆಗಿದೆ. ಈ ಹಿನ್ನೆಲೆಯಲ್ಲಿ ತಾವು ತಮ್ಮ ನಡವಳಿಕೆ ಬಗ್ಗೆ ಏಳು ದಿನಗಳೊಳಗಾಗಿ ಸಮಜಾಯಿಷಿ ನೀಡುವಂತೆ ನೋಟಿಸ್‌ನಲ್ಲಿ ಸೂಚಿಸಿದ್ದಾರೆ.