
ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಗಾದಿಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಜಟಾಪಟಿ ತೀವ್ರಗೊಂಡಿದೆ. ಸಿದ್ದು ಆಪ್ತ ಸತೀಶ್ ಜಾರಕಿಹೊಳಿ ಜೊತೆ ಡಿಕೆಶಿ ನಡೆಸಿದ ಮಧ್ಯರಾತ್ರಿ ರಹಸ್ಯ ಸಭೆಯು ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.
ಬೆಂಗಳೂರು (ನ.27): ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಗಾದಿಯ ವಿಚಾರವಾಗಿ 'ಹಠವಾದಿ' ಸಿದ್ದರಾಮಯ್ಯ ಮತ್ತು 'ಛಲಗಾರ' ಡಿ.ಕೆ. ಶಿವಕುಮಾರ್ ನಡುವಿನ 'ಜೋಡೆತ್ತುಗಳ ಜಲ್ಲಿಕಟ್ಟು' ಮುಂದುವರಿದಿದೆ. ಅಧಿಕಾರ ಹಂಚಿಕೆಯ ಸೂತ್ರ ಮತ್ತು 'ಕೊಟ್ಟ ಮಾತು' ಎಂಬ ವಿಚಾರಗಳು ದಿನೇ ದಿನೇ ರಾಜಕೀಯ ರೋಚಕತೆಯನ್ನು ಹೆಚ್ಚಿಸುತ್ತಿವೆ. ಇದರ ಭಾಗವಾಗಿಯೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಡರಾತ್ರಿ ಹಾಗೂ ಮಧ್ಯಾಹ್ನದ ವೇಳೆ ನಡೆಸಿದ ರಹಸ್ಯ ಮತ್ತು ಬಹಿರಂಗ ಭೇಟಿಗಳು ರಾಜಕೀಯ ವಲಯದಲ್ಲಿ ಹೊಸ ಲೆಕ್ಕಾಚಾರ ಹುಟ್ಟುಹಾಕಿವೆ.
ಬಂಡೆ ಡೈರೆಕ್ಟ್ ಹಿಟ್: ಮಧ್ಯರಾತ್ರಿ ಭೇಟಿಯ ಗುಟ್ಟೇನು?
ಮುಖ್ಯಮಂತ್ರಿ ಗಾದಿಯ ಮೇಲಿನ 'ಕಿಚ್ಚು' ಹೆಚ್ಚಾಗುತ್ತಿರುವಾಗಲೇ, ಡಿ.ಕೆ. ಶಿವಕುಮಾರ್ ಅವರು ಬುಧವಾರ ಮಧ್ಯರಾತ್ರಿ ನಡೆಸಿರುವ ರಾಜಕೀಯ ಚಟುವಟಿಕೆಗಳು ಗಮನ ಸೆಳೆದಿವೆ. ಹಿರಿಯ ಸಚಿವ ಮತ್ತು ಸಿದ್ದರಾಮಯ್ಯ ಅವರಿಗೆ ಆಪ್ತರೆಂದು ಗುರುತಿಸಿಕೊಂಡಿರುವ ಸತೀಶ್ ಜಾರಕಿಹೊಳಿ ಅವರ ಜೊತೆಗೆ ಮಧ್ಯರಾತ್ರಿಯಲ್ಲಿ ಮೀಟಿಂಗ್ ನಡೆಸುವ ಮೂಲಕ ಡಿ.ಕೆ. ಶಿವಕುಮಾರ್ ಹೊಸ ದಾಳ ಉರುಳಿಸಿದ್ದಾರೆ. ಸಿದ್ದು ಅತ್ಯಾಪ್ತರನ್ನೇ ಸೆಳೆಯಲು ಚಾಣಾಕ್ಷ 'ಬಂಡೆ' ಮುಂದಾಗಿದ್ದು, ಈ ರಹಸ್ಯ ಭೇಟಿಯ ಗುಟ್ಟೇನು ಎಂಬ ಚರ್ಚೆಗಳು ರಾಜಕೀಯ ಅಂಗಳದಲ್ಲಿ ಜೋರಾಗಿವೆ.
ಊಟದ ಸಭೆಯಲ್ಲಿ ಬಿಗ್ ಟ್ವಿಸ್ಟ್ ಕೊಟ್ಟ ಬೆಳಗಾವಿ ಸಾಹುಕಾರ
ಒಂದೆಡೆ ಮಧ್ಯರಾತ್ರಿ ಮೀಟಿಂಗ್ ನಡೆದರೆ, ಬುಧವಾರ ಮಧ್ಯಾಹ್ನದ ವೇಳೆಗೆ ಮತ್ತೊಂದು ಬಿಗ್ ಟ್ವಿಸ್ಟ್ ಸೃಷ್ಟಿಯಾಗಿದೆ. ಬೆಳಗಾವಿ ರಾಜಕಾರಣದ ಪ್ರಭಾವಿ ನಾಯಕರಾದ ಸತೀಶ್ ಜಾರಕಿಹೊಳಿ ಅವರು ಲಂಚ್ ಮೀಟಿಂಗ್ ಹೆಸರಲ್ಲಿ ಮತ್ತೊಮ್ಮೆ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದಾರೆ. ಊಟದ ನೆಪದಲ್ಲಿ ನಡೆದ ಈ ಸಭೆಯಲ್ಲಿ ಯಾವ ರಾಜಕೀಯ ಲೆಕ್ಕಾಚಾರಗಳನ್ನು ಹಂಚಿಕೊಳ್ಳಲಾಯಿತು ಎಂಬುದು ಕುತೂಹಲ ಮೂಡಿಸಿದೆ. ಡಿ.ಕೆ. ಶಿವಕುಮಾರ್ ಅವರು ಹೊಂದಾಣಿಕೆಯ ಅಸ್ತ್ರ ಹಿಡಿದು, ಸಿದ್ದರಾಮಯ್ಯ ಅವರ ಪಾಳಯದ ಶಾಸಕರ ವಿಶ್ವಾಸ ಗಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಟಗರು ಬತ್ತಳಿಕೆ VS ಬಿಜೆಪಿ ಬಾಂಬ್
ಇತ್ತ, ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಚದುರಂಗದಾಟಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 'ಪಟ್ಟ' ಗಣಿತದಲ್ಲಿ ಲಾಭ-ನಷ್ಟದ ಲೆಕ್ಕ ಶುರು ಮಾಡಿದ್ದು, 'ಟಗರು ಬತ್ತಳಿಕೆ'ಯ ಸರ್ವ ಅಸ್ತ್ರಗಳು ಬಳಕೆಯಾಗುತ್ತಿವೆ. ಈ ಪಟ್ಟದ ಕಾದಾಟದ ಮಧ್ಯೆ, ಬಿಜೆಪಿ ನಾಯಕರು ಹೊಸ ಬಾಂಬ್ ಒಂದನ್ನು ಸಿಡಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಬಿಜೆಪಿಗೆ ಬಾಹ್ಯ ಬೆಂಬಲ ನೀಡಬಹುದೇ ಎಂಬಂತಹ ಹೇಳಿಕೆಗಳನ್ನು ಬಿಜೆಪಿ ನಾಯಕರು ನೀಡಿದ್ದು, ಈ ಮಾತಿಗೆ 'ಬಂಡೆ' ಕೆರಳಿ ಕೆಂಡವಾಗಿದ್ದಾರೆ. ವಿರೋಧ ಪಕ್ಷದ ಈ ಹೇಳಿಕೆಗಳು, ಆಡಳಿತ ಪಕ್ಷದಲ್ಲಿನ ಗೊಂದಲವನ್ನು ಮತ್ತಷ್ಟು ಹೆಚ್ಚಿಸಲು ಹೊರಟಿವೆ.